ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಅವರ ಪುತ್ರರಾದ ಸಮಿತ್ ಮತ್ತು ಅನ್ವಯ್ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಆಲ್ರೌಂಡರ್ ಸಮಿತ್ ಮಹಾರಾಜ ಟ್ರೋಫಿಯಲ್ಲಿ ಮಿಂಚಿದರೆ, ವಿಕೆಟ್ ಕೀಪರ್ ಬ್ಯಾಟರ್ ಅನ್ವಯ್ ಭಾರತದ ಅಂಡರ್-19 ತಂಡದಲ್ಲಿ ಭರವಸೆ ಮೂಡಿಸಿದ್ದಾರೆ. ಈ ಲೇಖನವು ತಂದೆಯ ಪರಂಪರೆಯನ್ನು ಮುಂದುವರಿಸುವ ಸವಾಲು ಮತ್ತು ಅವರ ವಿಶಿಷ್ಟ ಆಟದ ಶೈಲಿಯನ್ನು ವಿಶ್ಲೇಷಿಸುತ್ತದೆ.
- ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಹುಲ್ ದ್ರಾವಿಡ್ ಎಂದರೆ ಹಾಗೇ.. ಹಮ್ಮು-ಬಿಮ್ಮು ಅವರ ಹತ್ತಿರ ಸುಳಿಯಲಾರದು. ಇನ್ನು ಸೂಪರ್ ಸ್ಟಾರ್. ಅದು ಅವರ ಆಟಕ್ಕೆ ಸಿಕ್ಕ ಬಳುವಳಿ. ಆದರೆ ಮಕ್ಕಳ ಆಟವನ್ನು ನೋಡಲು ಬರುತ್ತಿದ್ದ ದ್ರಾವಿಡ್ ಸಾಮಾನ್ಯರಲ್ಲಿ ಸಾಮಾನ್ಯ. ಬೆಂಗಳೂರು, ಮೈಸೂರಲ್ಲಿ ಮಕ್ಕಳು ಆಡುತ್ತಿದ್ದರೆ ಅಲ್ಲೆಲ್ಲೋ ಕಲ್ಲಿನ ಮೆಟ್ಟಿಲುಗಳ ಮೇಲೋ, ಪ್ಲಾಸ್ಟಿಕ್ ಚೇರ್ ಮೇಲೋ ಕುಳಿತು ಪಂದ್ಯ ವೀಕ್ಷಿಸುವ ಅಪ್ಪ ದ್ರಾವಿಡ್.
ಅಪ್ಪ ಬ್ಯಾಟಿಂಗ್ ದಂತಕಥೆ. ಮಕ್ಕಳಿಬ್ಬರೂ ಆಲ್ರೌಂಡರ್’ಗಳು. ದೊಡ್ಡವನು ಮಧ್ಯಮ ಕ್ರಮಾಂಕದ ಬ್ಯಾಟರ್+ಮಧ್ಯಮ ವೇಗದ ಬೌಲರ್. ಚಿಕ್ಕವನು ವಿಕೆಟ್ ಕೀಪರ್+ಮಿಡಲ್ ಆರ್ಡರ್ ಬ್ಯಾಟರ್. ದಂತಕಥೆಗಳು ಎನಿಸಿಕೊಂಡವರ ಮಕ್ಕಳು ಕ್ರಿಕೆಟ್ ಆಡಲು ಆರಂಭಿಸಿದಾಗ ನಿರೀಕ್ಷೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಮಕ್ಕಳನ್ನು ಅಪ್ಪನಿಗೆ ಹೋಲಿಕೆ ಮಾಡಲಾರಂಭಿಸುತ್ತಾರೆ. ಆ ಮಕ್ಕಳ ಪಾಲಿಗೆ ಆ ಹೋಲಿಕೆಯೇ ಮೊದಲ ಶತ್ರು.
ಕ್ರಿಕೆಟ್’ನಲ್ಲಿ ಅಪ್ಪನಂತೆ ಮಗ ಆಡಲು ಸಾಧ್ಯವೇ ಇಲ್ಲ. ಅಪ್ಪ ಅಪ್ಪನೇ. ಮಗ ಮಗನೇ. ಸುನಿಲ್ ಗವಾಸ್ಕರ್’ರಂತೆ ಅವರ ಮಗ ಆಡಲೇ ಇಲ್ಲ. ಸಚಿನ್ ತೆಂಡೂಲ್ಕರ್ ಪುತ್ರ ಮತ್ತೊಬ್ಬ ಸಚಿನ್ ಆಗಲು ಸಾಧ್ಯವಾಗಲಿಲ್ಲ. ರಾಹುಲ್ ದ್ರಾವಿಡ್ ಅವರ ಪುತ್ರರ ಕಥೆಯೇನು..? ಇಬ್ಬರೂ ಪ್ರತಿಭಾಸಂಪನ್ನರು.. ದೊಡ್ಡವನಿಗೆ 20 ವರ್ಷ, ಚಿಕ್ಕವನಿಗೆ 17 ವರ್ಷ. ಹತ್ತಿರದಲ್ಲಿ ನಿಂತರೆ ಎತ್ತರದಲ್ಲಿ ದ್ರಾವಿಡ್ ಅವರನ್ನೂ ಮೀರಿ ಬೆಳೆದಿರುವ ಹಿರಿಮಗ ಸಮಿತ್ ದ್ರಾವಿಡ್. ಆಟದ ಶೈಲಿಯಲ್ಲಿ ಅಪ್ಪನನ್ನೇ ನೆನಪಿಸುತ್ತಿರುವ ಕಿರಿಮಗ ಅನ್ವಯ್ ದ್ರಾವಿಡ್.
ಅಣ್ಣ ಬ್ಯಾಟಿಂಗ್+ಬೌಲಿಂಗ್ ಆಲ್ರೌಂಡರ್. ತಮ್ಮ ಕೀಪರ್-ಬ್ಯಾಟರ್ ಆಲ್ರೌಂಡರ್..!
ಮಹಾರಾಜ ಟಿ20 ಟೂರ್ನಿಯಲ್ಲಿ ಸಮಿತ್ ದ್ರಾವಿಡ್ ಆಡಿದ ಕೆಲ ಪಂದ್ಯಗಳನ್ನು ನೋಡಿದೆ.. ಕೆಲ ಹೊಡೆತಗಳನ್ನು ದ್ರಾವಿಡ್ ಅವರಂತೆಯೇ ಬಾರಿಸುತ್ತಾನೆ. ಬೌಲಿಂಗ್’ನಲ್ಲಿ ಆತ ಮಧ್ಯಮ ವೇಗಿ. ಬೌಲಿಂಗ್ ಮಾಡುವುದನ್ನು ನೋಡಿದಾಗ ಮೊದಲು ಅನ್ನಿಸಿದ್ದು ‘ಹುಡುಗನ ಆ್ಯಕ್ಷನ್ ಚೆನ್ನಾಗಿದೆ’. ಸಮಿತ್ ದ್ರಾವಿಡ್ ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಆಗಬೇಕೆನ್ನುವುದು ತಾಯಿಯ ಆಸೆ ಎಂದು ಕೇಳಿ ಪಟ್ಟಿದ್ದೇನೆ. ಆತ ಬ್ಯಾಟಿಂಗನ್ನಷ್ಟೇ ಆಯ್ಕೆ ಮಾಡಿಕೊಂಡಿದ್ದರೆ ಅಪ್ಪ ಬ್ಯಾಟಿಂಗ್ ದಂತಕಥೆಯಾಗಿರುವ ಕಾರಣಕ್ಕೆ ಬಹುಬೇಗ ಅಗ್ನಿಪರೀಕ್ಷೆಗೆ ಒಳಗಾಗುತ್ತಿದ್ದ. ಆಲ್ರೌಂಡರ್ ಆಗಿದ್ದು ಇದೇ ಕಾರಣಕ್ಕಿರಬಹುದು. ಅಷ್ಟರ ಮಟ್ಟಿಗೆ ಅವನು ಕ್ರಿಕೆಟ್ ಮೈದಾನದಾಚೆಗಿನ ಒತ್ತಡಗಳಿಂದ ಮುಕ್ತ.
ಅನ್ವಯ್ ಅಪ್ಪನಂತೆ ವಿಕೆಟ್ ಕೀಪರ್ ಬ್ಯಾಟರ್
ಕಿರಿಮಗ ಅನ್ವಯ್ ದ್ರಾವಿಡ್ ಅಪ್ಪನಂತೆ ವಿಕೆಟ್ ಕೀಪರ್ ಬ್ಯಾಟರ್. 16ನೇ ವಯಸ್ಸಿನವರೆಗೆ ರಾಹುಲ್ ದ್ರಾವಿಡ್ ವಿಕೆಟ್ ಕೀಪಿಂಗ್ ಬ್ಯಾಟ್ಸ್’ಮನ್ ಆಗಿದ್ದವರು. ಬಳಿಕ ಬ್ಯಾಟಿಂಗ್ ಕಡೆಯಷ್ಟೇ ಗಮನ ಹರಿಸಿ ವಿಕೆಟ್ ಕೀಪಿಂಗ್ ಬಿಟ್ಟಿದ್ದರು. ಕರ್ನಾಟಕ ರಣಜಿ ತಂಡಕ್ಕೆ ಕಾಲಿಟ್ಟದ್ದು pure ಬ್ಯಾಟ್ಸ್’ಮನ್ ಆಗಿ. ಮತ್ತೆ ದ್ರಾವಿಡ್ ಕೀಪಿಂಗ್ ಗ್ಲೌಸ್ ತೊಟ್ಟದ್ದು 15 ವರ್ಷಗಳ ನಂತರ. ಅದು ಭಾರತ ತಂಡದಲ್ಲಿ. ಅನಿವಾರ್ಯತೆಗಾಗಿ. ವಿಕೆಟ್ ಕೀಪಿಂಗ್ ಮಾಡುವಂತೆ ದ್ರಾವಿಡ್ ಅವರನ್ನು ಬಲವಂತ ಮಾಡಿ ಒಪ್ಪಿಸಿದ್ದು ಆಗಿನ ಭಾರತ ತಂಡದ ನಾಯಕ ಸೌರವ್ ಗಂಗೂಲಿ. ಮುಂದಿನದ್ದು ಇತಿಹಾಸ. ಒಂದಿಡೀ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಕೀಪಿಂಗ್ ಮಾಡಿ ಭಾರತ ಫೈನಲ್ ತಲುಪಲು ಕೊಡುಗೆ ನೀಡಿದವರು ದ್ರಾವಿಡ್.
ಕಿರಿಮಗ ಅನ್ವಯ್ ದ್ರಾವಿಡ್ ವಿಕೆಟ್ ಕೀಪರ್-ಬ್ಯಾಟರ್ ಆಗಿಯೇ ಕ್ರಿಕೆಟ್ ಆರಂಭಿಸಿದ್ದಾನೆ. 17ನೇ ವಯಸ್ಸಿಗೆ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿರುವ ಅನ್ವಯ್ ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂಡರ್-19 ಏಕದಿನ ಸರಣಿಯ 2ನೇ ಪಂದ್ಯದಲ್ಲಿ 67 ಎಸೆತಗಳಲ್ಲಿ 87 ರನ್ ಗಳಿಸಿ ಮಿಂಚಿದ್ದಾರೆ. ಅಣ್ಣ ಮಹಾರಾಜ ಟ್ರೋಫಿಯಲ್ಲಿ ಮಿಂಚುತ್ತಿದ್ದರೆ, ತಮ್ಮ ಭಾರತ ಅಂಡರ್-19 ತಂಡದ ಪರ ಮಿಂಚುತ್ತಿದ್ದಾನೆ.
ಇಬ್ಬರು ಮಕ್ಕಳಲ್ಲಿ ಅಪ್ಪನಂತೆ ಆಗುವವನು ಯಾರು..? ನನ್ನನ್ನು ಕೇಳಿದರೆ ಯಾರೂ ಆಗಲಾರರು. ಏಕೆಂದರೆ ವಿಶ್ವಕ್ಕೊಬ್ಬನೇ ರಾಹುಲ್ ದ್ರಾವಿಡ್. ಅವರಂಥಾ ಮತ್ತೊಬ್ಬ ಕ್ರಿಕೆಟಿಗ ಹುಟ್ಟಲಾರ. ಬ್ಯಾಟಿಂಗ್ ಶೈಲಿ, ಕೆಲ ನಿರ್ದಿಷ್ಟ ಹೊಡೆತಗಳನ್ನು ಬಾರಿಸುವ ರೀತಿ, ಕ್ರೀಸ್’ನಲ್ಲಿ ನಿಲ್ಲುವ ಭಂಗಿ. ಹೀಗೆ ಆಟದಲ್ಲಿ ಮಕ್ಕಳು ಅಪ್ಪನನ್ನು ನೆನಪಿಸಬಹುದಷ್ಟೇ ಹೊರತು, ಅಪ್ಪನಂತೆ ಆಗಲು ಸಾಧ್ಯವೇ ಇಲ್ಲ. ಸಾಧನೆಯಲ್ಲಿ ಅಪ್ಪನನ್ನು ಮೀರಿಸಬಹುದೇ..? ಈ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ರಾಹುಲ್ ದ್ರಾವಿಡ್ ಅವರಂತೆ ಕ್ರಿಕೆಟ್ ಆಡುವುದು ಅಸಾಧ್ಯ. ಒಂದು ವೇಳೆ ಆಡಿ ಬಿಟ್ಟರೆ ಅಲ್ಲಿ ಸೃಷ್ಠಿಯಾಗಲಿರುವುದು ಮತ್ತೊಂದು ಚರಿತ್ರೆ.
ರಾಹುಲ್ ದ್ರಾವಿಡ್ ಅವರ ಮಕ್ಕಳಿಬ್ಬರಿಗೂ ಶುಭವಾಗಲಿ..


