* ಸೀಮಿತ ಓವರ್‌ಗಳ ಸರಣಿಯನ್ನಾಡಲು ಲಂಕಾಗೆ ಬಂದಿಳಿದ ಟೀಂ ಇಂಡಿಯಾ* ಲಂಕಾ ಎದುರಿನ ಸೀಮಿತ ಓವರ್‌ಗಳ ಸರಣಿ ಜುಲೈ 13ರಿಂದ ಆರಂಭ* ಟೀಂ ಇಂಡಿಯಾ ಕ್ರಿಕೆಟಿಗರು ಜೂನ್‌ 29ರಿಂದ ಜುಲೈ 01ರವರೆಗೆ ಹೋಟೆಲ್‌ ರೂಂ ಕ್ವಾರಂಟೈನ್‌ನಲ್ಲಿರಲಿದ್ದಾರೆ. 

ಕೊಲಂಬೊ(ಜೂ.29): ಶ್ರೀಲಂಕಾ ವಿರುದ್ದ ಸೀಮಿತ ಓವರ್‌ಗಳ ಸರಣಿಯನ್ನಾಡಲು ಕೊಲಂಬೊಗೆ ಬಂದಿಳಿದ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಕಠಿಣ ಕ್ವಾರಂಟೈನ್‌ಗೆ ಒಳಗಾಗಿದೆ. ಲಂಕಾ ಎದುರಿನ ಸೀಮಿತ ಓವರ್‌ಗಳ ಸರಣಿ ಜುಲೈ 13ರಿಂದ ಆರಂಭವಾಗಲಿದೆ.

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಶ್ರೀಲಂಕಾದ ಕೊಲೊಂಬೊಗೆ ಬಂದಿಳಿದಿದ್ದೇವೆ ಎಂದು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

Scroll to load tweet…

ಭಾರತದ ಮೊದಲ ಆಯ್ಕೆಯ ಆಟಗಾರರೆಲ್ಲರೂ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಆರಂಭವಾಗಲಿರು ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಸರಣಿಯನ್ನಾಡಲಿದ್ದಾರೆ. ಹೀಗಾಗಿ ಶಿಖರ್ ಧವನ್ ನೇತೃತ್ವದಲ್ಲಿ ಹಿರಿ-ಕಿರಿಯ ಆಟಗಾರರನ್ನೊಳಗೊಂಡ ಭಾರತ ತಂಡ ಲಂಕಾ ಎದುರು ಸೀಮಿತ ಓವರ್‌ಗಳ ಸರಣಿಯನ್ನಾಡಲು ಲಂಕಾಗೆ ಬಂದಿಳಿದಿದೆ.

ಶ್ರೀಲಂಕಾಗಿಂದು ಧವನ್ ನೇತೃತ್ವದ ಟೀಂ ಇಂಡಿಯಾ ಪ್ರಯಾಣ

ಲಂಕಾ ಸರಣಿಗೆ ಬಿಸಿಸಿಐ ಯುವ ಕ್ರಿಕೆಟಿಗರಾದ ದೇವದತ್ ಪಡಿಕ್ಕಲ್‌, ಋತುರಾಜ್‌ ಗಾಯಕ್ವಾಡ್‌, ನಿತೀಶ್ ರಾಣಾ, ಕೆ. ಗೌತಮ್ ಹಾಗೂ ಚೇತನ್‌ ಸಕಾರಿಯಾಗೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇದೇ ವೇಳೆ ಇಬ್ಬರು ವಿಕೆಟ್‌ ಕೀಪರ್‌ಗಳಾದ ಸಂಜು ಸ್ಯಾಮ್ಸನ್ ಹಾಗೂ ಇಶನ್ ಕಿಶನ್‌ಗೂ ತಂಡದಲ್ಲಿ ಮಣೆ ಹಾಕಲಾಗಿದೆ.

Scroll to load tweet…

ಶ್ರೀಲಂಕಾ ಕ್ರಿಕೆಟ್ ವೆಬ್‌ಸೈಟ್‌ ಮಾಹಿತಿಯ ಪ್ರಕಾರ ಟೀಂ ಇಂಡಿಯಾ ಕ್ರಿಕೆಟಿಗರು ಜೂನ್‌ 29ರಿಂದ ಜುಲೈ 01ರವರೆಗೆ ಹೋಟೆಲ್‌ ರೂಂ ಕ್ವಾರಂಟೈನ್‌ನಲ್ಲಿರಲಿದ್ದಾರೆ. ಆ ಬಳಿಕ ಜುಲೈ 02ರಿಂದ 04ರವರೆಗೆ ಹಂತ ಹಂತವಾಗಿ ಅಭ್ಯಾಸ ನಡೆಸಲು ಅವಕಾಶ ನೀಡಲಾಗುವುದು. ಇದಾದ ಬಳಿಕ ಜುಲೈ 05ರಿಂದ ಟೀಂ ಇಂಡಿಯಾ ಆಟಗಾರರು ದ್ವೀಪರಾಷ್ಟ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಅಭ್ಯಾಸ ನಡೆಸಬಹುದಾಗಿದೆ. ಸೀಮಿತ ಓವರ್‌ಗಳ ಸರಣಿಗೂ ಮುನ್ನ ಭಾರತ ಆಟಗಾರರು ತಮ್ಮಲ್ಲೇ 2 ತಂಡಗಳನ್ನಾಗಿ ವಿಭಾಗಿಸಿಕೊಂಡು ಅಭ್ಯಾಸ ಪಂದ್ಯಗಳನ್ನಾಡಲಿದ್ದಾರೆ.

ಶಿಖರ್ ಧವನ್ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಧವನ್‌ಗೆ ಉಪನಾಯಕನಾಗಿ ವೇಗಿ ಭುವನೇಶ್ವರ್ ಕುಮಾರ್ ಸಾಥ್ ನೀಡಲಿದ್ದಾರೆ. ಇನ್ನು ರವಿಶಾಸ್ತ್ರಿ ಅನುಪಸ್ಥಿತಿಯಲ್ಲಿ ರಾಹುಲ್ ದ್ರಾವಿಡ್‌ ಟೀಂ ಇಂಡಿಯಾ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.