ನವದೆಹಲಿ(ಜೂ.07): ಭಾರತದಲ್ಲಿ ಎರಡನೇ ಕೋವಿಡ್ ಅಲೆ ಇರುವುದರಿಂದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ನಲ್ಲಿ ಆಯೋಜಿಸಲು ಬಿಸಿಸಿಐ, ಎಮಿರೇಟ್ಸ್‌ ಕ್ರಿಕೆಟ್‌ ಬೋರ್ಡ್‌(ಇಸಿಬಿ) ಜತೆ ಮಾತುಕತೆ ನಡೆಸುತ್ತಿದೆ. ಆದರೆ ಹೊಸ ಬೆಳವಣಿಗೆ ಎನ್ನುವಂತೆ ಬಿಸಿಸಿಐ ನೆರವಿಗೆ ಬರಲು ಲಂಕಾ ಕ್ರಿಕೆಟ್‌ ಮಂಡಳಿ ಮುಂದಾಗಿದ್ದು, ಲಂಕಾದಲ್ಲೇ ಟಿ20 ವಿಶ್ವಕಪ್ ಟೂರ್ನಿಗೆ ಆತಿಥ್ಯವಹಿಸಲು ಆಸಕ್ತಿ ತೋರಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯ ಕುರಿತಂತೆ ಈಗಾಗಲೇ ಬಿಸಿಸಿಐ ಅಧಿಕಾರಿಗಳು ಎಮಿರೇಟ್ಸ್‌ ಕ್ರಿಕೆಟ್‌ ಬೋರ್ಡ್‌ ಜತೆ ಮಾತುಕತೆ ನಡೆಸುತ್ತಿದ್ದಾರೆ. ಇದೇ ವೇಳೆ ಲಂಕಾ ಮಂಡಳಿಯ ಜತೆಯೂ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆಂದು ಎಎನ್‌ಐ ವರದಿ ಮಾಡಿದೆ.

ಒಂದು ವೇಳೆ ಕೋವಿಡ್ 19 ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ, ಯುಎಇನಲ್ಲಿ ಟೂರ್ನಿ ಆಯೋಜಿಸುವ ಕುರಿತಂತೆ ಆಲೋಚನೆ ಇದೆ. ಹೀಗಾಗಿ ಈಗಾಗಲೇ ಬಿಸಿಸಿಐ ಹಾಗೂ ಇಸಿಬಿ ಅಧಿಕಾರಿಗಳು ಈ ಕುರಿತಂತೆ ಮಾತುಕತೆ ನಡೆಸುತ್ತಿದ್ದಾರೆ. ಟೂರ್ನಿ ನಡೆಯುವ ಸಮಯದಲ್ಲಿನ ವಾಯುಗುಣವನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಜತೆಯೂ ಪ್ರಾಥಮಿಕ ಹಂತದ ಮಾತುಕತೆ ನಡೆಸಲಾಗುತ್ತಿದೆ. ಲಂಕಾದಲ್ಲಿ ಟಿ20 ಆಯೋಜನೆಯ ಕುರಿತಂತೆ ಈಗಲೇ ಎಲ್ಲಾ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಟಿ20 ವಿಶ್ವಕಪ್ ಟೂರ್ನಿ ಆಯೋಜನೆಗೆ ಸಾಕಷ್ಟು ಕಾಲಾವಕಾಶಗಳು ಇವೆ. ಒಂದು ವೇಳೆ ಭಾರತದಾಚೆಗೆ ಟೂರ್ನಿ ನಡೆದರೂ ಬಿಸಿಸಿಐ ತನ್ನ ಆತಿಥ್ಯದ ಹಕ್ಕನ್ನು ಹೊಂದಿರಲಿದೆ ಎಂದು ಬಿಸಿಸಿಐ ಮೂಲಗಳು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಟಿ20 ವಿಶ್ವಕಪ್ ಭಾರತದಿಂದ ಯುಎಇಗೆ ಸ್ಥಳಾಂತರವಾಗಲಿದೆ: ಪಾಕ್‌ ಕ್ರಿಕೆಟ್ ಮುಖ್ಯಸ್ಥ ಏಹ್ಸಾನ್ ಮಣಿ

ಯುಎಇನಲ್ಲಿ ಶಾರ್ಜಾ, ದುಬೈ ಹಾಗೂ ಅಬುಧಾಬಿ ಹೀಗೆ ಕೇವಲ 3 ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ಆಯೋಜಿಸಬೇಕಾಗುತ್ತದೆ. ಶ್ರೀಲಂಕಾದಲ್ಲಿ ವಿಶ್ವದರ್ಜೆಯ ಕೊಲಂಬೊ ಸ್ಟೇಡಿಯಂ ಸೇರಿದಂತೆ ಮೂರು ಪ್ರಮುಖ ಕ್ರಿಕೆಟ್ ಸ್ಟೇಡಿಯಂಗಳಿವೆ. ಇನ್ನೂ ಕುತೂಹಲಕಾರಿ ಸಂಗತಿ ಎಂದರೆ ಈ ಹಿಂದೆ ಅರ್ಧಕ್ಕೆ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಆತಿಥ್ಯ ವಹಿಸಲು ಲಂಕಾ ಕ್ರಿಕೆಟ್ ಮಂಡಳಿ ಒಲವು ತೋರಿತ್ತು.
    
ಯುಎಇನಲ್ಲೀಗ 14ನೇ ಆವೃತ್ತಿಯ ಐಪಿಎಲ್ ಭಾಗ 2 ಆಯೋಜಿಸಲು ಬಿಸಿಸಿಐ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ. ಬಯೋ ಬಬಲ್‌ನೊಳಗೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಜರುಗಲಿದೆ. ಇನ್ನು ಇದೇ ವೇಳೆ ಬಿಸಿಸಿಐ ಟಿ20 ವಿಶ್ವಕಪ್ ಟೂರ್ನಿಯ ಆಯೋಜನೆ ಹಾಗೂ ಆತಿಥ್ಯದ ಕುರಿತಂತೆ ಜೂನ್ 28ರೊಳಗಾಗಿ ಐಸಿಸಿಗೆ ತಮ್ಮ ಅಂತಿಮ ನಿರ್ಧಾರವನ್ನು ತಿಳಿಸಬೇಕಿದೆ.

ಬಿಸಿಸಿಐ ಸಾದ್ಯವಾದಷ್ಟರ ಮಟ್ಟಿಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಚಿಂತನೆ ನಡೆಸುತ್ತಿದೆ. ಒಂದು ವೇಳೆ ಭಾರತದಲ್ಲಿ ಟೂರ್ನಿ ಆಯೋಜನೆಗೊಳ್ಳದಿದ್ದರೆ ಯುಎಇ ಅಥವಾ ಲಂಕಾ ಈ ಎರಡು ದೇಶಗಳಲ್ಲೊಂದು ಚುಟುಕು ಕ್ರಿಕೆಟ್ ಮಹಾಸಂಗ್ರಾಮಕ್ಕೆ ವೇದಿಕೆಯಾಗುವ ಸಾಧ್ಯತೆ ದಟ್ಟವಾಗತೊಡಗಿದೆ.