2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಐಸಿಸಿ ಪ್ರಕಟಿಸಿದ 'ಟೀಮ್ ಆಫ್ ದಿ ಟೂರ್ನಮೆಂಟ್'ನಲ್ಲಿ ನಾಲ್ವರು ಆಸೀಸ್ ಆಟಗಾರ್ತಿಯರು ಸ್ಥಾನ ಪಡೆದರೆ, ಭಾರತದ ಪರ ಶ್ರೀ ಚಾರಿಣಿ ಏಕೈಕ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು: ಸೋಫಿ ಮೂಲಿನ್ಯುಕ್ಸ್ ನೇತೃತ್ವದ ಆಸ್ಟ್ರೇಲಿಯಾ ಚಾಂಪಿಯನ್ ಆಗುವುದರೊಂದಿಗೆ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯು ಅಧಿಕೃತವಾಗಿ ತೆರೆ ಕಂಡಿದೆ. ಇದರ ಬೆನ್ನಲ್ಲೇ ಐಸಿಸಿಯು ಈ ಬಾರಿಯ ಟೀಮ್ ಆಫ್ ದಿ ಟೂರ್ನಮೆಂಟ್ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಏಕೈಕ ಭಾರತೀಯ ಆಟಗಾರ್ತಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್ ಹಾಗೂ ವೇಲ್ಸ್ ಜಂಟಿಯಾಗಿ ಆಯೋಜಿಸಿದ್ದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಫೈನಲ್‌ನಲ್ಲಿ ಮಣಿಸುವ ಮೂಲಕ ಕಾಂಗರೂ ಪಡೆ ದಾಖಲೆಯ ಏಳನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ಇದೀಗ ಐಸಿಸಿ ಪ್ರಕಟಿಸಿದ ಟೀಮ್ ಆಫ್ ದಿ ಟೂರ್ನಮೆಂಟ್‌ನಲ್ಲೂ ಆಸೀಸ್ ಆಟಗಾರ್ತಿಯರೇ ಸಿಂಹಪಾಲು ಪಡೆದುಕೊಂಡಿದ್ದಾರೆ. ಈ ಬಾರಿಯ ಟೀಮ್ ಆಫ್ ದಿ ಟೂರ್ನಮೆಂಟ್‌ನಲ್ಲಿ ಆಸೀಸ್ ನಾಯಕಿ ಸೋಫಿ ಮೂಲಿನ್ಯುಕ್ಸ್, ವಿಕೆಟ್ ಕೀಪರ್ ಬ್ಯಾಟರ್ ಬೆಥ್ ಮೂನಿ, ದಿಗ್ಗಜೆ ಆಲ್ರೌಂಡರ್ ಎಲೈಸಿ ಪೆರ್ರಿ ಹಾಗೂ ಆಶ್ಲೆ ಗಾರ್ಡ್ನರ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಾಲ್ವರು ಆಟಗಾರ್ತಿಯರು ಕಾಂಗರೂ ಪಡೆ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಆಸೀಸ್ ಮೂಲದ ಬೆಥ್ ಮೂನಿ 7 ಪಂದ್ಯಗಳಿಂದ 238 ರನ್ ಗಳಿಸಿದರೆ, ವಿಕೆಟ್ ಕೀಪಿಂಗ್‌ನಲ್ಲಿ 5 ಮಹತ್ವದ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಆಲ್ರೌಂಡರ್ ಪೆರ್ರಿ 198 ರನ್ ಹಾಗೂ ಆರು ವಿಕೆಟ್ ಕಬಳಿಸಿದ್ದರು. ಆಶ್ಲೆ ಗಾರ್ಡ್ನರ್ ಆರು ಪಂದ್ಯಗಳಿಂದ 150 ರನ್ ಹಾಗೂ 3 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರೆ, ನಾಯಕಿ ಸೋಫಿ 7 ಪಂದ್ಯಗಳಿಂದ 11 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಏಕೈಕ ಭಾರತೀಯ ಆಟಗಾರ್ತಿಗೆ ಸ್ಥಾನ:
2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡದ ಅಭಿಯಾನ ಗ್ರೂಪ್ ಹಂತದಲ್ಲೇ ಕೊನೆಯಾಗಿತ್ತು. ಇದರ ಹೊರತಾಗಿಯೂ ಗ್ರೂಪ್ ಹಂತದಲ್ಲೇ ಅದ್ಬುತ ಪ್ರದರ್ಶನ ತೋರಿದ್ದ ಶ್ರೀ ಚಾರಿಣಿ, ಐಸಿಸಿ ಟೀಮ್ ಆಫ್ ದಿ ಟೂರ್ನಮೆಂಟ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಭಾರತ ಪರ ಅದ್ಭುತ ಪ್ರದರ್ಶನ ತೋರಿದ್ದ ಶ್ರೀ ಚಾರಿಣಿ ಕೇವಲ ಐದು ಪಂದ್ಯಗಳಲ್ಲೇ 14 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು.
ಐಸಿಸಿ ಪ್ರಕಟಿಸಿದ ಟೀಮ್ ಆಫ್ ದಿ ಟೂರ್ನಮೆಂಟ್‌ನಲ್ಲಿ ಆರಂಭಿಕರಾಗಿ ಬೆಥ್ ಮೂನಿ ಹಾಗೂ ನ್ಯಾಟ್ ಸೀವರ್ ಬ್ರಂಟ್ ಸ್ಥಾನ ಪಡೆದಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಎಲೈಸಿ ಪೆರ್ರಿ, ನಾಲ್ಕನೇ ಕ್ರಮಾಂಕದಲ್ಲಿ ಐರ್ಲೆಂಡ್‌ನ ಓರ್ಲಾ ಪ್ರೆಂಡರ್ಗೆಸ್ಟ್, ಐದನೇ ಕ್ರಮಾಂಕದಲ್ಲಿ ಶ್ರೀಲಂಕಾದ ನಿಲಕ್ಸಿಕಾ ಸಿಲ್ವಾ ಸ್ಥಾನ ಪಡೆದಿದ್ದಾರೆ. ಇನ್ನು ಆರನೇ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ರೌಂಡರ್ ಮರಿಜ್ಜಾನೆ ಕಾಪ್, ಏಳನೇ ಕ್ರಮಾಂಕದಲ್ಲಿ ಆಸೀಸ್ ಮೂಲದ ಅನುಭವಿ ಆಲ್ರೌಂಡರ್ ಆಶ್ ಗಾರ್ಡ್ನರ್ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಪಾಕಿಸ್ತಾನದ ಫಾತಿಮಾ ಸನಾ, ಆಸೀಸ್ ನಾಯಕಿ ಸೋಫಿ ಮೂಲಿನ್ಯುಕ್ಸ್, ಭಾರತದ ಶ್ರೀ ಚಾರಣಿ ಸ್ಥಾನ ಪಡೆದಿದ್ದಾರೆ. 12ನೇ ಆಟಗಾರ್ತಿಯಾಗಿ ಸ್ಕಾಟ್ಲೆಂಡ್‌ನ ಬ್ಯಾಟರ್ ಡಾರ್ಸಿ ಕಾರ್ಟರ್ ಸ್ಥಾನ ಪಡೆದಿದ್ದಾರೆ.
2026ರ ಐಸಿಸಿ ಟಿ20 ಟಿಮ್ ಆಫ್ ದಿ ಟೂರ್ನಮೆಂಟ್ ಹೀಗಿದೆ ನೋಡಿ:
ಬೆಥ್ ಮೂನಿ(ವಿಕೆಟ್ ಕೀಪರ್), ನ್ಯಾಟ್ ಸೀವರ್ ಬ್ರಂಟ್, ಎಲೈಸಿ ಪರ್ರಿ, ಓರ್ಲಾ ಪ್ರೆಂಡರ್ಗೆಸ್ಟ್, ನಿಲಕ್ಸಿಕಾ ಸಿಲ್ವಾ, ಮರಿಜ್ಜಾನೆ ಕಾಪ್, ಆಶ್ ಗಾರ್ಡ್ನರ್, ಫಾತಿಮಾ ಸನಾ, ಸೋಫಿ ಮೂಲಿನ್ಯುಕ್ಸ್(ನಾಯಕಿ), ಶ್ರೀ ಚಾರಣಿ. (ಡಾರ್ಸಿ ಕಾರ್ಟರ್, 12ನೇ ಆಟಗಾರ್ತಿ).


