ದುಬೈನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ 264 ರನ್ ಗಳಿಸಿತು, ಇದಕ್ಕೆ ಪ್ರತಿಯಾಗಿ ಭಾರತ 4 ವಿಕೆಟ್ ಕಳೆದುಕೊಂಡು ಜಯಗಳಿಸಿತು. ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಮಾಡಿದರು. ಈ ಪಂದ್ಯವನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ 66.9 ಕೋಟಿ ಜನರು ವೀಕ್ಷಿಸಿ ದಾಖಲೆ ನಿರ್ಮಿಸಿದ್ದಾರೆ. ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆ ಯೋಜನೆಗಳ ಬಗ್ಗೆಯೂ ಮಾಹಿತಿ ಲಭ್ಯವಿದೆ.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಮೂಲಕ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿನ ಲೆಕ್ಕಾಚಾರ ಚುಕ್ತಾ ಮಾಡಿದೆ. ಕಳೆದೊಂದು ದಶಕದಿಂದ ಐಸಿಸಿ ನಾಕೌಟ್ ಟೂರ್ನಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಎದುರು ಮುಗ್ಗರಿಸುತ್ತಲೇ ಬಂದಿತ್ತು. ಹೀಗಾಗಿ ಮಂಗಳವಾರ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಸೆಮಿಫೈನಲ್ ಪಂದ್ಯವು ಸಾಕಷ್ಟು ರೋಚಕತೆಗೆ ಕಾರಣವಾಗಿತ್ತು. ಇನ್ನು ಈ ಕಾರಣಕ್ಕಾಗಿಯೇ ಈ ಹೈವೋಲ್ಟೇಜ್ ಪಂದ್ಯವನ್ನು ಡಿಜಿಟಲ್ ಸ್ಟ್ರೀಮಿಂಗ್‌ನಲ್ಲಿ ದಾಖಲೆಯ ಮಂದಿ ವೀಕ್ಷಿಸಿದ್ದಾರೆ.

ಹೌದು, ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭಿಕ ಆಘಾತದ ಹೊರತಾಗಿಯೂ ನಾಯಕ ಸ್ಟೀವ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಸೀಸ್ ತಂಡವು 264 ರನ್‌ ಗಳಿಸ ಸರ್ವಪತನ ಕಂಡಿತು. ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿ ಭಾರತದ ಪರ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ನೆರವಿನಿಂದ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಭರ್ಜರಿ ಗೆಲುವು ಸಾಧಿಸಿತು. 

ಒಟಿಟಿ ಪ್ಲಾಟ್‌ಫಾರಂನಲ್ಲಿ ಹೊಸ ದಾಖಲೆ ಬರೆದ ಪಂದ್ಯ:

ಇನ್ನು ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ಜಿಯೋ ಹಾಟ್‌ಸ್ಟಾರ್ ಓಟಿಟಿ ಪ್ಲಾಟ್‌ಫಾರಂನಲ್ಲಿ ದಾಖಲೆಯ ಪ್ರಮಾಣದಲ್ಲಿ ವೀಕ್ಷಿಸಿದ್ದಾರೆ. ಮೊದಲ ಇನ್ನಿಂಗ್ಸ್‌ ಅನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ 66.9 ಕೋಟಿ(669 ಮಿಲಿಯನ್) ಮಂದಿ ಲೈವ್ ಸ್ಟ್ರೀಮಿಂಗ್‌ನಲ್ಲಿ ವೀಕ್ಷಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಕೆಲ ತಿಂಗಳುಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 19.25 ಕೋಟಿ(192.2) ಮಂದಿ ವೀಕ್ಷಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದರು. ಇದೀಗ ಬಿಸಿನೆಸ್ ಸ್ಟ್ಯಾಂಡರ್ಡ್‌ ವರದಿ ಪ್ರಕಾರ, ವೀಕ್ಷಣೆಯ ಪ್ರಮಾಣದಲ್ಲಿ ಶೇಕಡ 76 ರಷ್ಟು ಹೆಚ್ಚಳವಾಗಿದೆ.

ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಗ್ರೂಪ್ ಹಂತದ ಕೊನೆಯ ಪಂದ್ಯವನ್ನು 40 ಕೋಟಿ(400 ಮಿಲಿಯನ್) ಮಂದಿ ವೀಕ್ಷಿಸಿದ್ದರು. ಮಾರ್ಚ್ 02ರಂದು ನಡೆದ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ 44 ಅಂತರದ ಗೆಲುವು ದಾಖಲಿಸುವ ಮೂಲಕ ಅಜೇಯವಾಗಿಯೇ ಸೆಮೀಸ್‌ಗೆ ಲಗ್ಗೆಯಿಟ್ಟಿತ್ತು. ಇನ್ನು ಇದಕ್ಕೂ ಮೊದಲು ಫೆಬ್ರವರಿ 23ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವನ್ನು 60.2 ಕೋಟಿ(602 ಮಿಲಿಯನ್) ಮಂದಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಿದ್ದರು. 

ಜಿಯೋ ಹಾಟ್‌ಸ್ಟಾರ್ ಬಗ್ಗೆ:

ಜಿಯೋ ಹಾಟ್‌ಸ್ಟಾರ್ ಎರಡು ಬಗೆಯ ಸಬ್‌ಸ್ಕ್ರಿಷನ್ ಮೂಲಕ ತನ್ನ ಸೇವೆಯನ್ನು ಒದಗಿಸುತ್ತಾ ಬಂದಿದೆ. ಜಾಹಿರಾತು ಸಹಿತ ಮೂರು ತಿಂಗಳ ಚಂದಾದಾರಿಕೆ ಪಡೆಯಲು 149 ರುಪಾಯಿ ಪಾವತಿಸಬೇಕಾಗುತ್ತದೆ. ಇನ್ನು 499 ರುಪಾಯಿ ನೀಡಿ ಜಾಹಿರಾತು ಸಹಿತ ವಾರ್ಷಿಕ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. 

ಜಿಯೋ ಹಾಟ್‌ಸ್ಟಾರ್ ಪ್ರೀಮಿಯಂ ಪ್ಲಾನ್‌ಗಳು ತಿಂಗಳಿಗೆ ₹299, ಮೂರು ತಿಂಗಳಿಗೆ ₹499 ಹಾಗೂ ವಾರ್ಷಿಕ ₹1499 ರುಪಾಯಿಗೆ ಲಭ್ಯವಿವೆ. ಈ ಪ್ರೀಮಿಯಂ ಪ್ಲಾನ್‌ನಲ್ಲಿ ಜಾಹಿರಾತು ರಹಿತ ಲೈವ್ ಟೆಲಿಕಾಸ್ಟ್, ಸಿನಿಮಾ, ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.