ಮುಂದಿನ ವರ್ಷದ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಿ 2023ರ ಸೋಲಿಗೆ ಸೇಡು ತೀರಿಸಿಕೊಳ್ಳಲು ಬಯಸುವುದಾಗಿ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಮುಂಬೈ: ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ವೇಳಾಪಟ್ಟಿಯನ್ನು ಐಸಿಸಿ ನಿನ್ನೆ ಅಧಿಕೃತವಾಗಿ ಬಿಡುಗಡೆ ಮಾಡಿದ ಬೆನ್ನಲ್ಲೇ, ವಿಶ್ವಕಪ್ ಫೈನಲ್‌ನಲ್ಲಿ ಯಾರನ್ನು ಎದುರಾಳಿಯಾಗಿ ಪಡೆಯಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಭಾರತೀಯ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅಚ್ಚರಿಯ ರೀತಿಯಲ್ಲಿ ಉತ್ತರಿಸಿದ್ದಾರೆ. ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ ಸಮಾರಂಭದಲ್ಲಿ ನಿರೂಪಕರ ಪ್ರಶ್ನೆಗೆ ಸೂರ್ಯಕುಮಾರ್ ಯಾದವ್ ಈ ಉತ್ತರ ನೀಡಿದರು.
ನಮಗೆ ಫೈನಲ್‌ನಲ್ಲಿ ಆಸ್ಟ್ರೇಲಿಯಾವೇ ಸಿಗಬೇಕೆಂದ ಸೂರ್ಯಕುಮಾರ್ ಯಾದವ್
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಹೆಸರನ್ನು ಹೇಳದೆ, ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಾಳಿಯಾಗಿ ಪಡೆಯಲು ಬಯಸುವುದಾಗಿ ಸೂರ್ಯಕುಮಾರ್ ಯಾದವ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ಅದಕ್ಕೊಂದು ಕಾರಣವೂ ಇದೆ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 140 ಕೋಟಿ ಭಾರತೀಯರ ಕನಸನ್ನು ಭಗ್ನಗೊಳಿಸಿ ಆಸ್ಟ್ರೇಲಿಯಾ ಕಿರೀಟವನ್ನು ಗೆದ್ದುಕೊಂಡಿತ್ತು. ಇದಕ್ಕಾಗಿಯೇ ಆಸೀಸ್ ಎದುರು ಸೇಡು ತೀರಿಸಿಕೊಳ್ಳಲು ಸೂರ್ಯಕುಮಾರ್ ಯಾದವ್, ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ಆಸೀಸ್ ತಂಡವನ್ನೇ ಎದುರಾಳಿಯಾಗಿ ಪಡೆಯಲು ಬಯಸಿದ್ದಾರೆ. ಐಸಿಸಿ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನ ಫೈನಲ್‌ಗೆ ಬಂದರೆ, ಫೈನಲ್ ಪಂದ್ಯ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ. ಒಂದು ವೇಳೆ ಭಾರತ ಫೈನಲ್‌ಗೆ ಬಂದು ಪಾಕಿಸ್ತಾನ ನಾಕೌಟ್‌ನಲ್ಲೇ ಹೊರಬಿದ್ದರೇ ಫೈನಲ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚುಟುಕು ವಿಶ್ವಕಪ್ ಫೈನಲ್ ಪಂದ್ಯವು ನಡೆಯಲಿದೆ.
ರೋಹಿತ್ ಶರ್ಮಾ ಯಾರಾದ್ರೂ ಓಕೆ!
ಅದೇ ಸಮಯದಲ್ಲಿ, ಫೈನಲ್‌ನಲ್ಲಿ ಯಾರನ್ನು ಎದುರಾಳಿಯಾಗಿ ಪಡೆಯಲು ಬಯಸುತ್ತೀರಿ ಎಂದು ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ನಿರೂಪಕರು ಕೇಳಿದಾಗ, ದಯವಿಟ್ಟು ಐಸಿಸಿಯ ಪರವಾಗಿ ಮಾತನಾಡಿ ಎಂದು ಸೂರ್ಯಕುಮಾರ್, ರೋಹಿತ್‌ಗೆ ಮನವಿ ಮಾಡಿದರು. ರೋಹಿತ್ ಅವರನ್ನು ಈ ಹಿಂದೆಯೇ ವಿಶ್ವಕಪ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿತ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮಾತ್ರವಲ್ಲ, ಭಾರತದ ಎದುರಾಳಿಯಾಗಿ ಯಾರು ಬಂದರೂ ಅವರನ್ನು ಸೋಲಿಸಿ ಕಿರೀಟ ಗೆಲ್ಲುತ್ತೇವೆ ಎಂದು ರೋಹಿತ್ ಹೇಳಿದರು. ಖಂಡಿತವಾಗಿಯೂ ಭಾರತ ಫೈನಲ್‌ಗೆ ಬರಬೇಕೆಂದು ನಾನು ಬಯಸುತ್ತೇನೆ. ಫೈನಲ್‌ನಲ್ಲಿ ಆ ತಂಡ ಬೇಕು, ಈ ತಂಡ ಬೇಕು ಅಂತ ನಾನು ಹೇಳುವುದಿಲ್ಲ, ಆಗಿದ್ದು ಆಗಿಹೋಯ್ತು ಎಂದು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೇಳಿದ್ದಾರೆ.
ಆಸ್ಟ್ರೇಲಿಯಾವನ್ನು ಫೈನಲ್‌ನಲ್ಲಿ ಎದುರಿಸಬೇಕು ಎಂದು ಸೂರ್ಯ ಹೇಳಲು ಕಾರಣ ಅಷ್ಟೊಂದು ಹೃದಯ ಭಾರವಾಗಿರಬಹುದು. ಆದರೆ ನನ್ನ ಪ್ರಕಾರ, ಭಾರತ ಯಾವುದೇ ತಂಡದ ವಿರುದ್ಧ ಫೈನಲ್ ಆಡಿದರೂ ಸಂತೋಷವೇ. ಅದರಲ್ಲಿ ಗೆಲ್ಲುವುದನ್ನು ನೋಡಲು ನಾನು ಬಯಸುತ್ತೇನೆ. ಬೇರೆ ತಂಡಗಳು ಏನು ಯೋಚಿಸುತ್ತವೆ ಎಂದು ನನಗೆ ಗೊತ್ತಿಲ್ಲ. ಭಾರತ ಫೈನಲ್‌ಗೆ ತಲುಪಬೇಕು ಮತ್ತು ಕಿರೀಟವನ್ನು ಗೆಲ್ಲಬೇಕು ಎಂಬುದು ನನ್ನ ಏಕೈಕ ಆಸೆ ಎಂದು ರೋಹಿತ್ ಹೇಳಿದರು.
ಮುಂದಿನ ವರ್ಷ ಫೆಬ್ರವರಿ 7 ರಂದು ಆರಂಭವಾಗುವ ಟಿ20 ವಿಶ್ವಕಪ್‌ನಲ್ಲಿ ಮುಂಬೈನಲ್ಲಿ ಅಮೆರಿಕ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದೆ. ಫೆಬ್ರವರಿ 12 ರಂದು ದೆಹಲಿಯಲ್ಲಿ ನಮೀಬಿಯಾ, 15 ರಂದು ಕೊಲಂಬೊದಲ್ಲಿ ಪಾಕಿಸ್ತಾನ, 18 ರಂದು ಅಹಮದಾಬಾದ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡಗಳು ಗ್ರೂಪ್ ಹಂತದಲ್ಲಿ ಭಾರತದ ಎದುರಾಳಿಗಳಾಗಿವೆ.


