ಗುಜರಾತ್ ನೀಡಿದ 162 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್, ಪ್ರಸಿದ್ಧ್ ಕೃಷ್ಣ ಅವರ ಮಾರಕ ಬೌಲಿಂಗ್‌ನಿಂದಾಗಿ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ಆದಾಗ್ಯೂ, ಕೂಪರ್ ಕೊನೊಲಿ ಅವರ ಅಜೇಯ 72 ರನ್‌ಗಳ ಏಕಾಂಗಿ ಹೋರಾಟದ ನೆರವಿನಿಂದ ಪಂಜಾಬ್ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ಮುಲ್ಲಾನ್‌ಪುರ: ಪ್ರಸಿದ್ಧ್‌ ಕೃಷ್ಣ ಮಾರಕ ಬೌಲಿಂಗ್‌ ಮುಂದೆ ಕುಸಿದು ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿದರೂ ಚೇತರಿಸಿಕೊಂಡ ಪಂಜಾಬ್‌ ಕಿಂಗ್ಸ್‌ ತಂಡ ಗುಜರಾತ್‌ ವಿರುದ್ಧ ಐಪಿಎಲ್‌ ಪಂದ್ಯದಲ್ಲಿ 3 ವಿಕೆಟ್ ರೋಚಕ ಜಯಗಳಿಸಿದೆ. ಯುವ ಬ್ಯಾಟರ್‌, ಆಸ್ಟ್ರೇಲಿಯಾದ ಕೂಪರ್‌ ಕೊನೊಲಿ ಏಕಾಂಗಿ ಹೋರಾಟದಿಂದಾಗಿ ಪಂಜಾಬ್‌ ಶುಭಾರಂಭ ಮಾಡಿತು.

Add Asianetnews Kannada as a Preferred SourcegooglePreferred

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 6 ವಿಕೆಟ್‌ಗೆ 162 ರನ್‌ ಗಳಿಸಿತು. ದೊಡ್ಡ ಮೊತ್ತದ ನಿರೀಕ್ಷೆ ಮೂಡಿಸಿತ್ತಾದರೂ ಪಂಜಾಬ್‌ನ ಮಾರಕ ಡೆತ್‌ ಓವರ್‌ ಮುಂದೆ ಗುಜರಾತ್‌ಗೆ ರನ್ ಗಳಿಸಲಾಗಲಿಲ್ಲ. ನಾಯಕ ಶುಭ್‌ಮನ್‌ ಗಿಲ್‌ 39, ಜೋಸ್‌ ಬಟ್ಲರ್‌ 38, ಗ್ಲೆನ್‌ ಫಿಲಿಪ್ಸ್‌ 25 ರನ್‌ ಸಿಡಿಸಿದರು. ಬಿಗು ದಾಳಿ ಹೊರತಾಗಿಯೂ ಪಂಜಾಬ್‌ 14 ಇತರೆ ರನ್‌ ನೀಡಿತು. ಕನ್ನಡಿಗ ವೇಗಿ ವೈಶಾಕ್‌ 34 ರನ್‌ ನೀಡಿ 3 ವಿಕೆಟ್‌ ಕಿತ್ತರು.

ಕೊನೊಲಿ ಏಕಾಂಗಿ ಹೋರಾಟ:

ಗುಜರಾತ್‌ ನೀಡಿದ ಮೊತ್ತವನ್ನು ಬೆನ್ನತ್ತಲು ಶುರುವಿಟ್ಟ ಪಂಜಾಬ್‌, ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. 12 ಓವರ್‌ಗಳಲ್ಲಿ ತಂಡ 2 ವಿಕೆಟ್‌ಗೆ 110 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಪ್ರಸಿದ್ಧ್‌ ಕೃಷ್ಣ 13ನೇ ಓವರ್‌ನಲ್ಲಿ ದಾಳಿಗಿಳಿದ ಬಳಿಕ ಪಂದ್ಯದ ಚಿತ್ರಣವೇ ಬದಲಾಯಿತು. ಆ ಓವರ್‌ನಲ್ಲಿ ಶ್ರೇಯಸ್‌ ವಿಕೆಟ್‌ ಪಡೆದ ಶ್ರೇಯಸ್‌, ತಮ್ಮ ಮುಂದಿನ ಓವರ್‌ನಲ್ಲಿ ಶಶಾಂಕ್‌, ಸ್ಟೋಯ್ನಿಸ್‌ರನ್ನೂ ಔಟ್‌ ಮಾಡಿದರು. 13-15 ಓವರ್‌ ನಡುವೆ ತಂಡ 11 ರನ್‌ಗೆ 4 ವಿಕೆಟ್‌ ಕಳೆದುಕೊಂಡಿತು. ಆದರೆ ಏಕಾಂಗಿ ಹೋರಾಟ ಮುಂದುವರಿಸಿದ ಕೂಪರ್‌, ತಂಡವನ್ನು ಗೆಲ್ಲಿಸಿದರು. ಅವರು 44 ಎಸೆತಗಳಲ್ಲಿ ಔಟಾಗದೆ 72 ರನ್‌ ಸಿಡಿಸಿದರು.

ಸ್ಕೋರ್‌: ಗುಜರಾತ್‌ 20 ಓವರಲ್ಲಿ 162/6 (ಗಿಲ್‌ 39, ಬಟ್ಲರ್‌ 38, ವೈಶಾಕ್‌ 3-34, ಚಹಲರ್‌ 2-28), ಪಂಜಾಬ್‌ 19.1 ಓವರಲ್ಲಿ 165/7 (ಕೊನೊಲಿ ಔಟಾಗದೆ 72, ಪ್ರಭ್‌ಸಿಮ್ರನ್‌ 37, ಪ್ರಸಿದ್ಧ್‌ 3-29)

ಪಂದ್ಯಶ್ರೇಷ್ಠ: ಕೂಪರ್‌ ಕೊನೊಲಿ

ಟರ್ನಿಂಗ್‌ ಪಾಯಿಂಟ್‌

ಚೇಸಿಂಗ್‌ ವೇಳೆ ಪಂಜಾಬ್‌ 12 ಓವರಲ್ಲಿ 2 ವಿಕೆಟ್‌ಗೆ 110 ರನ್‌ ಗಳಿಸಿತ್ತು. ಮುಂದಿನ 3 ಓವರ್‌ನಲ್ಲಿ 11 ರನ್‌ಗೆ 4 ವಿಕೆಟ್‌ ಬಿದ್ದರೂ, ಕೊನೊಲಿ ಹೋರಾಟ ಬಿಡಲಿಲ್ಲ. ಪ್ರಸಿದ್ಧ್‌ ಎಸೆದ ನಿರ್ಣಾಯಕ 19ನೇ ಓವರ್‌ನಲ್ಲಿ 14 ರನ್‌ ದೋಚಿದ ಪಂಜಾಬ್‌ ಜಯ ತನ್ನದಾಗಿಸಿಕೊಂಡಿತು.

ಬೌಲಿಂಗ್‌ನಲ್ಲಿ ಕನ್ನಡಿಗರಾದ ವೈಶಾಕ್‌, ಕೃಷ್ಣ ಅಬ್ಬರ

ಸೋಮವಾರದ ಪಂದ್ಯದಲ್ಲಿ ಕರ್ನಾಟಕದ ಇಬ್ಬರು ವೇಗಿಗಳ ಅಮೋಘ ಪ್ರದರ್ಶನ ನೀಡಿದರು. ಪಂಜಾಬ್‌ ಪರ ವೈಶಾಕ್‌ ಮಿಂಚಿನ ದಾಳಿ ನಡೆಸಿ 4 ಓವರ್‌ಗಳಲ್ಲಿ 34 ರನ್‌ಗೆ 3 ವಿಕೆಟ್‌ ಪಡೆದರು. ಬಳಿಕ ಗುಜರಾತ್‌ ಪರ ಪ್ರಸಿದ್ಧ್‌ ಕೃಷ್ಣ ಆಪತ್ಬಾಂಧವರಾಗಿ ಮೂಡಿಬಂದರು. ತಮ್ಮ ಮೊದಲ 3 ಓವರ್‌ನಲ್ಲಿ 15 ರನ್‌ಗೆ 3 ವಿಕೆಟ್‌ ಕಿತ್ತಿದ್ದ ಅವರು, ಕೊನೆ ಓವರ್‌ನಲ್ಲಿ ಎಡವಿದರು.