ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಐಪಿಎಲ್ ಮಿನಿ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಆರ್‌ಸಿಬಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಅವರೊಂದಿಗೆ ಆಡುವ ಮತ್ತು ಅವರಿಂದ ಕಲಿಯುವ ಆಸೆಯನ್ನು ಅವರು ಹಂಚಿಕೊಂಡಿದ್ದಾರೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌ ಪುತ್ರ ಆರ್ಯವೀರ್‌ ಸೆಹ್ವಾಗ್‌ ಆರ್‌ಸಿಬಿ ಸೇರುವ ಆಸೆ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್‌ ತಿಂಗಳಿನಲ್ಲಿ ಐಪಿಎಲ್‌ ಮಿನಿ ಹಾರಜು ಪ್ರಕ್ರಿಯೆ ನಡೆಯಲಿದೆ. ಈ ವರ್ಷದಿಂದ ಐಪಿಎಲ್‌ಗೆ ಎಂಟ್ರಿ ಕೊಡುವ ಕನಸು ಕಂಡಿರುವ ಸೆಹ್ವಾಗ್‌ ಪುತ್ರ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.

ಈಗಾಲೇ ಕ್ರಿಕೆಟ್‌ ಟೂರ್ನಿಗಳಲ್ಲಿ ಮಿಂಚುತ್ತಿರುವ ಆರ್ಯವೀರ್‌ ಸೆಹ್ವಾಗ್‌ ಮೇಲೆ ಅನೇಕ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಇದೀಗ ಸ್ವತಃ ಆರ್ಯವೀರ್‌ ಸೆಹ್ವಾಗ್‌ ಅವರೇ, ತಮಗೆ ಯಾವ ತಂಡ ಅಂದ್ರೆ ಇಷ್ಟ. ಯಾರೆಲ್ಲ ಜೊತೆ ಆಡಬೇಕು? ಯಾರಿಂದ ಏನು ಕಲಿಯಬೇಕು ಎಂದ ಕನಸನ್ನು ಬಿಚ್ಚಿಟ್ಟಿದ್ದಾರೆ. ಐಪಿಎಲ್‌ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುತ್ತಿದ್ದಂತೆಯೇ ತಮ್ಮ ನೆಚ್ಚಿನ ತಂಡದ ಬಗ್ಗೆ ಹೇಳಿದ್ದಾರೆ.

ಆರ್‌ಸಿಬಿ ಸೇರುವ ಆಸೆಯನ್ನು ತೋರಿಸಿರುವ ಆರ್ಯವೀರ್, ನಾನು ಬಾಲ್ಯದಿಂದಲೂ ವಿರಾಟ್ ಕೊಹ್ಲಿ ಆಟವನ್ನು ನೋಡುತ್ತಾ ಬೆಳೆದಿದ್ದೇನೆ. ಅವರು ಈ ಯುಗದ ಶ್ರೇಷ್ಠ ಬ್ಯಾಟರ್ ಎಂದು ಭಾವಿಸಿದ್ದೇನೆ. ಅವರೊಂದಿಗೆ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡು, ಬ್ಯಾಟಿಂಗ್ ಸಲಹೆಗಳನ್ನು ಪಡೆಯಬೇಕೆಂಬುದೇ ನನ್ನ ಆಸೆ. ಆ ಒಂದು ಅವಕಾಶಕ್ಕಾಗಿ ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ. ಹರಾಜಿನಲ್ಲಿ ಯಾವ ಫ್ರಾಂಚೈಸಿ ನನ್ನನ್ನು ಆಯ್ಕೆ ಮಾಡಿದರೂ ನಾನು ಕೃತಜ್ಞನಾಗಿರುತ್ತೇನೆ. ಒಂದು ವೇಳೆ ಆರ್‌ಸಿಬಿಗೆ ಆಯ್ಕೆಯಾಗದಿದ್ದರೂ, ಐಪಿಎಲ್‌ನಲ್ಲಿ ಕೊಹ್ಲಿ ವಿರುದ್ಧ ಆಡುವಾಗಲಾದರೂ ಅವರನ್ನು ಭೇಟಿಯಾಗಿ ಮಾತನಾಡುವ ಅವಕಾಶ ಸಿಗುತ್ತದೆ. ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಶೈಲಿಯಿಂದಲೂ ತಾವು ಬಹಳಷ್ಟು ಕಲಿಯಬೇಕಿದೆ. ನನಗೆ ಗಿಲ್‌ ಆಟವೂ ಇಷ್ಟ ಎಂದು ಆರ್ಯವೀರ್‌ ಸೆಹ್ವಾಗ್‌ ಹೇಳಿದ್ದಾರೆ.

19 ವರ್ಷದ ಆರ್ಯವೀರ್‌ ಸೆಹ್ವಾಗ್‌ ಬ್ಯಾಟಿಂಗ್‌ನಲ್ಲಿ ಚಾಪು ಮೂಡಿಸಿದ್ದಾರೆ. 2026ರ ಅಂಡರ್-19 ಏಷ್ಯಾ ಕಪ್‌ನಲ್ಲಿ ಆರ್ಯವೀರ್ ಅದ್ಭುತ ಆಟವಾಡಿದರು. ಟೂರ್ನಿಯ ಐದು ಪಂದ್ಯಗಳಲ್ಲಿ 361 ರನ್‌ಗಳಿಸಿ ರನ್‌ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರ ಅಮೋಘ ಪ್ರದರ್ಶನ ಪರಿಣಾಮ ಭಾರತ ತಂಡವು ಫೈನಲ್‌ ಪ್ರವೇಶಿಸಿತ್ತು. ಫೈನಲ್‌ನಲ್ಲಿ ಪಾಕಿಸ್ತಾನವನ್ನು ರೋಚಕವಾಗಿ ಬಗ್ಗು ಬಡಿದು ಚಾಂಪಿಯನ್‌ ಆಗಿದೆ. ಇದರೊಂದಿಗೆ ಆರ್ಯವೀರ್‌ ಕೂಡ ಹೀರೋ ಆಗಿದ್ದು, ಇದೀಗ ಐಪಿಎಲ್‌ ಆಡಲು ಹೆಸರು ನೊಂದಾಯಿಸಿಕೊಂಡಿದ್ದಾರೆ.

30 ಲಕ್ಷ ಬೇಸ್‌ ಪ್ರೈಸ್‌

ಡಿಸೆಂಬರ್ 16ರಂದು ಗೋವಾದಲ್ಲಿ ಐಪಿಎಲ್ 2027ರ ಮಿನಿ ಹರಾಜು ನಡೆಯಲಿದೆ. ಆರ್ಯವೀರ್‌ ಸೆಹ್ವಾಗ್‌ ತಮ್ಮ ಮೂಲ ಬೆಲೆಯನ್ನ 30 ಲಕ್ಷ ರೂಪಾಯಿಗೆ ನಿಗಧಿ ಪಡಿಸಿದ್ದಾರೆ. ಆರ್ಯವೀರ್‌ ಅದ್ಭುತ ಫಾರ್ಮ್‌ನಲ್ಲಿ ಇರೋದ್ರಿಂದ ಆರ್‌ಸಿಬಿ ಸೇರಿದಂತೆ ಅನೇಕ ಫ್ರಾಂಚೈಸಿಗಳು ಅವರ ಮೇಲೆ ಕಣ್ಣಿಟ್ಟಿವೆ. ಹೀಗಾಗಿ ಆರ್ಯವೀರ್‌ ಕೋಟಿ ಕೋಟಿ ಲೆಕ್ಕದಲ್ಲಿ ಹರಾಜಾದರೂ ಅಚ್ಚರಿ ಪಡಬೇಕಾಗಿಲ್ಲ. ಆರ್ಯವೀರ್‌ ಸೆಹ್ವಾಗ್‌ ಎಷ್ಟು ಹಣಕ್ಕೆ ಸೇಲ್‌ ಆಗ್ತಾರೆ ಎಂಬುವುದು ಡಿಸೆಂಬರ್‌ 16 ರಂದು ತಿಳಿಯಲಿದೆ.