"ಫೈನಲ್‌ಗೆ ಬನ್ನಿ ನಾವು ಕಾಯ್ತಿದ್ದೇವೆ, ಇನ್ನೊಂದು ಮ್ಯಾಚ್ ಆಗಿಬಿಡಲಿ": ಶೋಯೆಬ್ ಅಖ್ತರ್
India vs Pakistan T 20 World Cup: ವಿಶ್ವಕಪ್ ಫೈನಲ್‌ಗೆ ಬನ್ನಿ, ನಾವು ನಿಮಗಾಗಿ ಕಾಯುತ್ತಿದ್ದೇವೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಟ್ವೀಟ್ ಮಾಡಿದ್ದಾರೆ. ಭಾರತದ ವಿರುದ್ಧ ಪಾಕಿಸ್ತಾನ ಇನ್ನೊಂದ ಪಂದ್ಯ ಆಡಲೇಬೇಕು, ಅದಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದೇವೆ ಎಂದು ಅಖ್ತರ್ ಹೇಳಿದ್ದಾರೆ.
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಫೈನಲ್ ಪಂದ್ಯದಲ್ಲಿ ಎದುರಾಗುವುದನ್ನು ಕಾಯುತ್ತಿದ್ದೇವೆ ಎಂದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಬದ್ಧ ವೈರಿ ತಂಡಗಳಾಗಿದ್ದು, ಆಡುವ ಪ್ರತಿಯೊಂದು ಪಂದ್ಯಗಳೂ ರೋಮಾಂಚನಕಾರಿಯಾಗಿರುತ್ತದೆ. ಪಾಕಿಸ್ತಾನ ಮತ್ತು ಭಾರತ ಎರಡೂ ತಂಡದ ಆಟಗಾರರಿಗಷ್ಟೇ ಅಲ್ಲ ಮಾಜಿ ಆಟಗಾರರನ್ನೂ ಇದು ಕಾಡುತ್ತದೆ. ಫೈನಲ್ ಪಂದ್ಯವಿರಲಿ ಅಥವಾ ಲೀಗ್ ಹಂತದ ಪಂದ್ಯವಿರಲಿ ಜಗತ್ತಿನಾದ್ಯಂತ ಅತಿ ಹೆಚ್ಚು ವೀಕ್ಷಣೆ ಪಡೆಯುವ ಪಂದ್ಯ ಎಂದರೆ ಅದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ. ಈ ಬಗ್ಗೆ ಶೋಯೆಬ್ ಅಖ್ತರ್ ಮಾತನಾಡಿದ್ದಾರೆ.
ಹರಸಾಹಸ ಪಟ್ಟು ಲಕ್‌ನಿಂದ ಸೆಮಿಫೈನಲ್‌ಗೆ ಬಂದ ಪಾಕಿಸ್ತಾನ ತಂಡ ಇದ್ದಕ್ಕಿದ್ದಂತೆ ಲಯಕ್ಕೆ ಬಂದಿದೆ. ಜಿಂಬಾಬ್ವೆ ಅಂತ ತಂಡದ ವಿರುದ್ಧ ಸೋಲು ಕಂಡ ಪಾಕಿಸ್ತಾನ ಬಲಿಷ್ಟ ನ್ಯೂಜಿಲೆಂಡ್ ತಂಡದ ವಿರುದ್ಧ ಸುಲಭ ಜಯಗಳಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿ ಬಾಬರ್ ಆಜಮ್ ಪಡೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರ ಜೊತೆಗೆ ಬಾಬರ್ ಆಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಲಯ ಕಂಡುಕೊಂಡಿದ್ಧಾರೆ. ಇದೇ ಈಗ ಪ್ರತಿಸ್ಪರ್ಧಿಗಳಿಗೆ ಭಯ ಹುಟ್ಟಿಸಿರುವುದು. ಈ ಹಿಂದಿನ ವಿಶ್ವಕಪ್‌ನಲ್ಲಿ ಒಂದೂ ವಿಕೆಟ್ ನೀಡದೇ ಪಾಕಿಸ್ತಾನ ಭಾರತವನ್ನು ಸೋಲಿಸಿತ್ತು. ಇದರ ಕಹಿನೆನಪು ಇನ್ನೂ ಹಾಗೇ ಇದೆ. ಬಾಬರ್ ಫಾರ್ಮ್‌ಗೆ ಮರಳಿರುವುದು ಈಗ ಮತ್ತೆ ಭಯ ಹುಟ್ಟಿಸಿದೆ. ಇಂಗ್ಲೆಂಡ್ ವಿರುದ್ಧ ಇಂದು ಅಡಿಲೇಡ್‌ನಲ್ಲಿ ಭಾತ ತಂಡ ಆಡಲಿದೆ. ಇದರಲ್ಲಿ ಗೆದ್ದರೆ ಪಾಕಿಸ್ತಾನದ ವಿರುದ್ಧ ಮೆಲ್‌ಬೋರ್ನ್‌ನಲ್ಲಿ ಭಾರತ ಫೈನಲ್ ಆಡಲಿದೆ.
13 ವರ್ಷಗಳ ನಂತರ ವಿಶ್ವಕಪ್ ಫೈನಲ್‌ಗೆ ಪಾಕಿಸ್ತಾನ ತಲುಪಿದೆ. ಮೆಲ್‌ಬೋರ್ನ್‌ನಲ್ಲಿ ಇದೇ ಭಾನುವಾರ ಪಾಕಿಸ್ತಾನ ಭಾರತ ಅಥವಾ ಇಂಗ್ಲೆಂಡ್ ವಿರುದ್ಧ ಫೈನಲ್ ಆಡಲಿದೆ. ಈ ಕುರಿತಾಗಿ ಭಾರತಕ್ಕೆ ಶೋಯೆಬ್ ಅಖ್ತರ್ ಸಂದೇಶ ನೀಡಿದ್ದಾರೆ. "ಹಿಂದೂಸ್ತಾನ ನಾವು ಮೆಲ್‌ಬೋರ್ನ್ ತಲುಪಿದ್ದೇವೆ. ನಾವು ನಿಮಗಾಗಿ ಕಾಯುತ್ತಿದ್ದೇವೆ. ನೀವು ಇಂಗ್ಲೆಂಡ್ ತಂಡವನ್ನು ಸೋಲಿಸಲಿ ಎಂದು ಮನಸ್ಪೂರ್ತಿಯಾಗಿ ಹಾರೈಸುತ್ತಿದ್ದೇವೆ. 1992ರ ಫೈನಲ್‌ನಲ್ಲಿ ಇಂಗ್ಲೆಂಡ್ ಮೆಲ್‌ಬೋರ್ನ್‌ನಲ್ಲಿಯೇ ಸೋಲು ಕಂಡಿತ್ತು. ಈ 2022ನೇ ವರ್ಷ. ವರ್ಷಗಳು ಬೇರೆ ಆದರೆ ನಂಬರ್ ಒಂದೇ. ನನಗೆ ಭಾರತ - ಪಾಕಿಸ್ತಾನ ಫೈನಲ್ ನೋಡಬೇಕು. ಇನ್ನೊಂದು ಬಾರಿ ಆಡೋಣ. ನಮಗೆ ಇನ್ನೊಂದು ಪಂದ್ಯ ಬೇಕು. ಇಡೀ ಜಗತ್ತು ಈ ಐತಿಹಾಸಿಕ ಪಂದ್ಯಕ್ಕಾಗಿ ಕಾಯುತ್ತಿದೆ," ಎಂದು ಶೋಯೆಬ್ ಅಖ್ತರ್ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಫೈನಲ್‌ಗೆ ಬಂದ್ರೆ ಏನ್ಮಾಡ್ತೀರ ಎಂಬ ಪ್ರಶ್ನೆಗೆ ಪಾಕಿಸ್ತಾನ ನಾಯಕ ಬಾಬರ್ ಬರೋಬ್ಬರಿ ಉತ್ತರ
2009ರಲ್ಲಿ ಪಾಕಿಸ್ತಾನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆಲುವು ಕಂಡಿತ್ತು. ಫೈನಲ್ ಪಂದ್ಯ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆದಿತ್ತು. ಈ ಬಾರಿಯಂತೆ 2009ರಲ್ಲೂ ಜಿಂಬಾಬ್ವೆ ಮತ್ತು ಭಾರತದ ವಿರುದ್ಧ ಲೀಗ್ ಹಂತದಲ್ಲಿ ಸೋತಿದ್ದ ಪಾಕಿಸ್ತಾನ ಫೀನಿಕ್ಸ್‌ನಂತೆ ಎದ್ದು ಬಂದಿತ್ತು. 2009ರ ಫಲಿತಾಂಶ ಮತ್ತು ಈ ಬಾರಿಯ ಫಲಿತಾಂಶ ಒಂದೇ ರೀತಿಯಿದೆ. ಆಗ ಪಾಕಿಸ್ತಾನ ತಂಡವನ್ನು ಯೂನಿಸ್ ಖಾನ್ ಮುನ್ನಡೆಸಿದ್ದರು. ಈ ಬಾರಿ ಬಾಬರ್ ಆಜಮ್ ನೇತೃತ್ವ ವಹಿಸಿದ್ದಾರೆ. 2009ರಲ್ಲೂ ನೆದರ್‌ಲ್ಯಾಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ತಂಡವನ್ನು ಪಾಕಿಸ್ತಾನ ಸೋಲಿಸಿ ಲೀಗ್ ಹಂತದಲ್ಲೇ ಆಚೆ ಹೋಗುವಂತೆ ಮಾಡಿತ್ತು. ಒಟ್ಟಿನಲ್ಲಿ 2009 ಮತ್ತು 2022ರ ವಿಶ್ವಕಪ್ ನಡುವೆ ಸಾಕಷ್ಟು ಸಾಮ್ಯತೆಯಿದೆ.
ಇದನ್ನೂ ಓದಿ: T20 World Cup ಅಡಿಲೇಡ್‌ನಲ್ಲಿಂದು ಭಾರತ-ಇಂಗ್ಲೆಂಡ್ ಸೆಮೀಸ್ ಕದನ
ನ್ಯೂಜಿಲೆಂಡ್ ಕೂಡ ಲೀಗ್ ಹಂತದಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೂ ಸೆಮಿಫೈನಲ್‌ನಲ್ಲಿ ಮುಗ್ಗರಿಸಿ ಪಂದ್ಯಾವಳಿಯಿಂದ ಆಚೆ ಹೋಗಿತ್ತು. ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಎಷ್ಟೇ ಉತ್ತಮವಾಗಿ ಕಂಡರೂ ಕಡೆಗೆ ಮುಗ್ಗರಿಸುತ್ತಾರೆ. ಅದ್ಯಾವ ಶಾಪವೋ ಗೊತ್ತಿಲ್ಲ. ದಕ್ಷಿಣ ಆಫ್ರಿಕಾವಂತೂ ಚೋಕರ್ಸ್ ಎಂದೇ ಹೆಸರುವಾಸಿ.