2026ರ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹಿಂದೆ ಸರಿದಿರುವುದನ್ನು ಮಾಜಿ ನಾಯಕ ಶಕೀಬ್ ಅಲ್ ಹಸನ್ 'ದೊಡ್ಡ ಪ್ರಮಾದ' ಎಂದು ಕರೆದಿದ್ದಾರೆ. ಪಾಕಿಸ್ತಾನದ ಪ್ರಚಾರಕ್ಕೆ ಬಲಿಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ಭಾರತದೊಂದಿಗೆ ಸಂಬಂಧ ಸುಧಾರಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.

ಢಾಕಾ (ಏ.30): 2026ರ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವ ಬಾಂಗ್ಲಾದೇಶ ಸರ್ಕಾರದ ನಿರ್ಧಾರವನ್ನು ಆ ದೇಶದ ಮಾಜಿ ನಾಯಕ ಶಕೀಬ್ ಅಲ್ ಹಸನ್ 'ದೊಡ್ಡ ಪ್ರಮಾದ' (Blunder) ಎಂದು ಕರೆದಿದ್ದಾರೆ. ಈ ವಿವಾದಾತ್ಮಕ ನಿರ್ಧಾರವು ಬಾಂಗ್ಲಾ ಕ್ರಿಕೆಟ್‌ಗೆ ಭಾರಿ ನಷ್ಟ ಉಂಟುಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 2026ರ ಟಿ20 ವಿಶ್ವಕಪ್‌ನ ತನ್ನ ಗುಂಪು ಹಂತದ ಪಂದ್ಯಗಳನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ICC) ವಿನಂತಿಸಿತ್ತು. ಭಾರತದಲ್ಲಿ ಆಡಲು ತಮಗೆ 'ಭದ್ರತಾ ಕಾಳಜಿ' ಇದೆ ಎಂದು ಬಾಂಗ್ಲಾ ಕಾರಣ ನೀಡಿತ್ತು. ಆದರೆ, ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿತ್ತು. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸರ್ಕಾರವು ಟೂರ್ನಿಯನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಿತು. ಬಾಂಗ್ಲಾದೇಶದ ಸ್ಥಾನಕ್ಕೆ ಸ್ಕಾಟ್ಲೆಂಡ್ ತಂಡವನ್ನು ಬದಲಿಯಾಗಿ ಸೇರಿಸಿಕೊಳ್ಳಲಾಯಿತು.

ಶಕೀಬ್ ಅಲ್ ಹಸನ್ ಹೇಳಿದ್ದೇನು?

ಬಾಂಗ್ಲಾದೇಶವು ವಿಶ್ವಕಪ್‌ನ ಭಾಗವಾಗಿಲ್ಲದಿರುವುದನ್ನು ನೋಡುವುದು ಪ್ರಾಮಾಣಿಕವಾಗಿ ತುಂಬಾ ಬೇಸರ ತರಿಸುತ್ತದೆ. ನಮ್ಮ ದೇಶದಲ್ಲಿ ಕ್ರಿಕೆಟ್ ಅನ್ನು ಗಾಢವಾಗಿ ಪ್ರೀತಿಸಲಾಗುತ್ತದೆ ಮತ್ತು ಅಭಿಮಾನಿಗಳು ಇದಕ್ಕಾಗಿ ನಿಜವಾಗಿಯೂ ಎದುರು ನೋಡುತ್ತಿದ್ದರು. ಈ ವಿಷಯದಲ್ಲಿ ಭಾರತದ ತಪ್ಪಿದೆ ಎಂದು ನಾನು ಭಾವಿಸುವುದಿಲ್ಲ. ನಮ್ಮದೇ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರಗಳು ಇಂತಹ ಪರಿಸ್ಥಿತಿಗೆ ಕಾರಣವಾಯಿತು. ಪಾಕಿಸ್ತಾನದ ಪ್ರಚಾರಕ್ಕೆ (Propaganda) ಬಲಿಯಾಗಿದ್ದು ಒಂದು ದೊಡ್ಡ ತಪ್ಪು, ಮತ್ತು ಇದು ಎರಡೂ ಕಡೆಗಳ ನಡುವೆ ಅನಗತ್ಯ ಉದ್ವಿಗ್ನತೆಯನ್ನು ಸೃಷ್ಟಿಸಿತು.

ಹಾಗಿದ್ದರೂ, ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಭರವಸೆ ನನಗಿನ್ನೂ ಇದೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶ ಪ್ರವಾಸ ಕೈಗೊಂಡಾಗ, ಸಂಬಂಧಗಳನ್ನು ಮರುನಿರ್ಮಾಣ ಮಾಡಲು ಅದು ಹೊಸ ಆರಂಭವಾಗಬಹುದು. ಕ್ರಿಕೆಟ್ ಯಾವಾಗಲೂ ಎರಡೂ ರಾಷ್ಟ್ರಗಳನ್ನು ಬೆಸೆದಿದೆ ಮತ್ತು ಆ ಬಾಂಧವ್ಯವು ಮತ್ತೆ ಗಟ್ಟಿಯಾಗುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಆಶಿಸುತ್ತೇನೆ." ಎಂದು ಶಕೀಬ್ 'ರೇವ್‌ಸ್ಪೋರ್ಟ್ಸ್‌' (RevSportz) ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕ್ರಿಕೆಟ್ ಭವಿಷ್ಯದ ಬಗ್ಗೆ ಆಶಾವಾದ

ಬಾಂಗ್ಲಾ ಆಟಗಾರರು ಇತ್ತೀಚಿನ ವಿಶ್ವಕಪ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಕಳೆದುಕೊಂಡಿದ್ದರೂ, ಶಕೀಬ್ ದೇಶದ ಕ್ರಿಕೆಟ್ ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. "ತಂಡವು ಪ್ರಸ್ತುತ ಉತ್ತಮವಾಗಿ ಆಡುತ್ತಿದೆ. ನ್ಯೂಜಿಲೆಂಡ್ ತಂಡವನ್ನೇ ಸೋಲಿಸಿದ್ದಾರೆ. ಹಿಂದೆ ವೈಯಕ್ತಿಕ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದೆವು, ಆದರೆ ಈಗ ತಂಡವಾಗಿ ಆಡುತ್ತಿದ್ದೇವೆ. ಇದು ಪ್ರಗತಿಯ ಸರಿಯಾದ ದಾರಿ," ಎಂದಿದ್ದಾರೆ. ಹಲವು ಉದಯೋನ್ಮುಖ ಆಟಗಾರರು ಭರವಸೆ ಮೂಡಿಸುತ್ತಿದ್ದಾರೆ. ಅನುಭವಿಗಳು ಮತ್ತು ಯುವ ಪೀಳಿಗೆಯ ಸಮಾಗಮದಿಂದ ಬಾಂಗ್ಲಾ ಕ್ರಿಕೆಟ್ ಉತ್ತಮ ಭವಿಷ್ಯವನ್ನು ಹೊಂದಿದೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಮುಂಬರುವ EUT20 ಬೆಲ್ಜಿಯಂ ಟೂರ್ನಿಯ ಬಗ್ಗೆ ಮಾತನಾಡಿದ ಅವರು, "ದೊಡ್ಡ ಆಟಗಾರರಿರುವ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುವುದು ಯಾವಾಗಲೂ ಉತ್ತಮ ಅವಕಾಶ. ಇದರಿಂದ ಯುವ ಆಟಗಾರರು ಅವರಿಂದ ಸಾಕಷ್ಟು ಕಲಿಯಬಹುದು. ಯುವ ಪೀಳಿಗೆಗೆ ಇದು ಉತ್ತಮ ಅನುಭವವಾಗಲಿದೆ," ಎಂದು ತಿಳಿಸಿದ್ದಾರೆ.