ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ವೇಗಿ ಜೋಶ್ ಟಂಗ್ ಗಾಯಗೊಂಡಿದ್ದಾರೆ. ಟಂಗ್ ಬದಲಿಗೆ 19 ವರ್ಷದ ಯುವ ವೇಗಿ ಎಡ್ಡಿ ಜೇಕ್ ತಂಡ ಸೇರಿದ್ದಾರೆ. ಈಗಾಗಲೇ ಇಂಗ್ಲೆಂಡ್ ತಂಡವು ವೇಗದ ಬೌಲರ್‌ಗಳ ಗಾಯದ ಸಮಸ್ಯೆಯಿಂದ ಬಳಲುತ್ತಿದೆ.

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಲೀಡ್ಸ್‌ನ ಹೆಡಿಂಗ್ಲೆ ಮೈದಾನ ಆತಿಥ್ಯ ವಹಿಸಲಿದೆ. ಈ ಮಹತ್ವದ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ವೇಗದ ಬೌಲರ್ ಜೋಶ್ ಟಂಗ್, ಮಹತ್ವದ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದಾರೆ. ಹೀಗಾಗಿ ಜೋಶ್ ಟಂಗ್ ಮೊದಲ ಟೆಸ್ಟ್ ಪಂದ್ಯದಿಂದ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ. ಇದೀಗ ಜೋಶ್ ಟಂಗ್ ಬದಲಿಗೆ 19 ವರ್ಷದ ಯುವ ವೇಗಿ ಎಡ್ಡಿ ಜೇಕ್ ಬ್ಯಾಕಪ್ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಜೋಶ್ ಟಂಗ್ ಈ ಹಿಂದೆಯೂ ತಮ್ಮ ಮಾರಕ ಬೌಲಿಂಗ್ ದಾಳಿಯ ಮೂಲಕ ಆಯ್ಕೆ ಸಮಿತಿಯ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಒಂದು ಕಡೆ ಈಗಾಗಲೇ ಇಂಗ್ಲೆಂಡ್ ತಂಡವು ವೇಗದ ಬೌಲರ್‌ಗಳ ಗಾಯದ ಸಮಸ್ಯೆಗೆ ಸಿಲುಕಿದೆ. ವೇಗದ ಬೌಲರ್ ಮಾರ್ಕ್‌ ವುಡ್ ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಮತ್ತೋರ್ವ ಮಾರಕ ವೇಗಿ ಜೋಫ್ರಾ ಆರ್ಚರ್ ಕೂಡಾ ಆರಂಭಿಕ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಗುಸ್ ಅಟ್ಕಿನ್‌ಸನ್, ಜಿಂಬಾಬ್ವೆ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಂಡಿದ್ದರು. ಆದರೆ ಅಟ್ಕಿನ್‌ಸನ್, ಸ್ನಾಯು ಸೆಳೆತಕ್ಕೆ ಒಳಗಾಗಿ ಮೊದಲ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಇದೀಗ ಜೋಶ್ ಟಂಗ್ ಕೂಡಾ ಗಾಯಗೊಂಡಿರುವುದು ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ. ಭಾರತ 'ಎ' ಎದುರಿನ ಎರಡನೇ ಅಭ್ಯಾಸ ಪಂದ್ಯದಲ್ಲಿ ಜೋಶ್ ಟಂಗ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಗಾಯಗೊಂಡು ಮೈದಾನ ತೊರೆದಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಜೋಶ್ ಟಂಗ್ 20.3 ಓವರ್ ಬೌಲಿಂಗ್ ಮಾಡಿ ಎರಡು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 4 ಓವರ್ ಬೌಲಿಂಗ್ ಮಾಡಿ, ಗಾಯಗೊಂಡು ಮೈದಾನ ತೊರೆದರು. ಆದರೆ ಜೋಶ್ ಟಂಗ್ ಯಾವ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಅವರ ಗಾಯದ ಪ್ರಮಾಣ ಎಷ್ಟು ಗಂಭೀರವಾಗಿದೆ ಎನ್ನುವುದು ಇನ್ನಷ್ಟೇ ಮಾಹಿತಿ ಬರಬೇಕಿದೆ.

ಯಾರು ಈ ಎಡ್ಡಿ ಜೇಕ್?

ಇಂಗ್ಲೆಂಡ್ ವೇಗಿ ಜೋಶ್ ಟಂಗ್ ಬದಲಿಗೆ ತಂಡ ಕೂಡಿಕೊಂಡಿರುವ ಎಡ್ಡಿ ಜೇಕ್, 19 ವರ್ಷದ ಯುವ ಪ್ರತಿಭಾನ್ವಿತ ವೇಗಿಯಾಗಿದ್ದಾರೆ. ಇದುವರೆಗೂ ಎಡ್ಡಿ ಜೇಕ್ ಎರಡು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಆ ಎರಡು ಪಂದ್ಯಗಳು ಭಾರತ 'ಎ' ಎದುರಿನ ಪಂದ್ಯಗಳಾಗಿವೆ. ಈ ಎರಡು ಪಂದ್ಯಗಳಲ್ಲಿ ಎಡ್ಡಿ ಜೇಕ್ ತಲಾ ಎರಡು ವಿಕೆಟ್ ಕಬಳಿಸಿದ್ದಾರೆ.

ಭಾರತ-ಇಂಗ್ಲೆಂಡ್ 5 ಪಂದ್ಯಗಳ ಟೆಸ್ಟ್ ಸರಣಿ ವೇಳಾಪಟ್ಟಿ

ಜೂನ್ 20-24; ಹೆಡಿಂಗ್ಲೆ ಟೆಸ್ಟ್

ಜುಲೈ 2-6; ಎಡ್ಜ್‌ಬಾಸ್ಟನ್‌ ಟೆಸ್ಟ್

ಜುಲೈ 10-14; ಲಾರ್ಡ್ಸ್ ಟೆಸ್ಟ್

ಜುಲೈ 23-27; ಓಲ್ಡ್ ಟ್ರಾಫರ್ಡ್ ಟೆಸ್ಟ್

ಜುಲೈ 31ರಿಂದ ಆಗಸ್ಟ್ 04; ದಿ ಓವಲ್

ಭಾರತ ಎದುರಿನ ಮೊದಲ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಹೀಗಿದೆ:

ಬೆನ್ ಸ್ಟೋಕ್ಸ್(ನಾಯಕ), ಶೋಯೆಬ್ ಬಷೀರ್, ಜೆಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೆಡನ್ ಕೇರ್ಸ್‌, ಸ್ಯಾಮ್ ಕುಕ್, ಜಾಕ್ ಕ್ರಾಲಿ, ಬೆನ್ ಡಕೆಟ್, ಜೇಮಿ ಓವರ್‌ಟನ್, ಓಲಿ ಪೋಪ್, ಜೋ ರೂಟ್, ಜೇಮಿ ಸ್ಮಿತ್(ವಿಕೆಟ್ ಕೀಪರ್), ಜೋಶ್ ಟಂಗ್, ಕ್ರಿಸ್ ವೋಕ್ಸ್.

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:

ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ಉಪನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್‌ದೀಪ್ ಸಿಂಗ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.