ಲಾರ್ಡ್ಸ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿ ಚೊಚ್ಚಲ ಪ್ರಶಸ್ತಿ ಜಯಿಸಿದೆ. ಏಯ್ಡನ್ ಮಾರ್ಕ್‌ರಮ್ ಅವರ ಶತಕ ಮತ್ತು ತೆಂಬಾ ಬವುಮಾ ಅವರ ಅರ್ಧಶತಕವು ಹರಿಣಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಲಾರ್ಡ್ಸ್‌: 2023-25ನೇ ಸಾಲಿನ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾವನ್ನು ಬಗ್ಗುಬಡಿದ ದಕ್ಷಿಣ ಆಫ್ರಿಕಾ ತಂಡವು ಚೊಚ್ಚಲ ಬಾರಿಗೆ ಟೆಸ್ಟ್ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗೆಲ್ಲಲು 282 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ತೆಂಬಾ ಬವುಮಾ ನೇತೃತ್ವದ ಹರಿಣಗಳ ಪಡೆ 5 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಆಕರ್ಷಕ ಶತಕ ಸಿಡಿಸಿದ ಆರಂಭಿಕ ಬ್ಯಾಟರ್ ಏಯ್ಡನ್ ಮಾರ್ಕ್‌ರಮ್, ಹರಿಣಗಳಿಗೆ ಅಂಟಿದ್ದ ಚೋಕರ್ಸ್‌ ಹಣೆಪಟ್ಟಿ ಕಳಚುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವು ಬರೋಬ್ಬರಿ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಈ ಮೊದಲು 1998ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದ ಹರಿಣಗಳ ಪಡೆ ಆ ಬಳಿಕ ಐಸಿಸಿ ಟ್ರೋಫಿ ಬರ ಎದುರಿಸಿತ್ತು. ಚೋಕರ್ಸ್ ಪಟ್ಟವನ್ನು ಬೆನ್ನಿಗಿಟ್ಟುಕೊಂಡೇ ಸಾಗಿದ್ದ ದಕ್ಷಿಣ ಆಫ್ರಿಕಾ ತಂಡವು ಇದುವರೆಗೂ ಐಸಿಸಿ ಟೂರ್ನಿಯಲ್ಲಿ 2 ಕ್ವಾರ್ಟರ್ ಫೈನಲ್, 12 ಸೆಮಿಫೈನಲ್ ಹಾಗೂ ಒಂದು ಫೈನಲ್‌ನಲ್ಲಿಸೋಲು ಅನುಭವಿಸಿತ್ತು.

Scroll to load tweet…

ಲಾರ್ಡ್ಸ್‌ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು, ಈ ಅಲ್ಟಿಮೇಟ್ ಟೆಸ್ಟ್ ಗೆಲ್ಲಲು ಬರೋಬ್ಬರಿ 282 ರನ್‌ಗಳ ಕಠಿಣ ಗುರಿ ನೀಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 138 ರನ್‌ಗಳಿಗೆ ಆಲೌಟ್ ಮಾಡಿ ಬೀಗಿದ್ದ ಕಾಂಗರೂ ಸುಲಭ ಗೆಲುವು ದಾಖಲಿಸುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಿತು. ದಕ್ಷಿಣ ಆಫ್ರಿಕಾ ತಂಡವು ಒಂದು ಹಂತದಲ್ಲಿ 70 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಈ ವೇಳೆ ಹರಿಣಗಳ ಪಡೆ ಗೆಲ್ಲಲು ಇನ್ನೂ 212 ರನ್‌ಗಳ ಅಗತ್ಯವಿತ್ತು.

ತೆಂಬಾ-ಮಾರ್ಕ್‌ರಮ್ ಜುಗಲ್ಬಂದಿ: ಈ ವೇಳೆ ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ತೆಂಬಾ ಬವುಮಾ ಹಾಗೂ ಏಯ್ಡನ್ ಮಾರ್ಕ್‌ರಮ್ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಬಲಿಷ್ಠ ಆಸೀಸ್ ಬೌಲಿಂಗ್ ಪಡೆಯನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ 147 ರನ್‌ಗಳ ಅಮೂಲ್ಯ ಜತೆಯಾಟವಾಡಿತು. ಸ್ನಾಯು ಸೆಳೆತದ ನಡುವೆಯೂ ದಿಟ್ಟ ಹೋರಾಟ ನಡೆಸಿದ ನಾಯಕ ತೆಂಬಾ ಬವುಮಾ 134 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 66 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಮತ್ತೊಂದು ತುದಿಯಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಏಯ್ಡನ್ ಮಾರ್ಕ್‌ರಮ್, ಅತ್ಯಂತ ಮೌಲ್ಯಯುತ ಶತಕ ಸಿಡಿಸಿ ಹರಿಣಗಳ ಪಾಲಿಗೆ ಹೀರೋ ಎನಿಸಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದ ಮಾರ್ಕ್‌ರಮ್, ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚಿದರು. ಒಟ್ಟು 207 ಎಸೆತಗಳನ್ನು ಎದುರಿಸಿದ ಮಾರ್ಕ್‌ರಮ್ 14 ಆಕರ್ಷಕ ಬೌಂಡರಿ ಸಹಿತ 136 ರನ್ ಗಳಿಸಿ ಜೋಶ್ ಹೇಜಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿದರು. ಆಗ ಹರಿಣಗಳ ಗೆಲುವಿಗೆ ಬೇಕಿದ್ದಿದ್ದು ಕೇವಲ ಆರು ರನ್ ಮಾತ್ರ.

ತೆಂಬಾ ಬವುಮಾ ಸೂಪರ್ ಕ್ಯಾಪ್ಟನ್:

ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರಿಗೆ ಕ್ರಿಕೆಟ್‌ನಲ್ಲಿ ಗೌರವ ಸಿಕ್ಕಿದ್ದಕ್ಕಿಂತ ಟೀಕೆ, ವ್ಯಂಗ್ಯಗಳು ವ್ಯಕ್ತವಾಗಿದ್ದೇ ಹೆಚ್ಚು. ರಿಸರ್ವೇಷನ್ ಕೋಟಾದಲ್ಲಿ ಆದ ಕ್ಯಾಪ್ಟನ್ ಎನ್ನುವ ಮೂದಲಿಕೆಯೇ ಹೆಚ್ಚು. ಆದರೆ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಒಟ್ಟು 9 ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ 10 ಪಂದ್ಯಗಳ ಪೈಕಿ ಒಂದೂ ಪಂದ್ಯ ಸೋಲದೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸವಲ್ಲಿ ಬವುಮಾ ಯಶಸ್ವಿಯಾಗಿದ್ದಾರೆ. ಇದಷ್ಟೇ ಅಲ್ಲದೇ ಫೈನಲ್‌ನಲ್ಲೂ ನಾಯಕನ ಆಟವಾಡುವ ಮೂಲಕ ಬವುಮಾ ಸೂಪರ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.

ಚಾಂಪಿಯನ್ ತಂಡಕ್ಕೆ ಬಂಪರ್ ಬಹುಮಾನ:

ಟೆಸ್ಟ್ ವಿಶ್ವ ಚಾಂಪಿಯನ್ ಆದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಬರೋಬ್ಬರಿ 3.6 ಮಿಲಿಯನ್ ಅಮೆರಿಕನ್ ಡಾಲರ್(30.79 ಕೋಟಿ ರುಪಾಯಿ) ನಗದು ಬಹುಮಾನ ಸಿಕ್ಕಿತು. ಇನ್ನು ರನ್ನರ್ ಅಪ್ ಸ್ಥಾನ ಪಡೆದ ಆಸ್ಟ್ರೇಲಿಯಾ ತಂಡವು 17.96 ಕೋಟಿ ರುಪಾಯಿ ತನ್ನದಾಗಿಸಿಕೊಂಡಿತು.