ಟೋಕಿಯೋ ಒಲಿಂಪಿಕ್ಸ್ ಟಿಕೆಟ್ ಖಚಿತಪಡಿಸಿಕೊಂಡ ದ್ಯುತಿ ಚಾಂದ್
* ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ದ್ಯುತಿ ಚಾಂದ್
* 100 ಮೀಟರ್ ಹಾಗೂ 200 ಮೀಟರ್ ವಿಭಾಗದಲ್ಲಿ ಅರ್ಹತೆಗಿಟ್ಟಿಸಿದ ಚಾಂದ್
* ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭ
ಪಟಿಯಾಲ(ಜೂ.30): ಭಾರತ ತಾರಾ ಅಥ್ಲೀಟ್ ದ್ಯುತಿ ಚಾಂದ್ ವಿಶ್ವ ರ‍್ಯಾಂಕಿಂಗ್ ಕೋಟಾದಡಿ 100 ಮೀಟರ್ ಹಾಗೂ 200 ಮೀಟರ್ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವ ರ‍್ಯಾಂಕಿಂಗ್ ಮೂಲಕ ಟೋಕಿಯೋ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲು 100 ಮೀಟರ್ ವಿಭಾಗದಲ್ಲಿ 22 ಸ್ಥಾನ ಹಾಗೂ 200 ಮೀಟರ್ ವಿಭಾಗದಲ್ಲಿ 15 ಸ್ಥಾನಗಳು ಬಾಕಿ ಉಳಿದಿದ್ದವು. 100 ಮೀಟರ್ ವಿಭಾಗದಲ್ಲಿ 44ನೇ ಸ್ಥಾನ ಹಾಗೂ 200 ವಿಭಾಗದಲ್ಲಿ 51ನೇ ಸ್ಥಾನ ಪಡೆದಿದ್ದ ದ್ಯುತಿ ಚಾಂದ್ ಮುಂದಿನ ತಿಂಗಳು ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುಲು ಇದೀಗ ಯಶಸ್ವಿಯಾಗಿದ್ದಾರೆ.
60ನೇ ಅಂತರಾಜ್ಯ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ವಿಭಾಗದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಡುವ ಮೂಲಕ ದ್ಯುತಿ ಚಾಂದ್ ನೇರವಾಗಿ ಅರ್ಹತೆ ಪಡೆಯಲು ವಿಫಲರಾಗಿದ್ದರು. ಕಳೆದ ವಾರ ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-4 ಕ್ರೀಡಾಕೂಟದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ 11.17 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಆದರೆ ಕೇವಲ 0.02 ಸೆಕೆಂಡ್ ಅಂತರದಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶದಿಂದ ವಂಚಿತರಾಗಿದ್ದರು.
ಟೋಕಿಯೋ ಒಲಿಂಪಿಕ್ಸ್ ಅರ್ಹತೆ ಪಡೆದ ಡಿಸ್ಕಸ್ ಥ್ರೋ ಪಟು ಸೀಮಾ ಪೂನಿಯಾ
ಇನ್ನು ಇದೇ ವೇಳೆ ಹಿಮಾದಾಸ್ ವಿಶ್ವ ರ‍್ಯಾಂಕಿಂಗ್ ಕೋಟಾದಡಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಕಳೆದ ವಾರ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-4 ಕ್ರೀಡಾಕೂಟದಲ್ಲಿ 200 ಮೀಟರ್ ಓಟದ ಸ್ಪರ್ಧೆಯನ್ನು 22.88 ಸೆಕೆಂಡ್‌ಗಳಲ್ಲಿ ಪೂರೈಸಿದ್ದರು. ಈ ಮೂಲಕ ಕೇವಲ 00.08 ಸೆಕೆಂಡ್ ಅಂತರದಲ್ಲಿ ಟೋಕಿಯೋ ಒಲಿಂಪಿಕ್ಸ್ ನೇರ ಪ್ರವೇಶದ ಅರ್ಹತೆಯನ್ನು ಕೈಚೆಲ್ಲಿದ್ದರು.