India vs south africa 2nd test: ಅಂತಿಮ ದಿನದಾಟದ ಆರಂಭದಲ್ಲಿ ಭಾರತ 27-2 ಸ್ಕೋರ್ ಮಾಡಿತ್ತು. ಕೇವಲ 37 ರನ್ ನೀಡಿ ಆರು ವಿಕೆಟ್ ಪಡೆದ ಸೈಮನ್ ಹಾರ್ಮರ್ ಭಾರತ ತಂಡವನ್ನು ಕಟ್ಟಿಹಾಕಿದರು.

ಗುವಾಹಟಿ: ಗುವಾಹಟಿ ಟೆಸ್ಟ್‌ನಲ್ಲಿ ಭಾರತವನ್ನು 408 ರನ್‌ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ, ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. 549 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಎರಡನೇ ಇನ್ನಿಂಗ್ಸ್‌ನಲ್ಲಿ ಊಟದ ವಿರಾಮಕ್ಕೂ ಮುನ್ನ 140 ರನ್‌ಗಳಿಗೆ ಆಲೌಟ್ ಆಗುವ ಮೂಲಕ 408 ರನ್‌ಗಳ ಹೀನಾಯ ಸೋಲು ಅನುಭವಿಸಿತು. ರನ್‌ಗಳ ಅಂತರದಲ್ಲಿ ಇದು ಭಾರತದ ಟೆಸ್ಟ್ ಇತಿಹಾಸದಲ್ಲಿಯೇ ಅತಿದೊಡ್ಡ ಸೋಲಾಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 54 ರನ್ ಗಳಿಸಿದ ರವೀಂದ್ರ ಜಡೇಜಾ ಮಾತ್ರ ಭಾರತದ ಪರ ಹೋರಾಡಿದರು. ಐವರು ಮಾತ್ರ ಎರಡಂಕಿ ದಾಟಿದ ಇನ್ನಿಂಗ್ಸ್‌ನಲ್ಲಿ, 139 ಎಸೆತಗಳನ್ನು ಎದುರಿಸಿದ ಸಾಯಿ ಸುದರ್ಶನ್ 14 ರನ್ ಗಳಿಸಿದರೆ, ನಾಯಕ ರಿಷಭ್ ಪಂತ್ 13 ಮತ್ತು ವಾಷಿಂಗ್ಟನ್ ಸುಂದರ್ 16 ರನ್ ಗಳಿಸಿ ಔಟಾದರು.

ಅಂತಿಮ ದಿನದಾಟದ ಆರಂಭದಲ್ಲಿ ಭಾರತ 27-2 ಸ್ಕೋರ್ ಮಾಡಿತ್ತು. ಕೇವಲ 37 ರನ್ ನೀಡಿ ಆರು ವಿಕೆಟ್ ಪಡೆದ ಸೈಮನ್ ಹಾರ್ಮರ್ ಭಾರತವನ್ನು ಕಟ್ಟಿಹಾಕಿದರು. ಮಾರ್ಕೊ ಯಾನ್ಸನ್ ಎರಡು ವಿಕೆಟ್ ಪಡೆದರೆ, ಸೇನುರಾನ್ ಮುತ್ತುಸಾಮಿ ಮತ್ತು ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಪಡೆದರು. 

2000ನೇ ಇಸವಿಯ ನಂತರ ದಕ್ಷಿಣ ಆಫ್ರಿಕಾ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿರುವುದು ಇದೇ ಮೊದಲು. ಭಾರತದ ಟೆಸ್ಟ್ ಇತಿಹಾಸದಲ್ಲಿ ಇದು ಮೂರನೇ ವೈಟ್‌ವಾಶ್ ಆಗಿದೆ. ಈ ಹಿಂದೆ 2000ರಲ್ಲಿ ದಕ್ಷಿಣ ಆಫ್ರಿಕಾ ಮತ್ತು 2024ರಲ್ಲಿ ನ್ಯೂಜಿಲೆಂಡ್ ಭಾರತವನ್ನು ತವರಿನಲ್ಲಿಯೇ ಕ್ಲೀನ್ ಸ್ವೀಪ್ ಮಾಡಿತ್ತು.

ಸ್ಕೋರ್: ದಕ್ಷಿಣ ಆಫ್ರಿಕಾ 489, 260-5, ಭಾರತ 201-140.

ಕುಸಿತದ ಸರಮಾಲೆ

549 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಅಂತಿಮ ದಿನದಾಟವನ್ನು 27 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಸ್ಥಿತಿಯಲ್ಲಿ ಆರಂಭಿಸಿತು. ಆರಂಭದಲ್ಲಿಯೇ ಸಾಯಿ ಸುದರ್ಶನ್ ಅವರನ್ನು ಮಾರ್ಕೊ ಯಾನ್ಸನ್ ಔಟ್ ಮಾಡಿದ್ದರೂ, ಅದು ನೋ ಬಾಲ್ ಆಗಿದ್ದರಿಂದ ಬಚಾವಾದರು. ನಂತರ ಕುಲದೀಪ್ ಯಾದವ್ ಅವರ ಕ್ಯಾಚನ್ನು ಏಡನ್ ಮಾರ್ಕ್ರಾಮ್ ಕೈಬಿಟ್ಟರು. ಆದರೆ ಇದ್ಯಾವುದೂ ಭಾರತಕ್ಕೆ ನೆರವಾಗಲಿಲ್ಲ. 

ಕುಲದೀಪ್ ಅವರನ್ನು ಬೌಲ್ಡ್ ಮಾಡುವ ಮೂಲಕ ಭಾರತದ ಕುಸಿತಕ್ಕೆ ನಾಂದಿ ಹಾಡಿದ ಸೈಮನ್ ಹಾರ್ಮರ್, ಅದೇ ಓವರ್‌ನಲ್ಲಿ ಧ್ರುವ್ ಜುರೆಲ್ ಅವರನ್ನು ಸ್ಲಿಪ್‌ನಲ್ಲಿದ್ದ ಮಾರ್ಕ್ರಾಮ್‌ಗೆ ಕ್ಯಾಚ್ ನೀಡಿ ಔಟ್ ಮಾಡಿದರು. ನಾಯಕ ರಿಷಭ್ ಪಂತ್ ಸಿಕ್ಸರ್ ಮತ್ತು ಫೋರ್ ಬಾರಿಸಿ ಆಕ್ರಮಣಕಾರಿ ಆಟಕ್ಕೆ ಮುಂದಾದರೂ, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಹಾರ್ಮರ್ ಎಸೆತದಲ್ಲಿ ಮಾರ್ಕ್ರಾಮ್‌ಗೆ ಕ್ಯಾಚ್ ನೀಡಿ ಪಂತ್ ನಿರ್ಗಮಿಸಿದಾಗ ಭಾರತ 58-5ಕ್ಕೆ ಕುಸಿಯಿತು. ಎರಡನೇ ಸೆಷನ್‌ನಲ್ಲಿ ಜಡೇಜಾ ಜೊತೆಗೂಡಿ ನಿಧಾನವಾಗಿ ಆಡುತ್ತಿದ್ದ ಸಾಯಿ ಸುದರ್ಶನ್ ಅವರನ್ನು ಸೇನುರಾನ್ ಮುತ್ತುಸಾಮಿ ಔಟ್ ಮಾಡಿದಾಗ ಭಾರತದ ಸೋಲು ಖಚಿತವಾಯಿತು.

ಇದನ್ನೂ ಓದಿ: ಗುವಾಹಟಿ ಟೆಸ್ಟ್: ಮತ್ತೊಂದು ವೈಟ್‌ವಾಷ್‌ನತ್ತ ಮುಖ ಮಾಡಿದ ಟೀಂ ಇಂಡಿಯಾ! ಗಂಭೀರ್ ತಲೆದಂಡವಾಗುತ್ತಾ?

ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಪ್ರತಿರೋಧ ತೋರಲು ಯತ್ನಿಸಿದರೂ, 35 ರನ್‌ಗಳ ಜೊತೆಯಾಟವನ್ನು ಮುರಿದ ಹಾರ್ಮರ್, ಭಾರತದ ಭರವಸೆಗಳಿಗೆ ಕೊನೆಮೊಳೆ ಹೊಡೆದು ಐದು ವಿಕೆಟ್ ಗೊಂಚಲು ಪಡೆದರು. ಕೇವಲ 3 ಎಸೆತಗಳನ್ನು ಎದುರಿಸಿದ ನಿತೀಶ್ ಕುಮಾರ್ ರೆಡ್ಡಿಯನ್ನು ಶೂನ್ಯಕ್ಕೆ ಔಟ್ ಮಾಡಿದ ಹಾರ್ಮರ್ ಮಿಂಚಿದರು. ನಂತರ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಔಟ್ ಮಾಡಿದ ಕೇಶವ್ ಮಹಾರಾಜ್, ಭಾರತದ ಹೀನಾಯ ಸೋಲನ್ನು ಪೂರ್ಣಗೊಳಿಸಿದರು.

ಇದನ್ನೂ ಓದಿ: ಅವನ್ನೊಬ್ಬ ಆಲ್ರೌಂಡರ್ರಾ? ಅವನ್ಯಾಕೆ ಆಯ್ಕೆ ಮಾಡಿದ್ರಿ?: ಹೆಡ್‌ಕೋಚ್ ಗಂಭೀರ್ ಮೇಲೆ ತಿರುಗಿಬಿದ್ದ ವಿಶ್ವಕಪ್ ಹೀರೋ!