ಶೇನ್ ವಾರ್ನ್ ಗೂಗ್ಲಿ, ರಾಜಸ್ಥಾನ ರಾಯಲ್ಸ್ ಮಾರಾಟದಿಂದ ಕುಟುಂಬಕ್ಕೆ 450 ಕೋಟಿ ರೂ ಜಾಕ್‌ಪಾಟ್ ಸಿಕ್ಕಿದೆ.ಆರ್‌ಆರ್ ಹರಾಜಿನಲ್ಲಿ ವಾರ್ನ್ ಖರೀದಿಸಿದಾಗ ಮಾಡಿದ ಒಪ್ಪಂದದಿಂದ ಇದೀಗ ಕುಟುಂಬಕ್ಕೆ 450 ಕೋಟಿ ರೂಪಾಯಿ ಸಿಗುವಂತಾಗಿದೆ.

ಜೈಪುರ (ಮಾ.25) : ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರ ಮಾಸ್ಟರ್‌ಸ್ಟ್ರೋಕ್, ಈಗ ಅವರ ಕುಟುಂಬಕ್ಕೆ ಕೋಟಿ ಕೋಟಿ ಹಣ ತಂದುಕೊಡುತ್ತಿದೆ. ಅಮೆರಿಕದ ಕಲ್ ಸೋಮಾನಿ ನೇತೃತ್ವದ ಜಂಟಿ ಉದ್ಯಮವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಬರೋಬ್ಬರಿ ₹15,290 ಕೋಟಿಗೆ ಖರೀದಿಸಿದೆ. 2026ರ ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲೇ ರಾಜಸ್ಥಾನ ರಾಯಲ್ಸ್ ತಂಡ ಮಾರಾಟವಾಗಿದೆ. ಈ ಮಾರಾಟದಿಂದ ವಾರ್ನ್ ಕುಟುಂಬಕ್ಕೆ ಸುಮಾರು ₹450 ಕೋಟಿ ರೂಪಾಯಿ ಸಿಗಲಿದೆ ಎಂದು ವರದಿಯಾಗಿದೆ.

Add Asianetnews Kannada as a Preferred SourcegooglePreferred

ಶೇನ್ ವಾರ್ನ್ ಬ್ಯೂಸಿನೆಸ್ ತಲೆ

2008ರಲ್ಲಿ ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿ ಬಂದಾಗ, ವಾರ್ನ್ ತಮ್ಮ ಒಪ್ಪಂದದಲ್ಲಿ ಒಂದು ವಿಶೇಷ ಷರತ್ತು ಸೇರಿಸಿದ್ದರು. ಅದರ ಪ್ರಕಾರ, ಅವರು ತಂಡಕ್ಕಾಗಿ ಆಡುವ ಪ್ರತಿ ವರ್ಷಕ್ಕೆ ತಂಡದ ಮಾಲೀಕತ್ವದಲ್ಲಿ 0.75% ಪಾಲು ಅವರಿಗೆ ಸಿಗಬೇಕಿತ್ತು. ಮೊದಲ ಸೀಸನ್‌ನಲ್ಲೇ ತಂಡವನ್ನು ಚಾಂಪಿಯನ್ ಮಾಡಿದ ವಾರ್ನ್, ರಾಜಸ್ಥಾನ್ ಪರ ಒಟ್ಟು ನಾಲ್ಕು ಸೀಸನ್‌ಗಳನ್ನು ಆಡಿದರು. ಇದರಿಂದ ತಂಡದಲ್ಲಿ ಅವರ ಒಟ್ಟು ಪಾಲು 3%ಗೆ ಏರಿತು. ಈಗ ರಾಜಸ್ಥಾನ್ ರಾಯಲ್ಸ್ ತಂಡ ₹15,290 ಕೋಟಿಗೆ ಮಾರಾಟವಾಗುತ್ತಿರುವುದರಿಂದ, ವಾರ್ನ್ ಹೊಂದಿದ್ದ ಈ 3% ಶೇರಿನ ಮೌಲ್ಯ ಸುಮಾರು ₹450 ರಿಂದ ₹460 ಕೋಟಿ ಆಗಲಿದೆ.

ಶೇನ್ ವಾರ್ನ್‌ಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದ ತಂಡ

2008ರಲ್ಲಿ ಮನೋಜ್ ಬದಾಲೆ ನೇತೃತ್ವದ ಎಮರ್ಜಿಂಗ್ ಮೀಡಿಯಾ ಸಂಸ್ಥೆ, ರಾಜಸ್ಥಾನ್ ತಂಡವನ್ನು ಕೇವಲ 67 ಮಿಲಿಯನ್ ಡಾಲರ್‌ಗೆ ಖರೀದಿಸಿತ್ತು. ಆಗ ತಂಡದ ಕ್ಯಾಪ್ಟನ್, ಕೋಚ್ ಮತ್ತು ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥ ಎಲ್ಲವೂ ವಾರ್ನ್ ಅವರೇ ಆಗಿದ್ದರು. ತಮ್ಮ ಕಠಿಣ ಪರಿಶ್ರಮಕ್ಕೆ ಸಂಬಳದ ಜೊತೆಗೆ ಶೇರುಗಳನ್ನು ಕೇಳುವ ಮೂಲಕ ವಾರ್ನ್ ತೋರಿದ ಜಾಣ್ಮೆ, ಅವರ ಮರಣದ ನಂತರ ಕುಟುಂಬಕ್ಕೆ ದೊಡ್ಡ ಆಸ್ತಿಯಾಗಿ ಪರಿಣಮಿಸಿದೆ.

ವಾರ್ನ್ ಕುಟುಂಬಕ್ಕೆ ದೊಡ್ಡ ನೆರವು

2022ರಲ್ಲಿ ನಿಧನರಾದ ವಾರ್ನ್ ಅವರ ಕುಟುಂಬಕ್ಕೆ ಈ ಹಣ ಸಿಗಲಿದೆ. ಬಿಸಿಸಿಐ ಅನುಮೋದನೆಗೆ ಒಳಪಟ್ಟು, 2026ರ ಐಪಿಎಲ್ ಸೀಸನ್ ನಂತರ ಈ ಶೇರುಗಳನ್ನು ಮಾರಾಟ ಮಾಡಿ ಹಣ ಪಡೆಯುವ ಹಕ್ಕು ಅವರ ಕುಟುಂಬಕ್ಕೆ ಇರುತ್ತದೆ. ತಾನು ಕಟ್ಟಿಬೆಳೆಸಿದ ತಂಡವು ಜಗತ್ತಿನ ಅತ್ಯಂತ ಮೌಲ್ಯಯುತ ತಂಡಗಳಲ್ಲಿ ಒಂದಾಗುವುದನ್ನು ನೋಡಲು ಇಂದು ವಾರ್ನ್ ನಮ್ಮೊಂದಿಗೆ ಇಲ್ಲ. ಆದರೆ, ಅಂದು ಅವರು ಸಹಿ ಹಾಕಿದ ಆ ಒಪ್ಪಂದವು ಅವರ ಕುಟುಂಬದ ಭವಿಷ್ಯವನ್ನು ಭದ್ರಪಡಿಸಿದೆ.