ಶ್ರೀಲಂಕಾಗಿಂದು ಧವನ್ ನೇತೃತ್ವದ ಟೀಂ ಇಂಡಿಯಾ ಪ್ರಯಾಣ
* ಲಂಕಾ ಸರಣಿಗೆ ವಿಮಾನವೇರಲು ಸಜ್ಜಾದ ಧವನ್ ನೇತೃತ್ವದ ಟೀಂ ಇಂಡಿಯಾ
* ಲಂಕಾ ಸರಣಿಯಲ್ಲಿ ಸೀಮಿತ ಓವರ್‌ಗಳ ಸರಣಿ ಆಡಲಿರುವ ಭಾರತ
* ಲಂಕಾ ವಿರುದ್ದದ ಸೀಮಿತ ಓವರ್‌ಗಳ ಸರಣಿ ಜುಲೈ 13ರಿಂದ ಆರಂಭ
ಮುಂಬೈ(ಜೂ.28): ಏಕದಿನ ಹಾಗೂ ಟಿ20 ಸರಣಿಗಳನ್ನು ಆಡಲು ಭಾರತ ತಂಡ ಸೋಮವಾರ ಶ್ರೀಲಂಕಾಕ್ಕೆ ಪ್ರಯಾಣಿಸಲಿದೆ. ಬೆಳಗ್ಗೆ 11.30ಕ್ಕೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ತಂಡ ಕೊಲಂಬೋಗೆ ತೆರಳಲಿದೆ ಎಂದು ತಂಡದ ಮೂಲಗಳು ತಿಳಿಸಿವೆ.
ಭಾನುವಾರ ಭಾರತ ತಂಡದ ನಾಯಕ ಶಿಖರ್ ಧವನ್ ಹಾಗೂ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭಾರತ ಕ್ರಿಕೆಟ್ ತಂಡದ ನಾಯಕನಾಗಿರುವುದು ತುಂಬಾ ಗೌರವದ ವಿಚಾರ. ಒಂದು ತಂಡವಾಗಿ ಲಂಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿರುವುದಾಗಿ ಧವನ್ ಹೇಳಿದ್ದಾರೆ. ‘ಈ ಸರಣಿ ನಮ್ಮ ಆಟಗಾರರಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ. ತಂಡ ಅತ್ಯುತ್ತಮವಾಗಿದೆ. ಬಹಳ ಆತ್ಮವಿಶ್ವಾಸದೊಂದಿಗೆ ನಾವು ಆಡಲಿದ್ದೇವೆ’ ಎಂದು ಧವನ್ ಹೇಳಿದರು.
ಶ್ರೀಲಂಕಾ ವಿರುದ್ದದ ಸರಣಿಯಿಂದ ಹೊರಬಿದ್ದ ಜೋಸ್ ಬಟ್ಲರ್
ಇದೇ ವೇಳೆ ರಾಹುಲ್ ದ್ರಾವಿಡ್ ಮಾತನಾಡಿ, ‘ತಂಡದಲ್ಲಿರುವ ಎಲ್ಲರಿಗೂ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಬೇಕು ಎನ್ನುವ ಆಸೆಯಿದೆ. ಆದರೆ 3 ಏಕದಿನ, 3 ಟಿ20 ಪಂದ್ಯಗಳ ಸರಣಿಗಳಲ್ಲಿ ಎಲ್ಲಾ ಆಟಗಾರರಿಗೆ ಅವಕಾಶ ಸಿಗುವುದು ಕಷ್ಟ’ ಎಂದರು.
ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಮೊದಲಿಗೆ 3 ಪಂದ್ಯಗಳ ಸರಣಿ ಆಡಲಿದೆ. ಇದಾದ ಬಳಿಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಲಂಕಾ ಎದುರು ಯಂಗಿಸ್ತಾನ್ ಕಾದಾಟ ನಡೆಸಲಿದೆ. ಏಕದಿನ ಪಂದ್ಯಗಳ ಸರಣಿ ಕ್ರಮವಾಗಿ ಜುಲೈ 13, 16 ಹಾಗೂ 18ರಂದು ನಡೆಯಲಿದೆ. ಇನ್ನು ಟಿ20 ಸರಣಿ ಕ್ರಮವಾಗಿ ಜುಲೈ 21, 23 ಹಾಗೂ 25ರಂದು ನಡೆಯಲಿದ್ದು, ಈ ಎಲ್ಲಾ ಪಂದ್ಯಗಳಿಗೆ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ.