ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಜಯ ಸಾಧಿಸಿತು. ಆದರೆ, ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್‌ಗೆ ಬಿಸಿಸಿಐ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಋತುವಿನಲ್ಲಿ ಇದು ಅವರ ಮೊದಲ ತಪ್ಪಾಗಿದೆ.

ಚಂಡೀಗಢ: ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಖುಷಿಯಲ್ಲಿದ್ದ ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್‌ಗೆ ಬಿಸಿಸಿಐ ಶಾಕ್ ಕೊಟ್ಟಿದೆ. ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ (ಸ್ಲೋ ಓವರ್ ರೇಟ್) ಕಾಯ್ದುಕೊಂಡಿದ್ದಕ್ಕೆ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಮೂಲಕ ಐಪಿಎಲ್‌ನ ಈ ಸೀಸನ್‌ನಲ್ಲಿ ದಂಡನೆಗೆ ಒಳಗಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಶ್ರೇಯಸ್ ಅಯ್ಯರ್ ಪಾತ್ರರಾಗಿದ್ದಾರೆ.

Add Asianetnews Kannada as a Preferred SourcegooglePreferred

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ಪ್ರಕಾರ, ಈ ಸೀಸನ್‌ನಲ್ಲಿ ಪಂಜಾಬ್ ತಂಡ ಮಾಡಿದ ಮೊದಲ ತಪ್ಪು ಇದಾಗಿದ್ದರಿಂದ ದಂಡವನ್ನು 12 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. ಕಳೆದ ಸೀಸನ್‌ನಲ್ಲೂ ಅಯ್ಯರ್ ಇದೇ ತಪ್ಪಿಗೆ ಎರಡು ಬಾರಿ ದಂಡ ಕಟ್ಟಿದ್ದರು. ಆಗ ಎರಡನೇ ಬಾರಿಗೆ ನಿಯಮ ಮುರಿದಾಗ ಬರೋಬ್ಬರಿ 24 ಲಕ್ಷ ರೂಪಾಯಿ ದಂಡ ಬಿದ್ದಿತ್ತು. ಗುಜರಾತ್ ವಿರುದ್ಧದ ಗೆಲುವಿನಿಂದ ಪಂಜಾಬ್ ಪಾಯಿಂಟ್ಸ್ ಖಾತೆ ತೆರೆದಿದ್ದರೂ, ಮುಂದಿನ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಓವರ್ ರೇಟ್ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಮತ್ತೊಮ್ಮೆ ನಿಯಮ ಉಲ್ಲಂಘಿಸಿದರೆ ದಂಡದ ಮೊತ್ತ ದುಪ್ಪಟ್ಟಾಗಬಹುದು, ಅಷ್ಟೇ ಅಲ್ಲದೆ ಸಸ್ಪೆನ್ಷನ್ ಶಿಕ್ಷೆಯನ್ನೂ ಎದುರಿಸಬೇಕಾಗಬಹುದು.

Scroll to load tweet…

ಪಂಜಾಬ್-ಗುಜರಾತ್ ನಡುವಿನ ಮ್ಯಾಚ್ ಹೇಗಿತ್ತು?

ಮುಲ್ಲನ್‌ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ ಬೌಲರ್‌ಗಳು 162 ರನ್‌ಗಳಿಗೆ ಕಟ್ಟಿಹಾಕಿದ್ದರು. ಶುಭ್‌ಮನ್ ಗಿಲ್ (39) ಮತ್ತು ಜೋಸ್ ಬಟ್ಲರ್ (38) ಉತ್ತಮ ಆರಂಭ ನೀಡಿದರೂ, ಯುಜುವೇಂದ್ರ ಚಹಲ್ ಮತ್ತು ಮಾರ್ಕೊ ಯಾನ್ಸೆನ್ ಅವರ ಕರಾರುವಾಕ್ ಬೌಲಿಂಗ್ ಗುಜರಾತ್‌ಗೆ ಕಡಿವಾಣ ಹಾಕಿತು. ಕೊನೆಯ 5 ಓವರ್‌ಗಳಲ್ಲಿ ಗುಜರಾತ್ ಕೇವಲ 34 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನತ್ತಿದ ಪಂಜಾಬ್ ಪರ ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಕೂಪರ್ ಕೊನೊಲಿ ಎರಡನೇ ವಿಕೆಟ್‌ಗೆ 77 ರನ್‌ಗಳ ಜೊತೆಯಾಟವಾಡಿ ಸುಲಭ ಗೆಲುವಿನತ್ತ ತಂಡವನ್ನು ಕೊಂಡೊಯ್ದಿದ್ದರು.

ಆದರೆ, 13ನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಪಂದ್ಯದ ಗತಿಯನ್ನೇ ಬದಲಿಸಿದರು. ಕೇವಲ 10 ಎಸೆತಗಳಲ್ಲಿ 3 ರನ್ ನೀಡಿ 3 ವಿಕೆಟ್ ಪಡೆದ ಪ್ರಸಿದ್ಧ್, ಪಂಜಾಬ್ ತಂಡಕ್ಕೆ ಆಘಾತ ನೀಡಿದರು. 110/2 ರನ್‌ಗಳ ಉತ್ತಮ ಸ್ಥಿತಿಯಲ್ಲಿದ್ದ ಪಂಜಾಬ್, 118/6ಕ್ಕೆ ಕುಸಿಯಿತು. ಆದರೆ, 22 ವರ್ಷದ ಕೂಪರ್ ಕೊನೊಲಿ ಅವರ ಅಜೇಯ ಅರ್ಧಶತಕ ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಿತು. 44 ಎಸೆತಗಳಲ್ಲಿ ಅಜೇಯ 72 ರನ್ ಗಳಿಸಿದ ಕೊನೊಲಿ, ಪಂಜಾಬ್ ಪರ ಟಾಪ್ ಸ್ಕೋರರ್ ಎನಿಸಿಕೊಂಡರು.

ಪಂಜಾಬ್‌ಗೆ ಮುಂದಿನ ಪಂದ್ಯದಲ್ಲಿ ಸಿಎಸ್‌ಕೆ ಸವಾಲು!

ಪಂಜಾಬ್ ಕಿಂಗ್ಸ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಏಪ್ರಿಲ್ 03ರಂದು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಸಿಎಸ್‌ಕೆ ತಂಡವು ತವರಿನಲ್ಲಿ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದ್ದರೇ, ಪಂಜಾಬ್ ಕಿಂಗ್ಸ್ ತಂಡವು ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.