Asianet Suvarna News Asianet Suvarna News

SA vs India 3rd Test : ಗೆಲುವಿನ ಹಾದಿಯಲ್ಲಿ ದಕ್ಷಿಣ ಆಫ್ರಿಕಾ, ತಿರುಗೇಟು ನೀಡುತ್ತಾ ಟೀಂ ಇಂಡಿಯಾ?

ಗೆಲುವಿನಿಂದ 111 ರನ್ ಗಳ ದೂರದಲ್ಲಿರುವ ದಕ್ಷಿಣ ಆಫ್ರಿಕಾ 
ಭಾರತದ ಗೆಲುವಿಗೆ ಇನ್ನೂ 8 ವಿಕೆಟ್ ಗಳು ಬೇಕು
ಕುತೂಹಲದ ಘಟ್ಟದಲ್ಲಿ ಕೇಪ್ ಟೌನ್ ಟೆಸ್ಟ್

South Africa sniff victory in Cape Town Test despite Rishabh Pant hundred san
Author
Bengaluru, First Published Jan 13, 2022, 11:55 PM IST

ಕೇಪ್ ಟೌನ್ (ಜ. 13): ಸಾಕಷ್ಟು ಕುತೂಹಲದ ತಿರುವು ಪಡೆದುಕೊಂಡಿರುವ ಕೇಪ್ ಟೌನ್ ಟೆಸ್ಟ್ (Cape Town Test) ಪಂದ್ಯದ ವಿಜೇತರು ಯಾರಾಗಲಿದ್ದಾರೆ ಎನ್ನುವುದು ಶುಕ್ರವಾರ ನಿರ್ಧಾರವಾಗಲಿದೆ. 2ನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸ್ಫೂರ್ತಿದಾಯಕ ನಿರ್ವಹಣೆ ತೋರಿದ ದಕ್ಷಿಣ ಆಫ್ರಿಕಾ (South Africa) ತಂಡ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಹಾದಿಯಲ್ಲಿದೆ. ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 111 ರನ್ ಗಳು ಬೇಕಿದ್ದರೆ, ಭಾರತ  (India) ತಂಡದ ಗೆಲುವಿಗೆ ಇನ್ನೂ 8 ವಿಕೆಟ್ ಗಳು ಬೇಕಿದೆ. ರಿಷಭ್ ಪಂತ್ (Rishabh Pant) ಹೋರಾಟದ ಆಟವಾಡಿ ಶತಕ ಸಿಡಿಸಿದ ನಡುವೆಯೂ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಕೇವಲ 212 ರನ್ ಗಳ ಸವಾಲು ನೀಡಲಷ್ಟೇ ಶಕ್ತವಾಯಿತು. ಪ್ರತಿಯಾಗಿ 2ನೇ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ್ದು, ಗೆಲುವಿನ ವಿಶ್ವಾಸದಲ್ಲಿದೆ.

ಮೂರನೇ ದಿನವಾದ ಗುರುವಾರ 2 ವಿಕೆಟ್ ಗೆ 57 ರನ್ ಗಳಿಂದ 2ನೇ ಇನ್ನಿಂಗ್ಸ್ ಮುಂದುವರಿಸಿದ ಭಾರತ ತಂಡದ ದಯನೀಯ ಬ್ಯಾಟಿಂಗ್ ವೈಫಲ್ಯ ಕಂಡಿತು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ 139 ಎಸೆತಗಳಲ್ಲಿ6 ಬೌಂಡರಿ, 4 ಸಿಕ್ಸರ್ ಗಳಿಂದ ಅಜೇಯ 100 ರನ್ ಸಿಡಿಸಿ ಭಾರತದ ಮೊತ್ತವನ್ನು 190ರ ಗಡಿ ದಾಟಿಸಿದರೆ, ಇವರಿಗೆ ಯಾವೊಬ್ಬ ಬ್ಯಾಟ್ಸ್ ಮನ್ ಗಳಿಂದಲೂ ಸಹಾಯ ದೊರೆಯಲಿಲ್ಲ. ದಿನದಾಟ ಆರಂಭಿಸಿದ ಭಾರತ ಮೊದಲ ಎರಡು ಓವರ್ ಗಳಲ್ಲಿಯೇ ಚೇತೇಶ್ವರ ಪೂಜಾರ (9) ಹಾಗೂ ಅಜಿಂಕ್ಯ ರಹಾನೆ (1) ವಿಕೆಟ್ ಗಳನ್ನು ಕಳೆದುಕೊಂಡಿತು.
58 ರನ್ ಗೆ 4 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದ ವೇಳೆ ಕ್ರೀಸ್ ನಲ್ಲಿದ್ದ ನಾಯಕ ವಿರಾಟ್ ಕೊಹ್ಲಿಗೆ (Virat Kohli) ಜೊತೆಯಾದ ರಿಷಭ್ ಪಂತ್, ದಕ್ಷಿಣ ಆಫ್ರಿಕಾ ಬೌಲಿಂಗ್ ಅನ್ನು ಸವಾಲೇ ಅಲ್ಲ ಎನ್ನುವಂತೆ ಚಚ್ಚಿದರು. 5ನೇ ವಿಕೆಟ್ ಗೆ ಈ ಜೋಡಿ 94 ರನ್ ಜೊತೆಯಾಟವಾಡಿತು. ಇದರಲ್ಲಿ ಕೊಹ್ಲಿಯ ಪಾಲು ಕೇವಲ 15 ರನ್ ಆಗಿದ್ದವು. ಇನ್ನೇನು ಟೆಸ್ಟ್ ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸಿತು ಎನ್ನುವಾಗಲೇ ದಾಳಿಗಿಳಿದ ಲುಂಜಿ ಎನ್ ಗಿಡಿ ಕೊಹ್ಲಿಯ ಅಮೂಲ್ಯ ವಿಕೆಟ್ ಉರುಳಿಸುವ ಮೂಲಕ ಈ ಜೊತೆಯಾಟವನ್ನು ಬೇರ್ಪಡಿಸಿದರು.

ಈ ವೇಳೆ 165 ರನ್ ಗಳ ಮುನ್ನಡೆ ಹೊಂದಿದ್ದ ಭಾರತ ತಂಡಕ್ಕೆ ಸುಲಭವಾಗಿ 300ಕ್ಕೂ ಅಧಿಕ ಮೊತ್ತದ ಗುರಿ ನೀಡುವ ಅವಕಾಶವಿತ್ತು. ಆದರೆ, ಲುಂಜಿ ಎನ್ ಗಿಡಿ ಇದಕ್ಕೆ ಅವಕಾಶ ನೀಡಲಿಲ್ಲ. 15 ಎಸೆತಗಳಲ್ಲಿ 7 ರನ್ ಬಾರಿಸಿ ಅಶ್ವಿನ್ ಔಟಾದರೆ, 13 ಎಸೆತಗಳಲ್ಲಿ 5 ರನ್ ಬಾರಿಸಿ ಶಾರ್ದೂಲ್ ಠಾಕೂರ್ ನಿರ್ಗಮಿಸಿದರು. ಈ ಎರಡೂ ವಿಕೆಟ್ ಗಳನ್ನು ಉರುಳಿಸುವ ಮೂಲಕ ಎನ್ ಗಿಡಿ ದಕ್ಷಿಣ ಆಫ್ರಿಕಾ ತಂಡದ ಮೇಲುಗೈಗೆ ಕಾರಣರಾದರು. 170 ರನ್ ಗೆ 7 ವಿಕೆಟ್ ಕಳೆದುಕೊಂಡ ಭಾರತದ ಮೊತ್ತವನ್ನು 195ರ ಗಡಿ ದಾಟಿಸಲು ಏಕಾಂಗಿಯಾಗಿ ಕಾರಣರಾಗಿದ್ದು ರಿಷಭ್ ಪಂತ್.
ಮೊಹಮದ್ ಶಮಿ, ಉಮೇಶ್ ಯಾದವ್ ಹಾಗೂ ಜಸ್ ಪ್ರೀತ್ ಬುಮ್ರಾ ಕ್ರೀಸ್ ನಲ್ಲಿ ಹೆಚ್ಚುಕಾಲ ನಿಲ್ಲಲು ವಿಫಲರಾದರೂ, ಇನ್ನೊಂದು ಕಡೆ ಬಿರುಸಾಗಿ ಆಟವಾಡುತ್ತಿದ್ದ ರಿಷಭ್ ಪಂತ್ ಮುನ್ನಡೆಯನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. 2ನೇ ಟೆಸ್ಟ್ ನಲ್ಲಿ ತಮ್ಮ ನಿರ್ವಹಣೆಗಾಗಿ ಸಾಕಷಟು ಟೀಕೆ ಎದುರಿಸಿದ್ದ ರಿಷಭ್ ಪಂತ್, ತಮಗೆ ಸಿಕ್ಕ ಅವಕಾಶದಲ್ಲಿ ಬೌಂಡರಿಗಳನ್ನು ಬಾರಿಸುತ್ತಾ ಅರ್ಹ ಶತಕವನ್ನು ಪೂರೈಸಿದರು.
 


ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಕೆಲ ಆತಂಕದ ಕ್ಷಣಗಳನ್ನು ಎದುರಿಸಿತು. ಏಡೆನ್ ಮಾರ್ಕ್ರಮ್ ಹಾಗೂ ಡೀನ್ ಎಲ್ಗರ್ ಜೋಡಿ ಮೊದಲ ವಿಕೆಟ್ ಗೆ 23 ರನ್ ಜೊತೆಯಾಟವಾಡಿ ಬೇರ್ಪಟ್ಟರೆ, ಕೀಗನ್ ಪೀಟರ್ಸೆನ್ ಹಾಗೂ ಎಲ್ಗರ್ 2ನೇ ವಿಕೆಟ್ ಗೆ ಅಮೂಲ್ಯ 78 ರನ್ ಜೊತೆಯಾಟವಾಡಿ ತಂಡಕ್ಕೆ ಜಯದ ವಿಶ್ವಾಸ ಮೂಡಿಸಿದರು. 30ನೇ ಓವರ್ ನ ನಾಲ್ಕನೇ ಎಸೆತದಲ್ಲಿ ಬುಮ್ರಾ, ಎಲ್ಗರ್ ಅವರ ವಿಕೆಟ್ ಉರುಳಿಸಿ ಭಾರತಕ್ಕೆ ಸಣ್ಣ ಖುಷಿ ನೀಡಿದರು. ಅದರ ಬೆನ್ನಲ್ಲಿಯೇ ದಿನದಾಟ ಮುಕ್ತಾಯ ಕಂಡಿತು.

 Ind vs SA, Cape Town Test: ಶತಕ ಚಚ್ಚಿ ಅಬ್ಬರಿಸಿದ ರಿಷಭ್ ಪಂತ್‌..!
ಗೆಲುವಿನ ಅಲ್ಪ ಅವಕಾಶ ಹೊಂದಿರುವ ಭಾರತ ತಂಡ, ನಾಲ್ಕನೇ ದಿನದ ಆರಂಭಿಕ ಅವಧಿಯ ಆಟದಲ್ಲಿ ಯಾವ ರೀತಿಯ ನಿರ್ವಹಣೆ ತೋರಲಿದೆ ಎನ್ನುವ ಆಧಾರದ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಿದೆ. ಭಾರತ: 223 ಮತ್ತು 198 (ರಿಷಭ್ ಪಂತ್ 100*, ಮಾರ್ಕೋ ಜಾನ್ಸೆನ್ 36ಕ್ಕೆ 4, ಲುಂಜಿ ಎನ್ ಗಿಡಿ 21ಕ್ಕೆ 3), ದಕ್ಷಿಣ ಆಫ್ರಿಕಾ 210 ಮತ್ತು 2 ವಿಕೆಟ್ ಗೆ 101 (ಕೀಗನ್ ಪೀಟರ್ಸೆನ್ 48*, ಡೀನ್ ಎಲ್ಗರ್ 30, ಮೊಹಮದ್ ಶಮಿ 22ಕ್ಕೆ 1).

Follow Us:
Download App:
  • android
  • ios