Asianet Suvarna News Asianet Suvarna News

ಶಕೀಬ್ ಅಲ್‌ ಹಸನ್‌ಗೆ ಮತ್ತೆ ಬಾಂಗ್ಲಾದೇಶ ಕ್ಯಾಪ್ಟನ್ ಪಟ್ಟ; ಏಷ್ಯಾಕಪ್‌, ವಿಶ್ವಕಪ್ ಗೆಲ್ಲಿಸುವ ಗುರಿ..!

ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ನೂತನ ನಾಯಕ ನೇಮಕ
ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್‌ ಮತ್ತೊಮ್ಮೆ ನಾಯಕನಾಗಿ ನೇಮಕ
ಅನುಭವಿ ಆಲ್ರೌಂಡರ್ ಹೆಗಲೇರಿದ ಮಹತ್ವದ ಜವಾಬ್ದಾರಿ

Shakib Al Hasan To Lead Bangladesh In Asia Cup ODI World Cup 2023 kvn
Author
First Published Aug 11, 2023, 4:42 PM IST

ಢಾಕಾ(ಆ.11): ಮುಂಬರುವ ಏಷ್ಯಾಕಪ್ ಹಾಗೂ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ಸಿದ್ದತೆ ನಡೆಸುತ್ತಿವೆ. ಪ್ರತಿಷ್ಠಿತ ಟ್ರೋಫಿ ಗೆದ್ದು ಸ್ಮರಣೀಯವಾಗಿಸಿಕೊಳ್ಳಲು ಎಲ್ಲಾ ತಂಡಗಳು ಮೈದಾನದಲ್ಲಿ ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿವೆ. ಮುಂದಿನ ಇನ್ನೆರಡು ತಿಂಗಳಿನಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದ್ದು, ಎರಡು ಮಹತ್ವದ ಟೂರ್ನಿಗಳನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ತಮೀಮ್ ಇಕ್ವಾಲ್ ಅವರಿಂದ ತೆರವಾದ ಬಾಂಗ್ಲಾದೇಶ ಏಕದಿನ ತಂಡದ ನಾಯಕ ಹುದ್ದೆಗೆ ಇದೀಗ ಅನುಭವಿ ಆಲ್ರೌಂಡರ್ ಶಕೀಬ್ ಅಲ್‌ ಹಸನ್‌ ನೇಮಕವಾಗಿದ್ದಾರೆ. ಆಗಸ್ಟ್ 30ರಿಂದ ಪಾಕಿಸ್ತಾನ & ಶ್ರೀಲಂಕಾದಲ್ಲಿ ಏಷ್ಯಾಕಪ್ ಟೂರ್ನಿ ಆರಂಭವಾದರೆ, ಅಕ್ಟೋಬರ್ 05ರಿಂದ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಲಿದೆ. ಈ ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಗೆಲ್ಲಿಸುವ ಜವಬ್ದಾರಿ ಇದೀಗ ಶಕೀಬ್ ಅಲ್ ಹಸನ್ ಹೆಗಲೇರಿದೆ.

ಬಾಂಗ್ಲಾದೇಶ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡ ಬಳಿಕ, ನ್ಯೂಜಿಲೆಂಡ್ ಎದುರು ಸೀಮಿತ ಓವರ್‌ಗಳ ಸರಣಿಯನ್ನಾಡಲಿದೆ. ಇದಾದ ಬಳಿಕ ಪ್ರತಿಷ್ಠಿತ ಏಕದಿನ ವಿಶ್ವಕಪ್ ಟೂರ್ನಿಯನ್ನಾಡಲು ಭಾರತ ಪ್ರವಾಸ ಕೈಗೊಳ್ಳಲಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ತಮೀಮ್ ಇಕ್ಬಾಲ್, ಏಷ್ಯಾಕಪ್‌ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಶಕೀಬ್ ಅಲ್ ಹಸನ್‌ಗೆ ಏಷ್ಯಾಕಪ್ ಹಾಗೂ ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡದ ನಾಯಕ ಪಟ್ಟ ಕಟ್ಟಲಾಗಿದೆ.

"ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್‌ಗೆ ನಾವು ಶಕೀಬ್ ಅಲ್ ಹಸನ್ ಅವರಿಗೆ ನಾಯಕ ಪಟ್ಟ ಕಟ್ಟಿದ್ದೇವೆ. ನಾಳೆ ಏಷ್ಯಾಕಪ್ ಹಾಗೂ ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗುವುದು. ಆಯ್ಕೆ ಸಮಿತಿಯು 17 ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಿದೆ" ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ತಿಳಿಸಿದ್ದಾರೆ.

ಟೀಂ ಇಂಡಿಯಾ ಅಲ್ಲವೇ ಅಲ್ಲ..! ಈ ಬಾರಿ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಭವಿಷ್ಯ ನುಡಿದ ಆರ್ ಅಶ್ವಿನ್‌..!

ಇದರೊಂದಿಗೆ ಶಕೀಬ್ ಅಲ್ ಹಸನ್ ಇದೀಗ ಮತ್ತೊಮ್ಮೆ ಮೂರು ಮಾದರಿಯಲ್ಲಿ ಬಾಂಗ್ಲಾದೇಶ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಈ ವರ್ಷಾರಂಭದಲ್ಲಿ ಶಕೀಬ್ ಅಲ್ ಹಸನ್‌ ಬಾಂಗ್ಲಾದೇಶ ಟೆಸ್ಟ್ ಹಾಗೂ ಟಿ20 ತಂಡದ ನಾಯಕರಾಗಿ ನೇಮಕವಾಗಿದ್ದರು. ಇನ್ನು ಶಕೀಬ್ ಅಲ್ ಹಸನ್‌, 2017ರ ಮೇ 12ರಂದು ಕೊನೆಯ ಬಾರಿಗೆ ಬಾಂಗ್ಲಾದೇಶ ಏಕದಿನ ತಂಡದ ನಾಯಕರಾಗಿ ಕಣಕ್ಕಿಳಿದಿದ್ದರು. ಐರ್ಲೆಂಡ್ ಎದುರಿನ ಆ ಏಕದಿನ ಪಂದ್ಯವು ಫಲಿತಾಂಶವಿಲ್ಲದೇ ಅಂತ್ಯವಾಗಿತ್ತು. ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ 2011ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಬಾಂಗ್ಲಾದೇಶವನ್ನು ಶಕೀಬ್ ಅಲ್ ಹಸನ್, ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು.

2009ರಿಂದಲೂ ಬಾಂಗ್ಲಾದೇಶ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಶಕೀಬ್ ಅಲ್ ಹಸನ್‌, 52 ಏಕದಿನ, 19 ಟೆಸ್ಟ್ ಹಾಗೂ 39 ಟಿ20 ಪಂದ್ಯಗಳಲ್ಲಿ ನಾಯಕನಾಗಿ ಬಾಂಗ್ಲದೇಶ ತಂಡವನ್ನು ಮುನ್ನಡೆಸಿದ್ದಾರೆ.
 

Follow Us:
Download App:
  • android
  • ios