Asianet Suvarna News Asianet Suvarna News

Bhanuka Rajapaksa Retires: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ 2 ವರ್ಷದಲ್ಲೇ ಭನುಕ ನಿವೃತ್ತಿ!

* ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಭನುಕ ರಾಜಪಕ್ಸಾ

* ಕೌಟುಂಬಿಕ ಕಾರಣ ನೀಡಿ ಕ್ರಿಕೆಟ್‌ಗೆ ವಿದಾಯ ಹೇಳಿದ ಲಂಕಾ ಬ್ಯಾಟರ್‌

* 2019ರಲ್ಲಿ ಭಾರತ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಆಟಗಾರ

Sri Lankan Cricketer Bhanuka Rajapaksa announces international retirement kvn
Author
Bengaluru, First Published Jan 6, 2022, 10:13 AM IST

ಕೊಲಂಬೋ(ಜ.06): ಶ್ರೀಲಂಕಾ ಕ್ರಿಕೆಟಿಗ ಭನುಕ ರಾಜಪಕ್ಸಾ (Bhanuka Rajapaksa) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ (Cricket Retirement) ಘೋಷಿಸಿದ್ದಾರೆ. 2019ರಲ್ಲಿ ಅಂತಾರಾಷ್ಟ್ರೀಯ ಟಿ20ಗೆ ಪಾದಾರ್ಪಣೆ ಮಾಡಿದ್ದ ಅವರು, 6 ತಿಂಗಳ ಹಿಂದಷ್ಟೇ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಕಳೆದ ನವೆಂಬರ್‌ನಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್‌ನಲ್ಲೂ ಅವರು ಆಡಿದ್ದರು. ಇದೀಗ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ಗುಡ್‌ ಬೈ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

30 ವರ್ಷದ ಭನುಕ ತಮ್ಮ ನಿವೃತ್ತಿಗೆ ಕೌಟುಂಬಿಕ ಸಮಸ್ಯೆಯ ಕಾರಣ ನೀಡಿದ್ದಾರೆ. ಆಟಗಾರನಾಗಿ ಹಾಗೂ ಪತಿಯಾಗಿ ಸಾಕಷ್ಟು ಎಚ್ಚರಿಕೆಯಿಂದಲೇ ನಾನು ಈಗ ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನ್ನ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಕ್ರಿಕೆಟ್‌ಗೆ ಗುಡ್‌ ಬೈ ಹೇಳುತ್ತಿರುವುದಾಗಿ ಭನುಕ ರಾಜಪಕ್ಸಾ ಹೇಳಿದ್ದಾರೆ. 2010ರ ಅಂಡರ್‌ 19 ವಿಶ್ವಕಪ್ (Under 19 World Cup) ಟೂರ್ನಿಯಲ್ಲಿ ಭನುಕ ರಾಜಪಕ್ಸಾ ಲಂಕಾ ಪರ ಗರಿಷ್ಠ ರನ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಶ್ರೀಲಂಕಾ ಕ್ರಿಕೆಟ್ ತಂಡದ(Sri Lanka Cricket) ಪರ 5 ಏಕದಿನ, 18 ಟಿ20 ಪಂದ್ಯಗಳನ್ನು ಆಡಿರುವ ಅವರು ಒಟ್ಟು 409 ರನ್‌ ಕಲೆ ಹಾಕಿದ್ದಾರೆ. 

ಸತತ 20 ವರ್ಷ ಕನಿಷ್ಠ ಟೆಸ್ಟ್‌ ವಿಕೆಟ್‌: ಜೇಮ್ಸ್‌ ಆ್ಯಂಡರ್‌ಸನ್‌ ದಾಖಲೆ!

ಸಿಡ್ನಿ: ಇಂಗ್ಲೆಂಡ್‌ನ 39 ವರ್ಷದ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ (James Anderson) ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ಹೊಸ ದಾಖಲೆ ಬರೆದಿದ್ದಾರೆ. ಸತತ 20 ವರ್ಷ ಕನಿಷ್ಠ ಒಂದು ಟೆಸ್ಟ್‌ ವಿಕೆಟ್‌ ಆದರೂ ಪಡೆದ ವಿಶ್ವದ ಮೊದಲ ಬೌಲರ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಅವರು ಪಾದಾರ್ಪಣೆ ಮಾಡಿದ್ದರು. 2003ರಿಂದ 2022ರ ವರೆಗಿನ ಅವಧಿಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಈ ಮೂಲಕ 1992ರಿಂದ 2010ರ ವರೆಗೂ ಸತತ 19 ವರ್ಷ ಈ ಸಾಧನೆ ಮಾಡಿದ್ದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ (Muttiah Muralitharan) ದಾಖಲೆಯನ್ನು ಮುರಿದಿದ್ದಾರೆ.

ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಎರಡನೇ ಕ್ರಿಕೆಟಿಗ ಜೇಮ್ಸ್‌ ಆ್ಯಂಡರ್‌ಸನ್‌: ಆಸ್ಟ್ರೇಲಿಯಾ ವಿರುದ್ದದ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ಕಣಕ್ಕಿಳಿಯುವ ಮೂಲಕ ಅತಿಹೆಚ್ಚು ಟೆಸ್ಟ್‌ ಪಂದ್ಯವನ್ನಾಡಿದ ಎರಡನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯವು ಜೇಮ್ಸ್‌ ಆ್ಯಂಡರ್‌ಸನ್‌ ಪಾಲಿಗೆ 168ನೇ ಟೆಸ್ಟ್ ಪಂದ್ಯವಾಗಿದೆ. ಇನ್ನು ಅತಿಹೆಚ್ಚು ಟೆಸ್ಟ್ ಪಂದ್ಯವನ್ನಾಡಿದ ದಾಖಲೆ ಮಾಸ್ಟರ್‌ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ (Sachin Tendulkar) ಹೆಸರಿನಲ್ಲಿದೆ. ಸಚಿನ್ ತೆಂಡುಲ್ಕರ್ ಒಟ್ಟು 200 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.

Ind vs SA Test: ರೋಚಕಘಟ್ಟ ತಲುಪಿದ ಜೋಹಾನ್ಸ್‌ಬರ್ಗ್‌ ಟೆಸ್ಟ್..! ಗೆಲುವು ಯಾರಿಗೆ.?

ಜೇಮ್ಸ್‌ ಆ್ಯಂಡರ್‌ಸನ್‌ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕರಾದ ಸ್ಟೀವ್ ವಾ (Steve Waugh) ಹಾಗೂ ರಿಕಿ ಪಾಂಟಿಂಗ್ (Ricky Ponting) (167 ಟೆಸ್ಟ್) ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಜೇಮ್ಸ್‌ ಆ್ಯಂಡರ್‌ಸನ್‌ ಒಟ್ಟು 168 ಟೆಸ್ಟ್ ಪಂದ್ಯಗಳಿಂದ 640 ವಿಕೆಟ್‌ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರುಳೀಧರನ್ ಹಾಗೂ ಶೇನ್‌ ವಾರ್ನ್‌ ಬಳಿಕ ಮೂರನೇ ಸ್ಥಾನದಲ್ಲಿದ್ದಾರೆ.

4ನೇ ಟೆಸ್ಟ್‌: ಮೊದಲ ದಿನ ಆಸೀಸ್‌ 126/3

ಸಿಡ್ನಿ: ಮಳೆ ಪೀಡಿತ 4ನೇ ಆ್ಯಷಸ್‌ ಟೆಸ್ಟ್‌ ಪಂದ್ಯದಲ್ಲಿ (Ashes Test) ಇಂಗ್ಲೆಂಡ್‌ ವಿರುದ್ಧ ಆಸ್ಪ್ರೇಲಿಯಾ ಸಾಧಾರಣ ಆರಂಭ ಪಡೆದಿದೆ. ಪಂದ್ಯದ ಆರಂಭದಿಂದಲೂ ಮಳೆ ಅಡ್ಡಿಪಡಿಸಿದ ಕಾರಣ ಮೊದಲ ದಿನ ಕೇವಲ 46.5 ಓವರ್‌ ಬೌಲ್‌ ಮಾಡಲಾಯಿತು. ಉತ್ತಮ ಆರಂಭದ ಹೊರತಾಗಿಯೂ ಆಸೀಸ್‌ 3 ವಿಕೆಟ್‌ ನಷ್ಟಕ್ಕೆ 126 ರನ್‌ ಕಲೆ ಹಾಕಿದೆ. ಹ್ಯಾರಿಸ್‌ 38, ವಾರ್ನರ್‌ 30 ರನ್‌ ಗಳಿಸಿದ್ದಾರೆ. ಜೇಮ್ಸ್‌ ಆ್ಯಂಡರ್‌ಸನ್‌, ಬ್ರಾಡ್‌, ವುಡ್‌ ತಲಾ 1 ವಿಕೆಟ್‌ ಪಡೆದಿದ್ದಾರೆ.
 

Follow Us:
Download App:
  • android
  • ios