Ind vs SA Test: ರೋಚಕಘಟ್ಟ ತಲುಪಿದ ಜೋಹಾನ್ಸ್‌ಬರ್ಗ್ ಟೆಸ್ಟ್..! ಗೆಲುವು ಯಾರಿಗೆ.?
* ರೋಚಕಘಟ್ಟ ತಲುಪಿದ ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್
* ಸರಣಿ ಸಮವಾಗಿಸಲು ಹರಿಣಗಳ ಪಡೆಗೆ ಬೇಕಿದೆ 122 ರನ್
* ಇನ್ನು ಕೇವಲ 8 ವಿಕೆಟ್ ಕಬಳಿಸಿದರೆ ಟೆಸ್ಟ್ ಸರಣಿ ಭಾರತದ ಪಾಲು
ಜೋಹಾನ್ಸ್‌ಬರ್ಗ್(ಜ.06): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ವಾಂಡರರ್ಸ್ ಟೆಸ್ಟ್ ರೋಚಕ ಘಟ್ಟ ತಲುಪಿದ್ದು, ಕ್ಲೈಮ್ಯಾಕ್ಸ್ ಬಾಕಿ ಇದೆ. ಗೆಲ್ಲಲು 240 ರನ್ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ, 3ನೇ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದು, ಗೆಲ್ಲಲು ಇನ್ನೂ 122 ರನ್ ಗಳಿಸಬೇಕಿದೆ. ಟೀಂ ಇಂಡಿಯಾಗೆ (Team India) 8 ವಿಕೆಟ್‌ಗಳ ಅವಶ್ಯಕತೆ ಇದೆ. ಸದ್ಯಕ್ಕೆ ಆತಿಥೇಯ ತಂಡ ಮೇಲುಗೈ ಸಾಧಿಸಿದ್ದು, ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದರೂ, 4ನೇ ದಿನವಾದ ಗುರುವಾರ ಆರಂಭದಲ್ಲೇ ಒಂದೆರಡು ವಿಕೆಟ್ ಉರುಳಿದರೆ ಪಂದ್ಯ ಭಾರತದ ಕಡೆಗೂ ವಾಲಬಹುದು.
ಅಜಿಂಕ್ಯ ರಹಾನೆ (Ajinkya Rahane) ಹಾಗೂ ಚೇತೇಶ್ವರ್ ಪೂಜಾರ (Cheteshwar Pujara) ಅವರ ಅರ್ಧಶತಕಗಳು, ಶಾರ್ದೂಲ್ ಠಾಕೂರ್ ಹಾಗೂ ಹನುಮ ವಿಹಾರಿಯ ಉಪಯುಕ್ತ ಕೊಡುಗೆಗಳ ನೆರವಿನಿಂದ ಭಾರತ 2ನೇ ಇನ್ನಿಂಗ್ಸ್‌ನಲ್ಲಿ 266 ರನ್ ಕಲೆಹಾಕಿ ಆಲೌಟ್ ಆಯಿತು.
ಗೆಲ್ಲಲು ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಕ್ಕೆ ನಾಯಕ ಡೀನ್ ಎಲ್ಗರ್ (Dean Elgar) ಹಾಗೂ ಏಡನ್ ಮಾರ್ಕ್ರಮ್(31) ಎಚ್ಚರಿಕೆಯ ಆರಂಭ ನೀಡಿದರು. ಮಾರ್ಕ್ರಮ್ ಪೆವಿಲಿಯನ್ ಸೇರಿದ ಬಳಿಕ, ಎಲ್ಗರ್ ಜೊತೆ ಸೇರಿದ ಕೀಗನ್ ಪೀಟರ್‌ಸನ್ 46 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಕೈ, ಮುಖ, ಎದೆಗೆ ಪೆಟ್ಟು ತಿಂದರೂ ಬಂಡೆಯಂತೆ ಕ್ರೀಸ್‌ನಲ್ಲಿ ನೆಲೆಯೂರಿರುವ ಎಲ್ಗರ್ 46 ರನ್ ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 11 ರನ್ ಗಳಿಸಿರುವ ರಾಸಿ ವಾನ್ ಡೆರ್ ಡುಸ್ಸೆನ್ ಸಹ ಔಟಾಗದೆ ಉಳಿದಿದ್ದಾರೆ.
111 ರನ್ ಜೊತೆಯಾಟ: ಇದಕ್ಕೂ ಮುನ್ನ ಪೂಜಾರ ಹಾಗೂ ರಹಾನೆ ಭಾರೀ ಒತ್ತಡದ ನಡುವೆಯೂ ಭಾರತ ಗೌರವ ಮೊತ್ತ ಕಲೆಹಾಕಲು ನೆರವಾದರು. ಪೂಜಾರ 53 ರನ್ ಗಳಿಸಿದರೆ, ರಹಾನೆ 58 ರನ್ ಬಾರಿಸಿದರು. ಇವರಿಬ್ಬರ ನಡುವೆ 3ನೇ ವಿಕೆಟ್‌ಗೆ 111 ರನ್ ಜೊತೆಯಾಟ ಮೂಡಿಬಂತು. ಆದರೆ ಕಗಿಸೋ ರಬಾಡ(Kagiso Rabada), ಭಾರತದ ಓಟಕ್ಕೆ ತಡೆಯೊಡ್ಡಿದರು. ರಹಾನೆ, ಪೂಜಾರ ಹಾಗೂ ರಿಷಭ್ ಪಂತ್(0)ರನ್ನು 12 ರನ್‌ಗಳ ಅಂತರದಲ್ಲಿ ಔಟ್ ಮಾಡಿ ಆಘಾತ ನೀಡಿದರು.
Ind vs SA: ಜೋಹಾನ್ಸ್‌ಬರ್ಗ್ ಟೆಸ್ಟ್ ಗೆಲ್ಲಲು ಹರಿಣಗಳಿಗೆ 240 ರನ್ ಗುರಿ ನೀಡಿದ ಟೀಂ ಇಂಡಿಯಾ
14 ಎಸೆತಗಳಲ್ಲಿ 16 ರನ್ ಗಳಿಸಿದ ಅಶ್ವಿನ್, 24 ಎಸೆತಗಳಲ್ಲಿ 28 ರನ್ ಸಿಡಿಸಿದ ಶಾರ್ದೂಲ್‌ರ ಕೌಂಟರ್ ಅಟ್ಯಾಕ್ ರಣತಂತ್ರ ಕೈಹಿಡಿಯಿತು. ಹನುಮ ವಿಹಾರಿ ಔಟಾಗದೆ 40 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ರಬಾಡ, ಎನ್‌ಗಿಡಿ ಹಾಗೂ ಯಾನ್ಸನ್ ತಲಾ 3 ವಿಕೆಟ್ ಕಿತ್ತರು.
ಮರುಕಳಿಸುತ್ತಾ 2018ರ ಫಲಿತಾಂಶ?
ಭಾರತ ಇನ್ನೂ ಗೆಲ್ಲುವ ಆಸೆಯನ್ನು ಕೈಚೆಲ್ಲುವ ಅಗತ್ಯವಿಲ್ಲ. ಯಾಕೆಂದರೆ 2018ರ ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಈಗಿರುವ ಪರಿಸ್ಥಿತಿಯಲ್ಲೇ ಇತ್ತು. ಗೆಲ್ಲಲು 241 ರನ್ ಗುರಿ ಬೆನ್ನತ್ತಿದ್ದ ದ.ಆಫ್ರಿಕಾ 124 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಆಗಲೂ ಡೀನ್ ಎಲ್ಗರ್ ಹೋರಾಟದ ಚುಕ್ಕಾಣಿ ಹಿಡಿದಿದ್ದರು. ಆದರೆ ದಕ್ಷಿಣ ಆಫ್ರಿಕಾ ಪಂದ್ಯದ 4ನೇ ದಿನ 177 ರನ್‌ಗೆ ಆಲೌಟ್ ಆಗಿತ್ತು. ಭಾರತ 63 ರನ್‌ಗಳಿಂದ ಗೆದ್ದು ಸಂಭ್ರಮಿಸಿತ್ತು. ಶಮಿ 5 ವಿಕೆಟ್ ಕಿತ್ತರೆ, ಬುಮ್ರಾ 2 ವಿಕೆಟ್ ಕಬಳಿಸಿದ್ದರು. ಆ ಫಲಿತಾಂಶ ಮರುಕಳಿಸುತ್ತಾ ಎನ್ನುವ ಕುತೂಹಲ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿದೆ.
ಸಂಕ್ಷಿಪ್ತ ಸ್ಕೋರ್
ಭಾರತ: 202/10
ಕೆ.ಎಲ್. ರಾಹುಲ್: 50
ರವಿಚಂದ್ರನ್ ಅಶ್ವಿನ್: 46
ಮಾರ್ಕೊ ಜಾನ್ಸನ್: 31/4
ದಕ್ಷಿಣ ಆಫ್ರಿಕಾ:229/10
ಕೀಗನ್ ಪೀಟರ್‌ಸನ್: 62
ತೆಂಬ ಬವುಮಾ: 51
ಶಾರ್ದೂಲ್ ಠಾಕೂರ್: 61/7
ಭಾರತ: 266/10 (ಎರಡನೇ ಇನಿಂಗ್ಸ್)
ಅಜಿಂಕ್ಯ ರಹಾನೆ: 58
ಚೇತೇಶ್ವರ್ ಪೂಜಾರ: 53
ಲುಂಗಿ ಎಂಗಿಡಿ: 43/3
ದಕ್ಷಿಣ ಆಫ್ರಿಕಾ: 118/2(ಎರಡನೇ ಇನಿಂಗ್ಸ್)
ಡೀನ್ ಎಲ್ಗಾರ್: 46*
ಮಾರ್ಕ್‌ರಮ್: 31
ರವಿಚಂದ್ರನ್ ಅಶ್ವಿನ್: 14/1
(* ಮೂರನೇ ದಿನದಾಟದಂತ್ಯದ ವೇಳೆಗೆ)