Asianet Suvarna News Asianet Suvarna News

Ind vs SA, Cape Town Test: ಶತಕ ಚಚ್ಚಿ ಅಬ್ಬರಿಸಿದ ರಿಷಭ್ ಪಂತ್‌..!

* ಕೇಪ್‌ಟೌನ್ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಮಿಂಚಿದ ರಿಷಭ್ ಪಂತ್

* ಕೇಪ್‌ಟೌನ್ ಟೆಸ್ಟ್ ಪಂದ್ಯ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡಕ್ಕೆ 212 ರನ್‌ಗಳ ಗುರಿ

* ಏಕಾಂಗಿ ಹೋರಾಟದ ಮೂಲಕ ಗಮನ ಸೆಳೆದ ರಿಷಭ್ ಪಂತ್

Ind vs SA Rishabh Pant Unbeaten Century helps Team India Sets 212 runs Target to South Africa to Win Cape Town Test kvn
Author
Bengaluru, First Published Jan 13, 2022, 6:58 PM IST

ಕೇಪ್‌ಟೌನ್‌(ಜ.13): ಟೀಂ ಇಂಡಿಯಾ ವಿಕೆಟ್ ಕೀಪರ್‌ ಬ್ಯಾಟರ್‌ ರಿಷಭ್ ಪಂತ್(Rishabh Pant), ದಕ್ಷಿಣ ಆಫ್ರಿಕಾ ವಿರುದ್ದ ನಿರ್ಣಾಯಕ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ ಏಷ್ಯಾದ ಮೊದಲ ವಿಕೆಟ್‌ ಕೀಪರ್‌ ಬ್ಯಾಟರ್ ಎನ್ನುವ ಕೀರ್ತಿಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಅಂತಿಮವಾಗಿ ಟೀಂ ಇಂಡಿಯಾ (Team India) ಎರಡನೇ ಇನಿಂಗ್ಸ್‌ನಲ್ಲಿ 198 ರನ್‌ ಬಾರಿಸಿ ಸರ್ವಪತನ ಕಂಡಿದ್ದು, ಕೇಪ್‌ಟೌನ್ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತ ತಂಡವು ಆತಿಥೇಯರಿಗೆ 212 ರನ್‌ಗಳ ಗುರಿ ನೀಡಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲಬೇಕಿದ್ದರೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಟೀಂ ಇಂಡಿಯಾ 211 ರನ್‌ಗಳೊಳಗಾಗಿ ಆಲೌಟ್ ಮಾಡಬೇಕಿದೆ

ಮೊದಲ ಇನಿಂಗ್ಸ್‌ನಲ್ಲಿ ಕೇವಲ 13 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಗಿತ್ತು. ಒಂದು ಹಂತದಲ್ಲಿ 58 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಐದನೇ ವಿಕೆಟ್‌ಗೆ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ರಿಷಭ್ ಪಂತ್ ಜೋಡಿ 94 ರನ್‌ಗಳ ಜತೆಯಾಟವಾಡುವ ತಂಡಕ್ಕೆ ಆಸರೆಯಾದರು. ವಿರಾಟ್ ಕೊಹ್ಲಿ 143 ಎಸೆತಗಳನ್ನು ಎದುರಿಸಿ ಕೇವಲ 29 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಯಾವೊಬ್ಬ ಬ್ಯಾಟರ್‌ ಸಹ ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ಹೀಗಿದ್ದೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ ವೃತ್ತಿಜೀವನದ ನಾಲ್ಕನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. 

ರಿಷಭ್ ಪಂತ್ 133 ಎಸೆತಗಳನ್ನು ಎದುರಿಸಿ  6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 100 ಬಾರಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಭಾರತದ ನೆಲದಲ್ಲಿ ಟೆಸ್ಟ್ ಶತಕ ಸಿಡಿಸಿದ ವಿಶ್ವದ ಎರಡನೇ ವಿಕೆಟ್‌ ಕೀಪರ್ ಬ್ಯಾಟರ್ ಎನ್ನುವ ಕೀರ್ತಿಗೆ ಪಂತ್ ಭಾಜನರಾಗಿದ್ದಾರೆ. ಈ ಮೊದಲು ಆಸ್ಟ್ರೇಲಿಯಾದ ಆಡಂ ಗಿಲ್‌ಕ್ರಿಸ್ಟ್‌ ಈ 4 ರಾಷ್ಟ್ರಗಳಲ್ಲಿ ಟೆಸ್ಟ್ ಶತಕ ಬಾರಿಸಿದ್ದರು.

Ind vs SA, Cape Town Test: ಕೈಕೊಟ್ಟ ಪೂಜಾರ, ರಹಾನೆ, ಕೊಹ್ಲಿ-ಪಂತ್ ಮೇಲೆ ಎಲ್ಲರ ಚಿತ್ತ..!

ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ 8 ಬ್ಯಾಟರ್‌ಗಳು: ನಿರ್ಣಾಯಕ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಮೂವರು ಬ್ಯಾಟರ್‌ಗಳು ಮಾತ್ರ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾದರು. ಆರಂಭಿಕ ಬ್ಯಾಟರ್ ಕೆ.ಎಲ್‌ ರಾಹುಲ್‌(10), ವಿರಾಟ್ ಕೊಹ್ಲಿ(29) ಹಾಗೂ ರಿಷಭ್ ಪಂತ್(100) ರನ್ ಬಾರಿಸಿದ್ದು ಬಿಟ್ಟರೆ, ಉಳಿದ್ಯಾವ ಭಾರತದ ಬ್ಯಾಟರ್ ಸಹ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಮಯಾಂಕ್ ಅಗರ್‌ವಾಲ್ ಸೇರಿದಂತೆ ಭಾರತದ 8 ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಇತಿಹಾಸದಲ್ಲಿ ಮೊದಲ ಬಾರಿಗೆ 20 ವಿಕೆಟ್ ಕ್ಯಾಚ್ ಮೂಲಕ ಔಟ್‌: ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ 20 ವಿಕೆಟ್‌ಗಳು ಕ್ಯಾಚ್ ರೂಪದಲ್ಲಿ ಔಟ್ ಆಗಿದ್ದು ಇತಿಹಾಸದಲ್ಲಿ ಇದೇ ಮೊದಲು. ಭಾರತದ ಯಾವೊಬ್ಬ ಬ್ಯಾಟರ್‌ ಸಹಾ ಬೌಲ್ಡ್, ಸ್ಟಂಪೌಟ್ ಅಥವಾ ರನೌಟ್ ಮೂಲಕ ವಿಕೆಟ್‌ ಕೈಚೆಲ್ಲಿಲ್ಲ. ಎಲ್ಲಾ ವಿಕೆಟ್‌ಗಳು ಕ್ಯಾಚ್ ಮೂಲಕ ಉರುಳಿದ್ದು ಇದೇ ಮೊದಲು.

ಎರಡನೇ ಇನಿಂಗ್ಸ್‌ನಲ್ಲಿ ಮಾರ್ಕೊ ಯಾನ್ಸೆನ್‌ 4 ವಿಕೆಟ್ ಪಡೆದರೆ, ಕಗಿಸೋ ರಬಾಡ ಹಾಗೂ ಲುಂಗಿ ಎಂಗಿಡಿ ತಲಾ 3 ವಿಕೆಟ್ ಪಡೆದರು. 

Follow Us:
Download App:
  • android
  • ios