ಇಂಗ್ಲೆಂಡ್‌ನಲ್ಲಿ ಒಂದು ಟೆಸ್ಟ್ ಸರಣಿಯಲ್ಲಿ 700 ರನ್ ಗಳಿಸಿದ ಮೊದಲ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಶುಭ್‌ಮನ್ ಗಿಲ್ ಪಾತ್ರರಾಗಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಹಾಗೂ ವಿರಾಟ್ ಕೊಹ್ಲಿ ದಾಖಲೆಗಳನ್ನು ಮುರಿದಿದ್ದಾರೆ.  

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಿನ ಭೀತಿಯಲ್ಲಿದ್ದರೂ, ಭಾರತೀಯ ನಾಯಕ ಶುಭ್‌ಮನ್ ಗಿಲ್ ಇಂಗ್ಲೆಂಡ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ನಾಲ್ಕನೇ ದಿನ 78 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದ ಗಿಲ್ ಐದನೇ ದಿನ ಇನ್ನೆರಡು ರನ್ ಗಳಿಸುವ ಮೂಲಕ ಇಂಗ್ಲೆಂಡ್‌ನಲ್ಲಿ ಒಂದು ಟೆಸ್ಟ್ ಸರಣಿಯಲ್ಲಿ 700 ರನ್ ಗಳಿಸಿದ ಮೊದಲ ಏಷ್ಯನ್ ಆಟಗಾರ ಎನಿಸಿಕೊಂಡರು. 2006 ರಲ್ಲಿ ಇಂಗ್ಲೆಂಡ್ ವಿರುದ್ಧ 631 ರನ್ ಗಳಿಸಿದ್ದ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಹೆಸರಿನಲ್ಲಿ ಈ ಹಿಂದೆ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಇತ್ತು.

ನಾಲ್ಕನೇ ದಿನ 13 ರನ್ ಗಳಿಸಿದಾಗಲೇ ಶುಭ್‌ಮನ್ ಗಿಲ್ ಪಾಕಿಸ್ತಾನದ ಯೂಸುಫ್ ಅವರನ್ನು ಮೀರಿಸಿದ್ದರು. 2002 ರಲ್ಲಿ ರಾಹುಲ್ ದ್ರಾವಿಡ್ (602), 2018 ರಲ್ಲಿ ವಿರಾಟ್ ಕೊಹ್ಲಿ (593), 1979 ರಲ್ಲಿ ಸುನಿಲ್ ಗವಾಸ್ಕರ್ (542) ಇಂಗ್ಲೆಂಡ್‌ನಲ್ಲಿ ಗಿಲ್‌ಗಿಂತ ಕಡಿಮೆ ರನ್ ಗಳಿಸಿದ್ದ ಭಾರತೀಯ ಆಟಗಾರರು. ಇಂಗ್ಲೆಂಡ್ ಜೊತೆಗೆ ಸೆನಾ ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್) 700 ರನ್ ಗಳಿಸಿದ ಮೊದಲ ಏಷ್ಯನ್ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನೂ ಗಿಲ್ ಇಂದು ತಮ್ಮದಾಗಿಸಿಕೊಂಡರು.

Scroll to load tweet…

2014-15ರ ಆಸ್ಟ್ರೇಲಿಯಾ ಸರಣಿಯಲ್ಲಿ 692 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ದಾಖಲೆಯನ್ನು ಗಿಲ್ ಇಂದು ಮುರಿದರು. ಒಂದು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಈಗ ಶುಭ್‌ಮನ್ ಗಿಲ್ ಮುಂದಿದೆ. 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 774 ರನ್ ಮತ್ತು 1978-79ರ ಸರಣಿಯಲ್ಲಿ 732 ರನ್ ಗಳಿಸಿದ ಸುನಿಲ್ ಗವಾಸ್ಕರ್ ಮತ್ತು 2024 ರಲ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 712 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಒಂದು ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರು.

ಒಂದು ಟೆಸ್ಟ್ ಸರಣಿಯಲ್ಲಿ 700 ರನ್ ಪೂರೈಸಿದ ಕೇವಲ ಮೂರನೇ ಭಾರತೀಯ ಆಟಗಾರ ಗಿಲ್. ವೆಸ್ಟ್ ಇಂಡೀಸ್ ವಿರುದ್ಧ ಸುನಿಲ್ ಗವಾಸ್ಕರ್, ಇಂಗ್ಲೆಂಡ್ ವಿರುದ್ಧ ಯಶಸ್ವಿ ಜೈಸ್ವಾಲ್ ಗಿಲ್‌ಗಿಂತ ಮೊದಲು ಒಂದು ಟೆಸ್ಟ್ ಸರಣಿಯಲ್ಲಿ 700 ರನ್ ಗಳಿಸಿದ ಭಾರತೀಯ ಆಟಗಾರರಾಗಿದ್ದಾರೆ. ಒಂದು ಟೆಸ್ಟ್ ಸರಣಿಯಲ್ಲಿ 700 ರನ್ ಗಳಿಸಿದ ನಾಯಕರಲ್ಲಿ ಗಿಲ್ ಎಂಟನೆಯವರು. ಡಾನ್ ಬ್ರಾಡ್‌ಮನ್ (2 ಬಾರಿ), ಗ್ಯಾರಿ ಸೊಬೆರ್ಸ್, ಗ್ರೆಗ್ ಚಾಪೆಲ್, ಸುನಿಲ್ ಗವಾಸ್ಕರ್, ಡೇವಿಡ್ ಗೋವರ್, ಗ್ರಹಾಂ ಗೂಚ್, ಗ್ರೇಮ್ ಸ್ಮಿತ್ ಇದಕ್ಕೂ ಮೊದಲು ಒಂದು ಟೆಸ್ಟ್ ಸರಣಿಯಲ್ಲಿ 700 ರನ್ ಗಳಿಸಿದ ನಾಯಕರು.

ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಬಗ್ಗೆ ಹೇಳುವುದಾದರೇ, ಭಾರತ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 81.1 ಓವರ್ ಅಂತ್ಯದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 202 ರನ್ ಗಳಿಸಿದೆ. 311 ರನ್‌ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಖಾತೆ ತೆರೆಯುವ ಮುನ್ನವೇ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ಕೆ ಎಲ್ ರಾಹುಲ್ ಹಾಗೂ ಶುಭ್‌ಮನ್ ಗಿಲ್ ಮೂರನೇ ವಿಕೆಟ್‌ಗೆ 188 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆದರೆ 90 ರನ್ ಗಳಿಸಿದ್ದ ಕೆ ಎಲ್ ರಾಹುಲ್, ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬೀಳುವ ಮೂಲಕ ಈ ಜತೆಯಾಟಕ್ಕೆ ಬ್ರೇಕ್ ಬಿದ್ದಿತು. ಸದ್ಯ ಶುಭ್‌ಮನ್ ಗಿಲ್ 96 ಹಾಗೂ ವಾಷಿಂಗ್ಟನ್ ಸುಂದರ್ 7 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.