* ಬಿಸಿಸಿಐ ನಿರ್ಗಮಿತ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೆ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಹುದ್ದೆ ಮೇಲೆ ಕಣ್ಣು* ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಖಚಿತಪಡಿಸಿದ ದಾದಾ* ಅಕ್ಟೋಬರ್ 22ಕ್ಕೆ ನಾಮಪತ್ರ ಸಲ್ಲಿಸುವ ಬಗ್ಗೆ ಸೌರವ್ ಗಂಗೂಲಿ ಚಿಂತನೆ
ಕೋಲ್ಕತಾ(ಅ.16): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ನಿರ್ಗಮಿತ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೊಮ್ಮೆ ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ)ಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಖಚಿತಪಡಿಸಿದ್ದಾರೆ. ಇದರೊಂದಿಗೆ ಐಸಿಸಿ ಅಧ್ಯಕ್ಷ ರೇಸ್‌ನಲ್ಲಿ ಗಂಗೂಲಿ ಇಲ್ಲ ಎನ್ನುವುದು ಖಚಿತವಾಗಿದೆ.
ಈ ಬಗ್ಗೆ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ. ಅಕ್ಟೋಬರ್ 22ಕ್ಕೆ ನಾಮಪತ್ರ ಸಲ್ಲಿಸುವ ಬಗ್ಗೆ ಯೋಚಿಸುತ್ತಿದ್ದೇನೆ. ಸಂಸ್ಥೆಯಲ್ಲಿ ನಾನು 5 ವರ್ಷ ದುಡಿದಿದ್ದೇನೆ. ನ್ಯಾ.ಲೋಧಾ ಸಮಿತಿ ಶಿಫಾರಸಿನ ಪ್ರಕಾರ ಇನ್ನೂ 4 ವರ್ಷ ಕಾರ್ಯನಿರ್ವಹಿಸಲು ಅವಕಾಶವಿದೆ. ಈ ಬಗ್ಗೆ ಅಕ್ಟೋಬರ್ 20ಕ್ಕೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇನೆ’ ಎಂದು ತಿಳಿಸಿದ್ದಾರೆ.
ಈ ಮೊದಲು 2015ರಿಂದ 2019ರ ವರೆಗೆ ಸಿಎಬಿ ಅಧ್ಯಕ್ಷರಾಗಿದ್ದ ಗಂಗೂಲಿ 2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಬಳಿಕ ಅಭಿಷೇಕ್ ದಾಲ್ಮಿಯಾ ಸಿಎಬಿ ಅಧ್ಯಕ್ಷರಾಗಿದ್ದು, ಅವರ ಅವಧಿ ಸದ್ಯ ಮುಕ್ತಾಯಗೊಂಡಿದೆ. ಶೀಘ್ರದಲ್ಲೇ ಸಂಸ್ಥೆಗೆ ಮತ್ತೆ ಚುನಾವಣೆ ನಡೆಯಲಿದ್ದು, ಗಂಗೂಲಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಕೆಲ ದಿನಗಳಿಂದ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿಯ ಹಿರಿಯ ಸಹೋದರ ಸ್ನೇಹಾಶಿಶ್ ಸ್ಪರ್ಧಿಸುವ ಬಗ್ಗೆ ಸುದ್ದಿಯಾಗಿತ್ತು. ಆದರೆ ಈಗ ಸ್ವತಃ ಸೌರವ್ ಗಂಗೂಲಿಯೇ ಅಧ್ಯಕ್ಷ ಸ್ಥಾನದ ಕಣಕ್ಕಿಳಿದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.
ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ ಎಂದಿದ್ದ ದಾದಾ
ಬಿಸಿಸಿಐ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮುಂದುವರೆಯದೇ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸೌರವ್ ಗಂಗೂಲಿ, ಅಧಿಕಾರಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಮಹತ್ತರ ವಿಷಯಗಳತ್ತ ಗಮನ ಹರಿಸುತ್ತೇನೆ ಎಂದು ಅವರು ಪ್ರತಿಕ್ರಿಯಿಸಿದ್ದರು. ಈ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದ ಅವರು, ‘ಯಾವಾಗಲೂ ಆಡಲು ಸಾಧ್ಯವಿಲ್ಲ. ಅಧಿಕಾರದಲ್ಲಿರಲೂ ಸಾಧ್ಯವಿಲ್ಲ. ಆದರೆ ನಾಣ್ಯದ ಎರಡೂ ಮುಖ ನೋಡಿದ್ದಕ್ಕೆ ಖುಷಿ ಇದೆ. ಅಧಿಕಾರವಧಿಯ ಸಾಧನೆ ಬಗ್ಗೆ ತುಂಬಾ ಹೆಮ್ಮೆ ಇದೆ. ಕಳೆದ 3 ವರ್ಷಗಳಲ್ಲಿ ಎಷ್ಟೋ ಒಳ್ಳೆಯ ಸಂಗತಿಗಳು ನಡೆದಿವೆ. ಕೋವಿಡ್ ಸಮಯದಲ್ಲಿ ಐಪಿಎಲ್ ಯಶಸ್ವಿಯಾಗಿ ಆಯೋಜಿಸಿದ್ದೇವೆ ಎಂದಿದ್ದರು. ಅಲ್ಲದೇ, ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿದ್ದೆ. ಬಿಸಿಸಿಐ ಅಧ್ಯಕ್ಷ ಸ್ಥಾನ ವಹಿಸಿದ್ದೇನೆ. ಓರ್ವ ಕ್ರಿಕೆಟಿಗನಾಗಿ ಹಲವು ಸವಾಲುಗಳನ್ನು ಎದುರಿಸಿದ್ದೇನೆ ಎಂದು ಅವರು ತಿಳಿಸಿದ್ದರು.
ಮಾಡಿದ ಕರ್ಮ ಎಲ್ಲಿಗೆ ಹೋಗುತ್ತೆ..? ಗಂಗೂಲಿಯನ್ನು ಟ್ರೋಲ್ ಮಾಡಿದ ಕೊಹ್ಲಿ ಫ್ಯಾನ್ಸ್..!
ದಾದಾ ವಿರುದ್ಧ ಬಿಸಿಸಿಐ ಸಭೆಯಲ್ಲಿ ಯಾರೂ ಮಾತಾಡಿಲ್ಲ: ಧುಮಾಲ್
ನವದೆಹಲಿ: ಭಾವಿ ಐಪಿಎಲ್ ಅಧ್ಯಕ್ಷ, ಬಿಸಿಸಿಐನ ನಿರ್ಗಮಿತ ಖಜಾಂಚಿ ಅರುಣ್ ಧುಮಾಲ್, ಮಾಜಿ ಅಧ್ಯಕ್ಷ ಸೌರವ್ ಗಂಗೂಲಿಗೆ ಸಂಬಂಧಿಸಿದ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ನಡೆದ ಬಿಸಿಸಿಐ ಸಭೆಯಲ್ಲಿ ಗಂಗೂಲಿ ವಿರುದ್ಧ ಯಾರೂ ಮಾತನಾಡಿಲ್ಲ. ಅವರ ಕಾರ‍್ಯನಿರ್ವಹಣೆ ಬಗ್ಗೆ ಯಾರಿಗೂ ಅಸಮಾಧಾನ ಇಲ್ಲ. ಇವೆಲ್ಲಾ ಮಾಧ್ಯಮಗಳ ಸೃಷ್ಟಿ’ ಎಂದು ಧುಮಾಲ್ ಹೇಳಿದ್ದಾರೆ. ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗುವ ವಿಚಾರದಲ್ಲಿ ಬಿಸಿಸಿಐ ಹಾಗೂ ಗಂಗೂಲಿ ನಡುವೆ ಮನಸ್ತಾಪ ಶುರುವಾಗಿದೆ. ಸಭೆಯಲ್ಲಿ ಗಂಗೂಲಿಗೆ ಮುಜುಗರ ಉಂಟಾಯಿತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
