ದುಬೈ(ಏ.20): ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದ ಶ್ರೀಲಂಕಾದ ಮಾಜಿ ಕ್ರಿಕೆಟಿಗ ದಿಲ್ಹಾರಾ ಲೋಕುಹೆಟ್ಟಿಗೆಯನ್ನು ಸೋಮವಾರ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) 8 ವರ್ಷಗಳ ಕಾಲ ಎಲ್ಲಾ ಕ್ರಿಕೆಟ್‌ ಚಟುವಟಿಕೆಗಳಿಂದ ನಿಷೇಧಿಸಿದೆ. 

2017ರಲ್ಲಿ ಯುಎಇನಲ್ಲಿ ನಡೆದಿದ್ದ ಟಿ20 ಟೂರ್ನಿಯೊಂದರಲ್ಲಿ ಫಿಕ್ಸಿಂಗ್‌ ನಡೆಸಿದ್ದರು. 2019ರ ಏ.3ರಂದು ಐಸಿಸಿ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಸಂಪೂರ್ಣ ವಿಚಾರಣೆ ನಡೆಸಿದ ವೇಳೆ ಆರೋಪ ಸಾಬೀತಾದ ಕಾರಣ ನಿಷೇಧಗೊಳಿಸಿದೆ.

ಇದೇ ಜನವರಿಯಲ್ಲಿ ದಿಲ್ಹಾರಾ ಲೋಕುಹೆಟ್ಟಿಗೆ ಕ್ರಿಕೆಟ್‌ ಭ್ರಷ್ಟಾಚಾರ ನಡೆಸಿರುವುದು ವಿಚಾರಣೆ ವೇಳೆ ಸಾಬೀತಾಗಿತ್ತು. ಇದೀಗ 8 ವರ್ಷಗಳ ಲಂಕಾ ಮಾಜಿ ಬೌಲಿಂಗ್‌ ಆಲ್ರೌಂಡರ್ ಮೇಲೆ ನಿಷೇಧ ಹೇರಿದೆ. ದಿಲ್ಹಾರಾ ಲೋಕುಹೆಟ್ಟಿಗೆ 2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಶ್ರೀಲಂಕಾ ಪರ 11 ಪಂದ್ಯಗಳನ್ನಾಡಿ 8 ವಿಕೆಟ್‌ ಹಾಗೂ 101  ರನ್‌ ಬಾರಿಸಿದ್ದಾರೆ. 

ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಸ್ಟ್ರೀಕ್‌ ಭ್ರಷ್ಟಾಚಾರ: 8 ವರ್ಷ ನಿಷೇಧ

ಕಳೆದ ವಾರವಷ್ಟೇ ಬುಕಿಯೊಂದಿಗೆ ಸಂಪರ್ಕ ಹೊಂದಿ ಭ್ರಷ್ಟಾಚಾರ ನಡೆಸಿದ ಆರೋಪದಡಿ ಜಿಂಬಾಬ್ವೆ ಮಾಜಿ ನಾಯಕ ಹೀಥ್ ಸ್ಟ್ರೀಕ್‌ರನ್ನು ಐಸಿಸಿ 8 ವರ್ಷಗಳ ನಿಷೇಧ ಹೇರಿದ್ದನ್ನು ಸ್ಮರಿಸಬಹುದಾಗಿದೆ.