ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ವಿದೇಶಿ ಗೆಳತಿ ಸೋಫಿ ಶೈನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದು, ಈ ಮೂಲಕ ತಮ್ಮ ಸಂಬಂಧದ ಕುರಿತ ಎಲ್ಲಾ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಬಹುಕಾಲದ ವಿದೇಶಿ ಗೆಳತಿ ಸೋಫಿ ಶೈನ್ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಎಂಗೇಜ್‌ಮೆಂಟ್ ಪೋಟೋವನ್ನು ಹಂಚಿಕೊಳ್ಳುವ ಮೂಲಕ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
2025ರ ಆರಂಭದಲ್ಲಿ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶಿಖರ್ ಧವನ್ ಹಾಗೂ ಸೋಫಿ ಶೈನ್ ಒಟ್ಟಾಗಿ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ತಾವು ಸೋಫಿ ಜತೆ ರಿಲೇಷನ್‌ಶಿಪ್‌ನಲ್ಲಿರುವುದನ್ನು ಬಹಿರಂಗ ಪಡಿಸಿದ್ದರು.
ಇದೀಗ ಶಿಖರ್ ಧವನ್ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್:
ಹೌದು, ಶಿಖರ್ ಧವನ್ ಇದೀಗ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಸೋಫಿ ಶೈನ್ ಹಾಗೂ ತಮ್ಮ ಕೈ ಫೋಟೋವನ್ನು ಹಂಚಿಕೊಂಡಿದ್ದು, ಇಬ್ಬರ ಕೈಬೆರಳಿನಲ್ಲೂ ಎಂಗೇಜ್‌ಮೆಂಟ್ ರಿಂಗ್ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. 'ಒಟ್ಟಿಗೆ ನಸುನಗುವುದರಿಂದ ಶುರುವಾಗಿ ಒಟ್ಟಿಗೆ ಕನಸು ಕಾಣುವ ಹಂತದವರೆಗೆ. ನಮ್ಮ ಪ್ರೀತಿಗೆ ಆಶೀರ್ವದಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ದುಬೈನಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ:
ಸೋಫಿ ಶೈನ್ ಐರ್ಲೆಂಡ್ ಪ್ರಜೆಯಾಗಿದ್ದರೂ, ದುಬೈನಲ್ಲಿ ವಾಸವಾಗಿದ್ದರು. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಶಿಖರ್ ಧವನ್ ಕೆಲ ವರ್ಷಗಳ ಹಿಂದೆ ಸೋಫಿ ಶೈನ್ ಅವರನ್ನು ದುಬೈನಲ್ಲಿ ಭೇಟಿಯಾಗಿದ್ದರು. ಮೊದಲಿಗೆ ಸಾಮಾನ್ಯ ಪರಿಚಯದಿಂದ ಅವರ ನಡುವೆ ಸ್ನೇಹ ಪ್ರೇಮವಾಗಿ ಬದಲಾಯಿತು. ಇನ್ನು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಪಂದ್ಯಗಳನ್ನು ವೀಕ್ಷಿಸಲು ಹಾಗೂ ಬ್ರ್ಯಾಂಡ್ ಅಂಬಾಸಿಡರ್ ಆಗಿ ಶಿಖರ್ ಧವನ್, ದುಬೈಗೆ ತೆರಳಿದ್ದರು. ಅಲ್ಲಿ ಮೊದಲ ಬಾರಿಗೆ ಬಹಿರಂಗವಾಗಿ ಶಿಖರ್ ಧವನ್ ಹಾಗೂ ಸೋಫಿ ಶೈನ್ ಒಟ್ಟಿಗೆ ಕಾಣಿಸಿಕೊಂಡಿದ್ದರು. 2025ರಲ್ಲೇ ಶಿಖರ್ ಧವನ್, ಸೋಫಿ ಶೈನ್ ಜತೆಗಿನ ಒಡನಾಟವನ್ನು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದರು.
ಯಾರು ಈ ಸೋಫಿ ಶೈನ್?
ಐರ್ಲೆಂಡ್ ಪ್ರಜೆಯಾಗಿರುವ ಸೋಫಿ ಶೈನ್‌ಗೆ ಈಗ 35 ವರ್ಷ. ಸೋಫಿ ಸದ್ಯ ಯುಎಇನ ಅಬುಧಾಬಿಯಲ್ಲಿ ವಾಸವಾಗಿದ್ದಾರೆ.ಸೋಫಿ ಶೈನ್ ನಾರ್ಥನ್ ಟ್ರಸ್ಟ್ ಕಾರ್ಪೊರೇಷನ್ ಎನ್ನುವ ಪ್ರತಿಷ್ಠಿತ ಫೈನಾನ್‌ಶಿಯಲ್ ಸರ್ವೀಸ್ ಕಂಪನಿಯಲ್ಲಿ ಪ್ರಾಡಕ್ಟ್ ಕನ್ಸಲ್ಟೇಷನ್‌ನ ವೈಸ್ ಪ್ರಸಿಡೆಂಡ್ ಅಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿಖರ್ ಧವನ್ ಅಷ್ಟಕ್ಕೂ ಏನು ಹೇಳಿದ್ದರು?
ಶಿಖರ್ ಧವನ್ 2012ರಲ್ಲಿ ಆಯೆಷಾ ಮುಖರ್ಜಿಯವರನ್ನು ಮದುವೆಯಾಗಿದ್ದರು. ಇವರಿಗೆ ಝೋರಾವರ್ ಎನ್ನುವ ಒಬ್ಬ ಮಗ ಕೂಡಾ ಇದ್ದಾನೆ. ಇನ್ನು ಇವರ ದಾಂಪತ್ಯ ಜೀವನದಲ್ಲಿ ಬಿರುಕು ಏರ್ಪಟ್ಟ ಹಿನ್ನೆಲೆಯಲ್ಲಿ ಶಿಖರ್ ಧವನ್ ಹಾಗೂ ಆಯೆಷಾ ಮುಖರ್ಜಿ ಪರಸ್ಪರ ಸಮ್ಮತಿ ಮೇರೆಗೆ 2023ರಲ್ಲಿ ಡಿವೋರ್ಸ್ ಪಡೆದುಕೊಂಡಿದ್ದರು.
ತಮ್ಮ ಭವಿಷ್ಯದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಿಖರ್ ಧವನ್, 'ನಾನು ಈ ವಿಚಾರವನ್ನು ದಾಟಿ ಮುಂದೆ ಬಂದಿದ್ದೇನೆ. ನಾನು ಮೊದಲು ತೆಗೆದುಕೊಂಡ ತೀರ್ಮಾನದಿಂದ ಸಾಕಷ್ಟು ಪಾಠ ಕಲಿತಿದ್ದೇನೆ' ಎಂದಿದ್ದರು. ಆಗ ಪತ್ರಕರ್ತರು ಹಾಗಿದ್ರೆ ನೀವು ಮತ್ತೆ ಪ್ರೀತಿ ಮಾಡಲು ರೆಡಿಯಿದ್ದೀರಾ ಎನ್ನುವ ಪ್ರಶ್ನೆಗೆ ಶಿಖರ್ ಧವನ್, 'ನಾನು ಯಾವಾಗಲೂ ಪ್ರೀತಿಯಲ್ಲಿರುತ್ತೇನೆ' ಎಂದು ಹೇಳಿದ್ದರು.


