ರಣಜಿ ಟ್ರೋಫಿ ನಿರ್ಲಕ್ಷ್ಯ ಮಾಡಿದ ಕ್ರಿಕೆಟಿಗರಿಗೆ ಬಿಸಿಸಿಐ ಖಡಕ್ ಸಂದೇಶ, ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಶ್ರೇಯಸ್, ಇಶಾನ್
central contracts Of Team India Players ರಣಜಿ ಟ್ರೋಫಿ ಬದಲು ಐಪಿಎಲ್ ಅನ್ನೇ ಪ್ರಮುಖ ಎಂದು ಆಯ್ಕೆ ಮಾಡಿದ್ದ ಟೀಮ್ ಇಂಡಿಯಾ ಕ್ರಿಕೆಟಿಗರಾದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್‌ಗೆ ಬಿಸಿಸಿಐ ಖಡಕ್ ಸಂದೇಶ ನೀಡಿದ್ದು, ಇಬ್ಬರನ್ನೂ ಕೇಂದ್ರ ಗುತ್ತಿಗೆಯಿಂದ ಕೈಬಿಡುವ ತೀರ್ಮಾನ ಮಾಡಿದೆ.
ಮುಂಬೈ (ಫೆ.28): ಬಿಸಿಸಿಐನ ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರರು ಐಪಿಎಲ್‌ಗಿಂತ ರಣಜಿ ಟ್ರೋಫಿಯೇ ಮುಖ್ಯವಾಗಿ ಆಡಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಎಚ್ಚರಿಕೆಯನ್ನೂ ನಿರ್ಲಕ್ಷ್ಯ ಮಾಡಿದ್ದ ಕ್ರಿಕೆಟಿಗರಾದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅದಕ್ಕೆ ದೊಡ್ಡ ದಂಡ ತೆತ್ತಿದ್ದಾರೆ. ಬುಧವಾರ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಪ್ರಕಟ ಮಾಡಿದ್ದು, ಮುಂಬೈನ ಶ್ರೇಯಸ್ ಅಯ್ಯರ್ ಹಾಗೂ ಜಾರ್ಖಂಡ್‌ನ ಇಶಾನ್ ಕಿಶನ್ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಅವರೊಂದಿಗೆ ವೇಗಿ ದೀಪಕ್ ಚಹರ್ ಹೆಸರೂ ಕೂಡ ಕೇಂದ್ರ ಪಟ್ಟಿಯಲ್ಲಿಲ್ಲ. ಈ ಮೂವರೂ ಕೂಡ ರಣಜಿ ಟ್ರೋಫಿಗಿಂತ ಐಪಿಎಲ್ ಆಡುವುದೇ ಮುಖ್ಯ ಎನ್ನುವಂತೆ ವರ್ತನೆ ತೋರಿದ್ದರು. ಈ ವೇಳೆ ಟೀಮ್ ಇಂಡಿಯಾದ ಎಲ್ಲಾ ಗುತ್ತಿಗೆ ಕ್ರಿಕೆಟಿಗರಿಗೆ ಎಚ್ಚರಿಕೆ ನೀಡಿದ್ದ ಕಾರ್ಯದರ್ಶಿ ಜಯ್ ಷಾ, ಯಾವೆಲ್ಲಾ ಆಟಗಾರರು ದೇಶೀಯ ಕ್ರಿಕೆಟ್ ಆಡುವುದನ್ನು ನಿರ್ಲಕ್ಷ್ಯ ಮಾಡುತ್ತಾರೋ ಅವರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದರು. ಆದರೆ, ಜಯ್ ಶಾ ಎಚ್ಚರಿಕೆಗೂ ಬಗ್ಗದೇ ಇದ್ದ ಆಟಗಾರರು ರಣಜಿ ಟ್ರೋಫಿಯಲ್ಲಿ ಆಡಲು ನಿರಾಕರಿಸಿದ್ದರು.
ಕರ್ನಾಟಕದ ಕೆಎಲ್ ರಾಹುಲ್, ಶುಭ್‌ಮನ್ ಗಿಲ್ ಹಾಗೂ ಮೊಹಮದ್ ಸಿರಾಜ್ ಅವರನ್ನು ಗ್ರೇಡ್-ಎ ವಿಭಾಗಕ್ಕೆ ಸೇರಿಸಲಾಗಿದೆ. ಇನ್ನು ರಸ್ತೆ ಅಪಘಾತದ ಕಾರಣದಿಂದಾಗಿ ಇಡೀ ಕ್ರಿಕೆಟ್ ಋತುವನ್ನು ಕಳೆದುಕೊಂಡಿರುವ ಅನುಭವಿ ವಿಕೆಟ್ ಕೀಪರ್ ರಿಷಭ್ ಪಂತ್ ಬಿ ದರ್ಜೆಗೆ ಹಿನ್ನಡೆ ಕಂಡಿದ್ದಾರೆ. ಕಳೆದ ವರ್ಷ ಎ ದರ್ಜೆಯಲ್ಲಿದ್ದ ಆಲ್ರೌಂಡರ್ ಅಕ್ಸರ್ ಪಟೇಲ್ ಗೂ ಬಿ ದರ್ಜೆಗೆ ಹಿನ್ನಡೆ ಕಂಡಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್ ಹಾಗೂ ಮೊಹಮದ್ ಸಿರಾಜ್ ಎ ದರ್ಜೆಯಲ್ಲಿ ಉಳಿದುಕೊಳ್ಳಲು ಯಶಸ್ವಿಯಾಗಿದ್ದಾರೆ. ಇನ್ನು ಟೀಮ್ ಇಂಡಿಯಾದ ಅಗ್ರ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಅವರಿಗೆ ಕೇಂದ್ರ ಗುತ್ತಿಗೆ ಅಗ್ರ ದರ್ಜೆಯಾದ ಎ ಪ್ಲಸ್ ವಿಭಾಗ ಪಡೆದುಕೊಂಡಿದ್ದಾರೆ.
"ಈ ಹಂತದ ಶಿಫಾರಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ ಎನ್ನುವುದನ್ನು ಗಮನಿಸಬೇಕು" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಹಿ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಎಲ್ಲಾ ಅಥ್ಲೀಟ್‌ಗಳು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಅವಧಿಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಆದ್ಯತೆ ನೀಡಬೇಕು ಎಂದು ಬಿಸಿಸಿಐ ಸ್ಪಷ್ಟವಾಗಿ ಸೂಚನೆ ನೀಡಿತ್ತು ಎಂದೂ ತಿಳಿಸಲಾಗಿದೆ.
IPL ಆರಂಭಕ್ಕೂ ಮುನ್ನ ಧೋನಿ ಮನೆ ಮುಂದೆ ಜಡೇಜಾ ಹಾಜರ್..! ಲೆಜೆಂಡ್ ಮನೆ ಮುಂದೆ ಫ್ಯಾನ್ ಫೋಸ್ ಎಂದ ಜಡ್ಡು
ಇನ್ನು ಕರ್ನಾಟಕದ ಆಟಗಾರರ ಪೈಕಿ ಕೆಎಲ್ ರಾಹುಲ್ ಎ ದರ್ಜೆ ಒಪ್ಪಂದ ಪಡೆದುಕೊಂಡಿದ್ದರೆ, ಪ್ರಸಿದ್ಧಕೃಷ್ಣ ಸಿ ದರ್ಜೆ ಒಪ್ಪಂದ ಪಡೆದಿದ್ದಾರೆ. ಇನ್ನು ವಿಜಯ್ ಕುಮಾರ್ ವೈಶಾಕ್ ಹಾಗೂ ವಿದ್ವತ್ ಕಾವೇರಪ್ಪ ವೇಗದ ಬೌಲಿಂಗ್ ಗುತ್ತಿಗೆಯ ಶಿಫಾರಸು ಪಡೆದಿದ್ದಾರೆ.
ಇಂಗ್ಲೆಂಡ್ ಎದುರಿನ ಧರ್ಮಶಾಲಾ ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಎರಡು ಮೇಜರ್ ಚೇಂಜ್..?
2023-24ಕ್ಕೆ ಬಿಸಿಸಿಐನ ಕೇಂದ್ರ ಗುತ್ತಿಗೆ ವಿವರ
ಗ್ರೇಡ್ A+ (ವಾರ್ಷಿಕ 7 ಕೋಟಿ ರೂಪಾಯಿ): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
ಗ್ರೇಡ್ ಎ (ವಾರ್ಷಿಕ 5 ಕೋಟಿ ರೂಪಾಯಿ): ಆರ್ ಅಶ್ವಿನ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ ಬಿ (ವಾರ್ಷಿಕ 3 ಕೋಟಿ ರೂಪಾಯಿ): ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ (ವಾರ್ಷಿಕ 1 ಕೋಟಿ ರೂಪಾಯಿ): ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.
ವೇಗದ ಬೌಲಿಂಗ್ ಗುತ್ತಿಗೆಯ ಶಿಫಾರಸು: ಆಕಾಶ್ ದೀಪ್, ವಿಜಯ್ ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ.