ಲಖನೌ(ಮಾ.17): ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮತ್ತೊಮ್ಮೆ ಸಂಘಟಿತ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ 5ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು ದಕ್ಷಿಣ ಆಫ್ರಿಕಾ 4-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

ಭಾರತ ನೀಡಿದ್ದ 189 ರನ್‌ ಗಳ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ರಾಜೇಶ್ವರಿ ಗಾಯಕ್ವಾಡ್‌ ಆರಂಭದಲ್ಲೇ ಶಾಕ್‌ ನೀಡಿದರು. ಹರಿಣಗಳ ಪಡೆ 3 ರನ್‌ ಗಳಿಸುವಷ್ಟರಲ್ಲೇ ಅಗ್ರಕ್ರಮಾಂಕದ ಬ್ಯಾಟ್ಸ್‌ವುಮೆನ್‌ಗಳು ಪೆವಿಲಿಯನ್‌ ಸೇರಿದರು. ಇನ್ನು ಸುನೆ ಲಸ್‌ ಆಟ ಕೇವಲ 10 ರನ್‌ಗಳಿಗೆ ಸೀಮಿತವಾಯಿತು.

ಮಿಗ್ನಾನ್‌ ಡು ಪ್ರೀಜ್‌-ಆನೆ ಬೋಸ್‌ ಆಕರ್ಷಕ ಜತೆಯಾಟ: ಒಂದು ಹಂತದಲ್ಲಿ 27 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಮಿಗ್ನಾನ್‌ ಡು ಪ್ರೀಜ್‌ ಹಾಗೂ ಆನೆ ಬೋಸ್‌ 4ನೇ ವಿಕೆಟ್‌ಗೆ 96 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮಿಗ್ನಾನ್‌ 57 ರನ್‌ ಬಾರಿಸಿದರೆ, ಬೋಸ್‌ 58 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ಮೆಜೇನ್‌ ಕೆಪ್ 36 ಹಾಗೂ ನದಿನೆ ಡಿ ಕ್ಲಾರ್ಕ್‌ 19 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮಿಥಾಲಿ ಏಕಾಂಗಿ ಹೋರಾಟ, ಹರಿಣಗಳಿಗೆ ಸಾಧಾರಣ ಗುರಿ

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ, ಮಿಥಾಲಿ ರಾಜ್‌ ಅಜೇಯ(79) ಅರ್ಧಶತಕದ ನೆರವಿನಿಂದ 188 ರನ್‌ ಕಲೆ ಹಾಕಿತ್ತು.