ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸೋಲಿನ ಹಿನ್ನೆಲೆಯಲ್ಲಿ, ಕೋಚ್ ಗೌತಮ್ ಗಂಭೀರ್ ಅವರ ತಂಡದ ಆಯ್ಕೆ ನಿರ್ಧಾರಗಳ ವಿರುದ್ಧ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪದೇ ಪದೇ ತಂಡದಲ್ಲಿ ಬದಲಾವಣೆ ಮಾಡುವುದನ್ನು ಶ್ರೀಕಾಂತ್ ಕಟುವಾಗಿ ಟೀಕಿಸಿದ್ದಾರೆ.

ಚೆನ್ನೈ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲೂ ಭಾರತ ಸೋಲಿನತ್ತ ಸಾಗುತ್ತಿರುವಾಗ, ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ಭಾರತೀಯ ಆಟಗಾರ ಮತ್ತು 1983ರ ವಿಶ್ವಕಪ್ ಹೀರೋ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗಂಭೀರ್ ಪದೇ ಪದೇ ತಂಡದಲ್ಲಿ ಬದಲಾವಣೆ ಮಾಡುವುದನ್ನು ಟೀಕಿಸಿದ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಶ್ರೀಕಾಂತ್, ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನು ಪ್ಲೇಯಿಂಗ್ XIಗೆ ಆಯ್ಕೆ ಮಾಡಿದ್ದನ್ನು ಖಂಡಿಸಿದ್ದಾರೆ.

ನಿತೀಶ್ ಕುಮಾರ್ ಆಲ್ರೌಂಡ್ ಸಾಮರ್ಥ್ಯ ಪ್ರಶ್ನಿಸಿದ ಶ್ರೀಕಾಂತ್

ನಿತೀಶ್ ಕುಮಾರ್ ರೆಡ್ಡಿಯನ್ನು ಯಾರು ಆಲ್ರೌಂಡರ್ ಅಂತ ಕರೆಯೋದು? ಅವನ ಬೌಲಿಂಗ್ ನೋಡಿದ್ರೆ ಯಾರಾದ್ರೂ ಅವನನ್ನು ಆಲ್ರೌಂಡರ್ ಅಂತಾರಾ? ಅವನು ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಂಚುರಿ ಹೊಡೆದಿದ್ದು ನಿಜ. ಆದರೆ ಅದಾದ ಮೇಲೆ ಅವನೇನು ಮಾಡಿದ್ದಾನೆ? ಇದೆಲ್ಲಾ ಸುಮ್ನೆ ನೋಡಿಕೊಂಡು ಇರೋಕೆ ಆಗೋಲ್ಲ. ನಿತೀಶ್ ಕುಮಾರ್ ರೆಡ್ಡಿ ಆಲ್ರೌಂಡರ್ ಆದ್ರೆ, ನಾನೂ ಕೂಡಾ ಒಬ್ಬ ದೊಡ್ಡ ಆಲ್ರೌಂಡರ್. ಇದ್ದಿದ್ದನ್ನು ಇದ್ದ ಹಾಗೆ ಹೇಳಬೇಕು. ನಿತೀಶ್ ಬೌಲಿಂಗ್‌ನಲ್ಲಿ ಏನಾದ್ರೂ ವಿಶೇಷತೆ ಇದೆಯಾ, ಬಾಲ್‌ಗೆ ಮೂವ್‌ಮೆಂಟ್ ಇದೆಯಾ, ಪೇಸ್ ಇದೆಯಾ, ಅಥವಾ ಅವನೇನಾದ್ರೂ ಮಾರಕ ಬ್ಯಾಟರ್ ಹೌದಾ? ಇದ್ಯಾವುದೂ ಇಲ್ಲದವನನ್ನು ಹೇಗೆ ಆಲ್ರೌಂಡರ್ ಅಂತ ಕರೆಯೋದು? ಎಂದು ಶ್ರೀಕಾಂತ್ ವ್ಯಂಗ್ಯವಾಡಿದ್ದಾರೆ.

ಟೆಸ್ಟ್ ತಂಡದಲ್ಲಿ ಮಾತ್ರವಲ್ಲ, ನಿತೀಶ್ ಏಕದಿನ ತಂಡಕ್ಕೂ ಹೇಗೆ ಬಂದ? ಅದಕ್ಕಾಗಿ ಅವನೇನು ಸಾಧನೆ ಮಾಡಿದ್ದಾನೆ? ಈಗ ಅವನನ್ನು ಹಾರ್ದಿಕ್ ಪಾಂಡ್ಯಗೆ ಬದಲಿಯಾಗಿ ತಂಡಕ್ಕೆ ತೆಗೆದುಕೊಂಡಿದ್ದಾರಾ? ಹಾಗಿದ್ರೆ ಯಾಕೆ ಸ್ಥಿರ ಪ್ರದರ್ಶನ ನೀಡುತ್ತಿರುವ ಅಕ್ಷರ್ ಪಟೇಲ್‌ನನ್ನು ತಂಡಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಶ್ನಿಸಿದ್ದಾರೆ. ಮೆಲ್ಬೋರ್ನ್ ಸೆಂಚುರಿ ನಂತರ ಆಡಿದ 10 ಪಂದ್ಯಗಳಲ್ಲಿ 28 ರನ್ ಸರಾಸರಿಯಲ್ಲಿ ರನ್ ಗಳಿಸಿರುವ ನಿತೀಶ್, ಒಟ್ಟು 8 ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಮೊದಲ ಟೆಸ್ಟ್‌ನಿಂದ ಕೈಬಿಡಲಾಗಿದ್ದ ನಿತೀಶ್‌ನನ್ನು ಎರಡನೇ ಟೆಸ್ಟ್‌ಗೆ ಮತ್ತೆ ಕರೆಸಿ ಪ್ಲೇಯಿಂಗ್ XIನಲ್ಲಿ ಸೇರಿಸಲಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 10 ರನ್ ಗಳಿಸಿ ಔಟಾದ ನಿತೀಶ್, ಎರಡೂ ಇನ್ನಿಂಗ್ಸ್‌ಗಳಿಂದ ಕೇವಲ 10 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯಲಿಲ್ಲ.

ಎರಡನೇ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್‌ನನ್ನು ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಸೇರಿಸಿದ ನಿರ್ಧಾರವನ್ನೂ ಶ್ರೀಕಾಂತ್ ಪ್ರಶ್ನಿಸಿದ್ದಾರೆ. ಸರ್ಫರಾಜ್ ಖಾನ್ ಅವರಂತಹ ಸ್ಪೆಷಲಿಸ್ಟ್ ಬ್ಯಾಟರ್‌ಗಳನ್ನು ಕಡೆಗಣಿಸಿ ಜುರೆಲ್‌ಗೆ ಅವಕಾಶ ನೀಡಲಾಗಿದೆ ಎಂದು ಶ್ರೀಕಾಂತ್ ಹೇಳಿದರು. ಪ್ರತಿ ಪಂದ್ಯದಲ್ಲೂ ತಂಡವನ್ನು ಬದಲಾಯಿಸುವ ಗಂಭೀರ್ ಶೈಲಿಯನ್ನು ಶ್ರೀಕಾಂತ್ ಕಟುವಾಗಿ ಟೀಕಿಸಿದ್ದಾರೆ. ಗಂಭೀರ್ ನನಗೆ ಏನು ಬೇಕಾದರೂ ಹೇಳಿಕೊಳ್ಳಲಿ, ನನಗದು ಮುಖ್ಯವಲ್ಲ. ನಾನು ಮಾಜಿ ನಾಯಕ ಮತ್ತು ಮುಖ್ಯ ಆಯ್ಕೆಗಾರನಾಗಿದ್ದೆ. ಹಾಗಾಗಿ ನಾನೇನು ಮಾತನಾಡುತ್ತಿದ್ದೇನೆ ಎಂಬುದರ ಬಗ್ಗೆ ನನಗೆ ಚೆನ್ನಾಗಿ ಅರಿವಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.

ಮತ್ತೊಂದು ಸೋಲಿನ ಹೊಸ್ತಿಲಲ್ಲಿ ಟೀಂ ಇಂಡಿಯಾ

ಗುವಾಹಟಿ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡವು 549 ರನ್‌ಗಳ ಕಠಿಣ ಗುರಿ ನೀಡಿದೆ. ಇದೀಗ ನಾಲ್ಕನೇ ದಿನದಾಟದಂತ್ಯದ ವೇಳೆಗೆ ಭಾರತ ತಂಡವು ಎರಡು ವಿಕೆಟ್ ಕಳೆದುಕೊಂಡು 27 ರನ್ ಬಾರಿಸಿದೆ. ಯಶಸ್ವಿ ಜೈಸ್ವಾಲ್ 13 ಹಾಗೂ ಕೆ ಎಲ್ ರಾಹುಲ್ 6 ರನ್ ಗಳಿಸಿ ವಿಕೆಟ್‌ ಕೈಚೆಲ್ಲಿದ್ದಾರೆ. ಇದೀಗ ನೈಟ್‌ವಾಚ್‌ಮನ್ ಕುಲ್ದೀಪ್ ಯಾದವ್ 4 ಹಾಗೂ ಸಾಯಿ ಸುದರ್ಶನ್ 2 ರನ್ ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಂದಹಾಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಈಗಾಗಲೇ 1-0 ಮುನ್ನಡೆ ಸಾಧಿಸಿದೆ.