ವಿಂಡೀಸ್ ಎದುರಿನ ಸರಣಿಗೆ ಎಬಿ ಡಿವಿಲಿಯರ್ಸ್ ಆಫ್ರಿಕಾ ತಂಡಕ್ಕೆ ಎಂಟ್ರಿ..?
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಬಿ ಡಿವಿಲಿಯರ್ಸ್ ಕಮ್ ಬ್ಯಾಕ್ ಮಾಡುವುದು ಯಾವಾಗ ಎಂದು ಚಾತಕಪಕ್ಷಿಯಂತೆ ಕಾದುಕುಳಿತಿರುವ ಕ್ರಿಕೆಟ್ ಅಭಿಮಾನಿಗಳಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಡೈರೆಕ್ಟರ್ ಗ್ರೇಮ್ ಸ್ಮಿತ್ ಗುಡ್ ನ್ಯೂಸ್ ನೀಡಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಕೇಪ್‌ಟೌನ್(ಮೇ.07): ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್, ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ನಿವೃತ್ತಿ ವಾಪಾಸ್ ಪಡೆದು, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಈ ಕುರಿತಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಡೈರೆಕ್ಟರ್ ಗ್ರೇಮ್ ಸ್ಮಿತ್ ಸುಳಿವನ್ನು ನೀಡಿದ್ದಾರೆ.
2018ರಲ್ಲಿ ತಮ್ಮ 34ನೇ ವಯಸ್ಸಿನಲ್ಲೇ ಎಬಿ ಡಿವಿಲಿಯರ್ಸ್ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಇದರೊಂದಿಗೆ 15 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪೂರ್ಣವಿರಾಮ ಹಾಕಿದ್ದರು. ಬಳಿಕ ಟಿ20 ಲೀಗ್‌ಗಳಲ್ಲಿ ಎಬಿಡಿ ತಮ್ಮ ಝಲಕ್ ಮುಂದುವರೆಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಭಾಂಧವನಾಗಿ ಗುರುತಿಸಿಕೊಂಡಿರುವ ಎಬಿಡಿ, ಉಪಯುಕ್ತ ಇನಿಂಗ್ಸ್ ಆಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದು ಮಾತ್ರವಲ್ಲದೇ ಅಭಿಮಾನಿಗಳಿಗೂ ಭರಪೂರ ಮನರಂಜನೆ ಉಣಬಡಿಸಿದ್ದಾರೆ. ಜಗತ್ತಿನ ಮೂಲೆಮೂಲೆಗಳಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿರುವ ಎಬಿಡಿ ಇದೀಗ ತಮ್ಮ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದು ಹರಿಣಗಳ ತಂಡ ಕೂಡಿಕೊಳ್ಳಲು ರೆಡಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳಲು ಎಬಿಡಿಗೆ ಬಾಗಿಲು ತೆರೆದಿದೆ: ಮಾರ್ಕ್ ಬೌಷರ್
ಕಳೆದ ತಿಂಗಳಷ್ಟೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಮಾರ್ಕ್ ಬೌಷರ್ ಕೂಡಾ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಎಬಿಡಿ ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳುವ ಸುಳಿವು ನೀಡಿದ್ದರು. ಇತ್ತೀಚೆಗೆ ಭಾರತದಲ್ಲಿ ನಡೆದ ಐಪಿಎಲ್ ಟೂರ್ನಿಯ ವೇಳೆಯಲ್ಲೂ ಎಬಿಡಿ ತಂಡ ಕೂಡಿಕೊಳ್ಳುವ ಉತ್ಸಾಹವನ್ನು ತೋರಿಸಿದ್ದರು. ಮತ್ತೊಮ್ಮೆ ದಕ್ಷಿಣ ಆಫ್ರಿಕಾ ತಂಡವನ್ನು ಕೂಡಿಕೊಳ್ಳುವುದು ನಿಜಕ್ಕೂ ಖುಷಿ ಎನಿಸಲಿದೆ. ಮಾರ್ಕ್ ಬೌಷರ್ ಮತ್ತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಇಷ್ಟವಿದೆಯೇ ಎಂದು ಕೇಳಿದ್ದರು. ನಾನು ಅದಕ್ಕೆ ಖಂಡಿತಾ ಇಷ್ಟವಿದೆ ಎಂದಿದ್ದೆ ಎಂದು ಹೇಳಿದ್ದರು.
ಎಬಿಡಿ ಮಾತಿಗೆ ಪುಷ್ಠಿ ನೀಡುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಡೈರೆಕ್ಟರ್ ಗ್ರೇಮ್ ಸ್ಮಿತ್ ಸಹಾ ಎಬಿಡಿ ಸೇರಿದಂತೆ ಪ್ರಮುಖ ಆಟಗಾರರು ಹರಿಣಗಳ ತಂಡ ಕೂಡಿಕೊಳ್ಳುವ ಮಾತುಗಳನ್ನು ಆಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು ಸದ್ಯದಲ್ಲಿಯೇ 2 ಪಂದ್ಯಗಳ ಟೆಸ್ಟ್ ಹಾಗೂ 5 ಪಂದ್ಯಗಳ ಟಿ20 ಸರಣಿಯಾಡಲು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಟಿ20 ಸರಣಿಯಲ್ಲಿ ಎಬಿ ಡಿವಿಲಿಯರ್ಸ್ ಅವರನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ನೋಡಬಹುದಾಗಿದೆ ಎಂದು ಸ್ಮಿತ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಜೂನ್ ತಿಂಗಳಿನಲ್ಲಿ ಕೆರಿಬಿಯನ್ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಎಬಿ ಡಿವಿಲಿಯರ್ಸ್, ಅನುಭವಿ ಸ್ಪಿನ್ನರ್ ಇಮ್ರಾನ್ ತಾಹಿರ್ ಹಾಗೂ ಸ್ಟಾರ್ ಆಲ್ರೌಂಡರ್ ಕ್ರಿಸ್ ಮೋರಿಸ್ ತಂಡ ಕೂಡಿಕೊಳ್ಳುವ ವಿಶ್ವಾಸವನ್ನು ಸ್ಮಿತ್ ವ್ಯಕ್ತಪಡಿಸಿದ್ದಾರೆ.