ಹರ್ಮನ್‌ಪ್ರೀತ್ ಕೌರ್ ಬಳಿಕ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವವನ್ನು ಸ್ಮೃತಿ ಮಂದಾನ ವಹಿಸಿಕೊಂಡಿದ್ದಾರೆ. ಇಂದಿನಿಂದ ರಾಯ್‌ಪುರದಲ್ಲಿ ಜಿಂಬಾಬ್ವೆ ವಿರುದ್ಧ ನಡೆಯಲಿರುವ ಟಿ20 ಸರಣಿಯು ಪೂರ್ಣ ಪ್ರಮಾಣದ ನಾಯಕಿಯಾಗಿ ಅವರ ಮೊದಲ ಸವಾಲಾಗಿದೆ. ಮುಂಬರುವ ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಟೂರ್ನಿಗಳಿಗೆ ತಂಡವನ್ನು ಸಜ್ಜುಗೊಳಿಸುವ ಹೊಣೆ ಅವರ ಮೇಲಿದೆ.

ರಾಯ್‌ಪುರ: ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಇಂದಿನಿಂದ ಸ್ಮೃತಿ ಮಂಧನಾ ಯುಗ ಶುರುವಾಗುತ್ತಿದೆ. ಹರ್ಮನ್‌ಪ್ರೀತ್ ಕೌರ್ ಅವರಿಂದ ತೆರವಾದ ನಾಯಕತ್ವದ ಸ್ಥಾನವನ್ನು ಸ್ಮೃತಿ ತುಂಬಲಿದ್ದಾರೆ. ಆಕರ್ಷಕ ಶಾಟ್‌ಗಳು, ಸ್ಥಿರ ಪ್ರದರ್ಶನ ಹಾಗೂ ದಾಖಲೆಗಳ ಸರದಾರಿಯಾಗಿರುವ ಸ್ಮೃತಿ, ಈಗ ಹೊಸ ಜವಾಬ್ದಾರಿ ಹಾಗೂ ಹೊಸ ಗುರಿಯೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಒಂದು ದಶಕದಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ ಹರ್ಮನ್‌ಪ್ರೀತ್ ಕೌರ್ ಸ್ಥಾನದಿಂದ ಕೆಳಗಿಳಿದಾಗ, ಮುಂದಿನ ಕ್ಯಾಪ್ಟನ್ ಯಾರು ಎಂಬ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ.

ಶಾಂತ ಸ್ವಭಾವದ ನಾಯಕಿ ಮಂಧನಾ

ನಾಯಕತ್ವದ ಬದಲಾವಣೆಯು ಟೀಂ ಇಂಡಿಯಾದ ಆಟದ ಶೈಲಿಯಲ್ಲೂ ಬದಲಾವಣೆ ತರುವುದು ಖಚಿತ. ಹರ್ಮನ್‌ಪ್ರೀತ್ ಅವರ ನಾಯಕತ್ವದಲ್ಲಿ ಆಕ್ರಮಣಕಾರಿ ಮನೋಭಾವವಿತ್ತು. ಆದರೆ ಸ್ಮೃತಿ, ತುಂಬಾ ಆತ್ಮವಿಶ್ವಾಸ ಹಾಗೂ ಶಾಂತ ಸ್ವಭಾವದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಯಾಪ್ಟನ್. ಏಷ್ಯನ್ ಗೇಮ್ಸ್‌ನಲ್ಲಿ ಸತತ ಚಿನ್ನ ಹಾಗೂ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಹರ್ಮನ್‌ಪ್ರೀತ್ ಅವರ ಗೆಲುವಿನ ಹಾದಿಯಲ್ಲೇ ಸ್ಮೃತಿ ಕೂಡ ಸಾಗಲಿದ್ದಾರೆ. ಜುಲೈ 18, 1996 ರಂದು ಮುಂಬೈನಲ್ಲಿ ಜನಿಸಿದ ಸ್ಮೃತಿ ಮಂಧನಾ, ತಮ್ಮ ಸಹೋದರನ ಕ್ರಿಕೆಟ್ ಆಸಕ್ತಿಯಿಂದ ಪ್ರೇರಿತರಾಗಿ ಬ್ಯಾಟ್ ಹಿಡಿದವರು.

ಕೇವಲ 9ನೇ ವಯಸ್ಸಿನಲ್ಲಿ ಅಂಡರ್-15 ತಂಡದಲ್ಲಿ ಹಾಗೂ 13ನೇ ವಯಸ್ಸಿನಲ್ಲಿ ಅಂಡರ್-19 ತಂಡದಲ್ಲಿ ಆಡಿದ ಸ್ಮೃತಿ, 2013ರಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಸ್ಮೃತಿ, ಈ ಹಿಂದೆ 18 ಟಿ20 ಹಾಗೂ 4 ಏಕದಿನ ಪಂದ್ಯಗಳಲ್ಲಿ ಭಾರತದ ಹಂಗಾಮಿ ನಾಯಕಿಯಾಗಿ ಕೆಲಸ ಮಾಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ, 2028ರ ಟಿ20 ವಿಶ್ವಕಪ್ ಹಾಗೂ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಸ್ಮೃತಿ ಮುಂದಿರುವ ದೊಡ್ಡ ಸವಾಲುಗಳಾಗಿವೆ.

ಸ್ಮೃತಿ ಮಂಧನಾ ಇದುವರೆಗೆ 9 ಟೆಸ್ಟ್ ಪಂದ್ಯಗಳಿಂದ 2 ಶತಕಗಳೊಂದಿಗೆ 788 ರನ್, 120 ಏಕದಿನ ಪಂದ್ಯಗಳಿಂದ 14 ಶತಕಗಳೊಂದಿಗೆ 5411 ರನ್ ಹಾಗೂ 179 ಟಿ20 ಪಂದ್ಯಗಳಿಂದ 2 ಶತಕಗಳೊಂದಿಗೆ 4867 ರನ್ ಸಿಡಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 5,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಸ್ಮೃತಿಗೆ ಇನ್ನು ಕೇವಲ 133 ರನ್‌ಗಳ ಅಗತ್ಯವಿದೆ. ತವರಿನ ಅಭಿಮಾನಿಗಳ ಮುಂದೆಯೇ ಈ ಅಪರೂಪದ ಮೈಲಿಗಲ್ಲು ತಲುಪಲು ಅವರಿಗೆ ಸುವರ್ಣಾವಕಾಶ ಒದಗಿಬಂದಿದೆ.

ಇಂದಿನಿಂದ ಭಾರತ-ಜಿಂಬಾಬ್ವೆ ವನಿತಾ ತಂಡಗಳ ಟಿ20 ಸರಣಿ

ಭಾರತ ಹಾಗೂ ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿ ಶುಕ್ರವಾರ ಆರಂಭಗೊಳ್ಳಲಿದೆ. ಸರಣಿಯ ಎಲ್ಲಾ ಪಂದ್ಯಗಳು ಛತ್ತೀಸ್‌ಗಢದ ರಾಯ್ಪುರ ಕ್ರೀಡಾಂಗಣದಲ್ಲಿ ನಡೆಯಲಿವೆ. ಇದು ಸ್ಮೃತಿ ಮಂಧನಾ ಪೂರ್ಣ ಪ್ರಮಾಣದಲ್ಲಿ ನಾಯಕತ್ವ ವಹಿಸಿದ ಬಳಿಕ ಭಾರತದ ಮೊದಲ ಸರಣಿಯಾಗಿದ್ದು, ತವರಿನಲ್ಲಿ ದೊಡ್ಡ ಸವಾಲು ಎದುರಾಗಲಿದೆ.

ಜಿಂಬಾಬ್ವೆಗೆ ಹೋಲಿಸಿದರೆ ಭಾರತ ಈ ಸರಣಿಯಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯೇ ಹೆಚ್ಚು. ಆದರೆ ಚುಟುಕು ಕ್ರಿಕೆಟ್‌ ಮಾದರಿಯಲ್ಲಿ ಭಾರತ ವಿಶ್ವ ಮಟ್ಟದಲ್ಲಿ ದೊಡ್ಡ ಮಟ್ಟಿನ ಯಶಸ್ಸು ಸಾಧಿಸುತ್ತಿಲ್ಲ. ಟಿ20 ವಿಶ್ವಕಪ್‌ಗಳಲ್ಲಿ ತಂಡದ ಪ್ರದರ್ಶನ ಅಷ್ಟಕ್ಕಷ್ಟೇ. ಹೀಗಾಗಿ ತಂಡ ಎಲ್ಲಾ 3 ಮಾದರಿಗಳಲ್ಲೂ ಸುಧಾರಿತ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ವಿಶೇಷವಾಗಿ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್, ಫೀಲ್ಡಿಂಗ್‌, ವೇಗದ ಬೌಲಿಂಗ್‌ ವಿಭಾಗದಲ್ಲಿ ತಂಡ ಸುಧಾರಣೆ ಕಾಣಬೇಕಿದೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌