ಜೊಹಾನ್ಸ್‌ಬರ್ಗ್‌(ಮೇ.18): ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ ಬ್ಯಾಕ್‌ ಮಾಡಲಿದ್ದಾರೆ ಎಂದು ಚಾತಕ ಪಕ್ಷಿಯಂತೆ ಕಾದುಕುಳಿತಿದ್ದ ಅಭಿಮಾನಿಗಳ ಪಾಲಿಗೆ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದ್ದೆ.  ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹಿಂಪಡೆಯದಿರಲು ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ ತೀರ್ಮಾನಿಸಿದ್ದಾರೆ.

ಹೌದು, ಇದರೊಂದಿಗೆ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್‌ ಹರಿಣಗಳ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ನಿರೀಕ್ಷೆ ಕೊನೆಗೂ ಸುಳ್ಳಾದಂತೆ ಆಗಿದೆ. '' ಎಬಿ ಡಿವಿಲಿಯರ್ಸ್‌ ಜತೆ ಮಾತುಕತೆ ಮುಕ್ತಾಯವಾಗಿದೆ. ಎಬಿಡಿ ತಾವು ಈಗಾಗಲೇ ತೆಗೆದುಕೊಂಡಿರುವ ನಿವೃತ್ತಿ ತೀರ್ಮಾನವೇ ಅಂತಿಮ ಎಂದು ಖಚಿತ ಪಡಿಸಿದ್ದಾರೆ'' ಎಂದು ಕ್ರಿಕೆಟ್ ಸೌತ್ ಆಫ್ರಿಕಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ವಿಂಡೀಸ್‌ ಎದುರಿನ ಸರಣಿಗೆ ಎಬಿ ಡಿವಿಲಿಯರ್ಸ್‌ ಆಫ್ರಿಕಾ ತಂಡಕ್ಕೆ ಎಂಟ್ರಿ..?

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಮುಂಬರುವ ವೆಸ್ಟ್ ಇಂಡೀಸ್‌ ವಿರುದ್ದದ ಟೆಸ್ಟ್ ಹಾಗೂ ಟಿ20 ಸರಣಿಗೆ ಹರಿಣಗಳ ತಂಡವನ್ನು ಪ್ರಕಟಿಸಿದೆ. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಪರ ಕೇವಲ 7 ಪಂದ್ಯಗಳನ್ನಾಡಿ 51.75ರ ಸರಾಸರಿಯಲ್ಲಿ 207 ರನ್‌ ಚಚ್ಚಿದ್ದ ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ ಬ್ಯಾಕ್ ಮಾಡುವ ಒಲವು ತೋರಿಸಿದ್ದರು. ಹೀಗಾಗಿ ವಿಂಡೀಸ್ ವಿರುದ್ದದ ಸರಣಿಗೆ ಎಬಿಡಿ ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

37 ವರ್ಷದ ಎಬಿಡಿ ನಾನಿನ್ನು ಕೋಚ್ ಮಾರ್ಕ್‌ ಬೌಷರ್ ಜತೆ ಮಾತುಕತೆ ನಡೆಸಿಲ್ಲ. ಕಳೆದ ವರ್ಷ ಬೌಷರ್‌, ನಿವೃತ್ತಿ ವಾಪಾಸ್ ಪಡೆದು ತಂಡ ಕೂಡಿಕೊಳ್ಳಲು ಇಷ್ಟವಿದೆಯಾ ಎಂದು ಕೇಳಿದ್ದರು. ನಾನದಕ್ಕೆ ಖಂಡಿತವಾಗಿಯೂ ಇಷ್ಟವಿದೆ ಎಂದು ಹೇಳಿದ್ದೆ ಎಂದು ಕಳೆದ ತಿಂಗಳ ಐಪಿಎಲ್‌ ವೇಳೆ ಆರ್‌ಸಿಬಿ ಕ್ರಿಕೆಟಿಗ ತಿಳಿಸಿದ್ದರು.