ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಲೆದಂಡಸೌರವ್ ಗಂಗೂಲಿಯನ್ನು ಟ್ರೋಲ್ ಮಾಡಿದ ವಿರಾಟ್ ಕೊಹ್ಲಿ ಫ್ಯಾನ್ಸ್‌ಸೌರವ್ ಗಂಗೂಲಿ ಬದಲಿಗೆ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆ
ಬೆಂಗಳೂರು(ಅ.14): ಬಿಸಿಸಿಐ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕಾರವಧಿ ಮುಕ್ತಾಯವಾಗಿದ್ದು, ರೋಜರ್ ಬಿನ್ನಿ ಬಿಸಿಸಿಐ ನೂತನ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನಿಸಿದೆ. ಎರಡನೇ ಅವಧಿಗೆ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರೆಯಲು ಇಂಗಿತ ವ್ಯಕ್ತಪಡಿಸಿದ್ದರು. ಹೀಗಿದ್ದೂ ಸೌರವ್ ಗಂಗೂಲಿ ತಲೆದಂಡವಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಇದೇ ವೇಳೆ ವಿರಾಟ್ ಕೊಹ್ಲಿ ಅಭಿಮಾನಿಗಳು, ಸೌರವ್ ಗಂಗೂಲಿಯನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ಎರಡನೇ ಅವಧಿಗೆ ಮುಂದೆವರೆಸದಿರುವ ಸುದ್ದಿ ಕೇಳಿ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಮಾಡಿದ ಕರ್ಮದ ಫಲ ಎನ್ನುವಂತೆ ಸೌರವ್ ಗಂಗೂಲಿಗೆ ಹೀಗಾಗಿದೆ ಎಂದು ಕೊಹ್ಲಿ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾ ನಾಯಕರಾಗಿದ್ದ ವಿರಾಟ್ ಕೊಹ್ಲಿ ವೃತ್ತಿಜೀವನವನ್ನು ಹಾಳು ಮಾಡಿದರು ಎನ್ನುವ ಆರೋಪವಿದೆ. ಹೀಗಾಗಿಯೇ ವರ್ಕ್ ಲೋಡ್ ಮ್ಯಾನೇಜ್‌ಮೆಂಟ್ ಮಾಡುವ ಉದ್ದೇಶದಿಂದ ವಿರಾಟ್ ಕೊಹ್ಲಿ, 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದ ಬಳಿಕ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. ಇದಾದ ಬಳಿಕ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಏಕದಿನ ನಾಯಕತ್ವದಿಂದಲೂ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಲಾಗಿತ್ತು. ನಂತರ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ಬಳಿಕ ವಿರಾಟ್ ಕೊಹ್ಲಿ, ಟೆಸ್ಟ್ ನಾಯಕತ್ವದಿಂದಲೂ ಕೆಳಗಿಳಿದಿದ್ದರು.
ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿ ತಲೆದಂಡದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ಬೇರೆ ಬೇರೆ ಹೇಳಿಕೆ ನೀಡಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸುವ ಮುನ್ನ ಫೋನ್ ಕಾಲ್ ಮೂಲಕ ಈ ವಿಚಾರವನ್ನು ತಿಳಿಸಿದ್ದರು ಎಂದು ಹೇಳಿದ್ದರು. ಇನ್ನೊಂದೆಡೆ, ವಿರಾಟ್ ಕೊಹ್ಲಿಗೆ ಟಿ20 ನಾಯಕನಾಗಿ ಮುಂದುವರೆಯಲು ಕೇಳಿಕೊಂಡಿದ್ದೆವು, ಆದರೆ ಅದಕ್ಕೆ ಅವರು ಒಪ್ಪಲಿಲ್ಲ. ಹೀಗಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ಹೊಸ ನಾಯಕನನ್ನು ಆಯ್ಕೆ ಮಾಡಲಾಯಿತು ಎಂದಿದ್ದರು.
'ಶಾಶ್ವತವಾಗಿ ಆಡಳಿತಾಧಿಕಾರಿಯಾಗಿರಲು ಸಾಧ್ಯವಿಲ್ಲ': ಸೌರವ್ ಗಂಗೂಲಿ ಹೀಗಂದಿದ್ದೇಕೆ..?
ವಿರಾಟ್ ಕೊಹ್ಲಿ, ಟಿ20 ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದರೂ ಸಹಾ, ಏಕದಿನ ಹಾಗೂ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯುವ ಇರಾದೆ ಹೊಂದಿದ್ದರು. ಆದರೆ ವಿರಾಟ್ ಕೊಹ್ಲಿಯನ್ನು ಬಿಸಿಸಿಐ ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ಆರೋಪವಿದೆ. ಇದೀಗ ಸೌರವ್ ಗಂಗೂಲಿ ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷರಾಗುವ ಆಸೆ ಹೊಂದಿದ್ದರಾದರೂ, ಇದಕ್ಕೆ ಬಿಸಿಸಿಐನೊಳಗೆ ಸಮ್ಮತಿ ಸಿಗಲಿಲ್ಲ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಅಭಿಮಾನಿಗಳು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಟ್ರೋಲ್ ಮಾಡಿದ್ದಾರೆ.
