ಜೋಹಾನ್ಸ್‌ಬರ್ಗ್‌[ಡಿ.24]: ದಕ್ಷಿಣ ಆಫ್ರಿಕಾ ಆಲ್ರೌಂಡರ್ ವೆರ್ನಾನ್‌ ಫಿಲಾಂಡರ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸೋಮವಾರ ನಿವೃತ್ತಿ ಘೋಷಿಸಿದರು. ಮುಂಬರುವ ಇಂಗ್ಲೆಂಡ್‌ ಟೆಸ್ಟ್‌ ಸರಣಿ ಬಳಿಕ ಕ್ರಿಕೆಟ್‌ನಿಂದ ದೂರ ಉಳಿಯುವುದಾಗಿ ಫಿಲಾಂಡರ್‌ ಹೇಳಿದ್ದಾರೆ.

ವಿಸ್ಡನ್ ದಶಕದ ಏಕದಿನ ತಂಡ ಪ್ರಕಟ; 3 ಭಾರತೀಯರಿಗೆ ಸ್ಥಾನ!

ಇಂಗ್ಲೆಂಡ್‌ ವಿರುದ್ಧದ 4 ಪಂದ್ಯಗಳ ಟೆಸ್ಟ್‌ ಸರಣಿ ಡಿ. 26 ರಿಂದ ಜ. 24 ರವರೆಗೆ ನಡೆಯಲಿದೆ. 34 ವರ್ಷ ವಯಸ್ಸಿನ ಫಿಲಾಂಡರ್‌, 60 ಟೆಸ್ಟ್‌, 30 ಏಕದಿನ ಮತ್ತು 7 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್‌ನಲ್ಲಿ 22.16ರ ಸರಾಸರಿಯಲ್ಲಿ ಫಿಲಾಂಡರ್‌ 261 ವಿಕೆಟ್‌ ಪಡೆದಿದ್ದಾರೆ. 13 ಬಾರಿ 5 ವಿಕೆಟ್‌ ಸಾಧನೆ ಮಾಡಿದ್ದಾರೆ. ಇನ್ನು ಬ್ಯಾಟಿಂಗ್’ನಲ್ಲಿ 1619 ರನ್ ಬಾರಿಸಿದ್ದಾರೆ.  2012ರಲ್ಲಿ ಫಿಲಾಂಡರ್‌, 7 ಟೆಸ್ಟ್‌ ಪಂದ್ಯಗಳಲ್ಲಿ 51 ವಿಕೆಟ್‌ ಕಿತ್ತಿದ್ದರು.

ಧೋನಿ ನಿವೃತ್ತಿ ಸದ್ಯಕ್ಕಿಲ್ಲ; 2021ರ ಐಪಿಎಲ್ ಆಡ್ತಾರೆ ಸಿಎಸ್‌ಕೆ ನಾಯಕ?

ಡೇಲ್ ಸ್ಟೇನ್ ಹಾಗೂ ಮಾರ್ನೆ ಮಾರ್ಕೆಲ್ ಟೆಸ್ಟ್ ನಿವೃತ್ತಿಯ ಬಳಿಕ ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲಿಂಗ್ ಸಾರಥ್ಯ ವಹಿಸಿದ್ದ ಫಿಲಾಂಡರ್, ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ತಂಡವನ್ನು ಕಂಗೆಡೆಸುತ್ತಿದ್ದರು.  ಕೆಪ್’ಟೌನ್ ಮೂಲದ 34 ವರ್ಷದ ಆಲ್ರೌಂಡರ್, ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 78 ರನ್ ನೀಡಿ 8 ವಿಕೆಟ್ ಕಬಳಿಸಿ ಮಿಂಚಿದ್ದರು. ಆಸ್ಟ್ರೇಲಿಯಾ ವಿರುದ್ಧ 2011ರಲ್ಲಿ ಟೆಸ್ಟ್ ಪದಾರ್ಪಣೆ ಪಂದ್ಯವಾಡಿದ್ದ ಫಿಲಾಂಡರ್ 15 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಆಸೀಸ್ ಪಡೆಯನ್ನು ಕೇವಲ 47 ರನ್’ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡವು 8 ವಿಕೆಟ್’ಗಳ ಜಯ ದಾಖಲಿಸಿತ್ತು. ಇದು ಫಿಲಾಂಡರ್ ಸ್ಮರಣೀಯ ಇನಿಂಗ್ಸ್’ಗಳಲ್ಲಿ ಒಂದಾಗಿದೆ.