ಕೇವಲ 2.2 ಕೋಟಿ ರುಪಾಯಿಗೆ ಸ್ಟೀವ್ ಸ್ಮಿತ್ ತಮ್ಮ ಪತ್ನಿ ಹಾಗೂ ಕುಟುಂಬ ತೊರೆದು ಐಪಿಎಲ್ ಆಡೋದು ಅನುಮಾನ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಫೆ.21): ಆಸ್ಪ್ರೇಲಿಯಾದ ಸ್ಟೀವ್ ಸ್ಮಿತ್ ಕೇವಲ 2.2 ಕೋಟಿ ರುಪಾಯಿಗೆ 2021ರ ಐಪಿಎಲ್‌ನಲ್ಲಿ ಆಡುವುದು ಅನುಮಾನ. ಇಷ್ಟೊಂದು ಕಡಿಮೆ ಮೊತ್ತಕ್ಕಾಗಿ 11 ವಾರಗಳ ಕಾಲ ಅವರು ತಮ್ಮ ಜೊತೆಗಾರ್ತಿ ಹಾಗೂ ಕುಟುಂಬವನ್ನು ಬಿಟ್ಟಿರುವುದು ಅಸಾಧ್ಯ ಎನಿಸುತ್ತಿದೆ ಎಂದು ಆಸ್ಪ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಸ್ಮಿತ್ 2.2 ಕೋಟಿ ರು.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. 2020ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಸ್ಟೀವ್ ಸ್ಮಿತ್‌ಗೆ 12.5 ಕೋಟಿ ರು. ಪಾವತಿಸಿತ್ತು. ‘ಕಳೆದ ವರ್ಷ ಸಿಕ್ಕಿದ್ದ ಮೊತ್ತಕ್ಕೆ ಹೋಲಿಸಿದರೆ ಈ ವರ್ಷ ಬಹಳ ಕಡಿಮೆ ಆಯ್ತು. ಸ್ಮಿತ್ ಐಪಿಎಲ್‌ಗೂ ಮುನ್ನ ಸ್ನಾಯು ಸೆಳೆತಕ್ಕೆ ಒಳಗಾಗಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದರೆ ಅಚ್ಚರಿಯಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
2021 IPL ಹರಾಜಿನ ಮೊದಲ ಖರೀದಿ ಸ್ಟೀವ್ ಸ್ಮಿತ್; ಯಾವ ತಂಡದ ಪಾಲು?
2018ರ ಆಟಗಾರರ ಹರಾಜಿಗೂ ಮುನ್ನ ಸ್ಟೀವ್ ಸ್ಮಿತ್‌ರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 12.5 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಆದರೆ 2020ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸ್ಮಿತ್ 14 ಪಂದ್ಯಗಳನ್ನಾಡಿ 25.91ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಅರ್ಧಶತಕ ಸಹಿತ 311 ರನ್ ಬಾರಿಸಿದ್ದರು.
