ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರ ಕಾರು ದುರ್ಗಾಪುರ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಕ್ಕೀಡಾಯಿತು. ಲಾರಿಯೊಂದು ಅಡ್ಡ ಬಂದ ಕಾರಣ ಈ ಘಟನೆ ಸಂಭವಿಸಿತು. ಅದೃಷ್ಟವಶಾತ್ ಗಂಗೂಲಿ ಮತ್ತು ಇತರರಿಗೆ ಯಾವುದೇ ಗಾಯಗಳಾಗಿಲ್ಲ. ನಂತರ ಅವರು ಬರ್ಧ್ವಾನ್ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ, ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿದ್ದಾರೆ.
ಕೋಲ್ಕತಾ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರಿದ್ದ ಕಾರು ಅಪಘಾತ ಸಂಭವಿಸಿದೆ. ಗುರವಾರ ಸಂಜೆ ದುರ್ಗಾಪುರ ಎಕ್ಸ್‌ಪ್ರೆಸ್ ವೇನಲ್ಲಿ ಕಾರು ಡಿಕ್ಕಿಯಾಗಿದೆ. ಈ ಅವಘಡದಲ್ಲಿ ದಾದಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಸೌರವ್ ಗಂಗೂಲಿ ಅವರು ದುರ್ಗಾಪುರ ಎಕ್ಸ್‌ಪ್ರೆಸ್ ವೇನ ದಂತನಪುರದಲ್ಲಿ ಸಂಚಾರ ಮಾಡುವ ವೇಳೆಯಲ್ಲಿ ಲಾರಿಯೊಂದು ಇದ್ದಕ್ಕಿದ್ದಂತೆಯೇ ಗಂಗೂಲಿ ಅವರಿದ್ದ ಕಾರನ್ನು ಹಿಂದಿಕ್ಕಿ ಇವರ ಕಾನ್‌ವೇ ಮುಂದೆ ಬಂದಿದೆ. ಆಗ ಕಾನ್‌ವೇ ಡ್ರೈವರ್ ಬ್ರೇಕ್ ಹಾಕಿದ್ದಾರೆ. ಆಗ ಸೌರವ್ ಗಂಗೂಲಿ ಅವರಿದ್ದ ಕಾರು ಘರ್ಷಣೆಗೆ ಒಳಗಾಗಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಈ ಘಟನೆಯಿಂದ ಯಾರೊಬ್ಬರಿಗೂ ಯಾವುದೇ ಗಾಯಗಳಾಗಿಲ್ಲ. ಆದರೆ ಸೌರವ್ ಗಂಗೂಲಿ ಅವರ ಕಾನ್‌ವೇ ವಾಹನಕ್ಕೆ ಕೊಂಚ ಡ್ಯಾಮೇಜ್ ಆಗಿದೆ ಎಂದು ತಿಳಿದು ಬಂದಿದೆ.
ಸೌರವ್ ಗಂಗೂಲಿ ಪೂರ್ವನಿಗದಿಯಂತೆ ಬರ್ಧ್ವಾನ್ ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಹೊರಟಿದ್ದರು. ಈ ಅಚಾತುರ್ಯದಿಂದಾಗಿ ದಾದಾ 10 ನಿಮಿಷಗಳ ಕಾಲ ಎಕ್ಸ್‌ಪ್ರೆಸ್ ವೇನಲ್ಲಿಯೇ ಕಾಯಬೇಕಾಗಿ ಬಂದಿತು. ಇದಾದ ನಂತರ ಧೃತಿಗಡೆದ ಸೌರವ್ ಗಂಗೂಲಿ ಪೂರ್ವನಿಗದಿಯಂತೆ ಬರ್ಧ್ವಾನ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಗಣ್ಯರ ಜತೆ ಸಮಾಲೋಚನೆ ನಡೆಸಿದರು. ಬರ್ಧ್ವಾನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಜತೆ ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್‌ನ ಭವಿಷ್ಯ ಹಾಗೂ ತಮ್ಮ ವರ್ಣರಂಜಿತ ಕ್ರಿಕೆಟ್ ಬದುಕಿನ ಆಸಕ್ತಿಕರ ಘಟನೆಗಳನ್ನು ಹಂಚಿಕೊಂಡರು ಎಂದು ವರದಿಯಾಗಿದೆ.
ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿ ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
