2026ರ ಟಿ20 ವಿಶ್ವಕಪ್ ಗೆದ್ದ ನಂತರ, ವಿಮಾನ ಟಿಕೆಟ್ ಸಿಗದ ಕಾರಣ ಆಲ್ ರೌಂಡರ್ ಶಿವಂ ದುಬೆ ಅಹಮದಾಬಾದ್‌ನಿಂದ ಮುಂಬೈಗೆ 3ನೇ ಎಸಿ ರೈಲಿನಲ್ಲಿ ಪ್ರಯಾಣಿಸಿದರು. ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಮಾಸ್ಕ್, ಕ್ಯಾಪ್ ಧರಿಸಿ ಗುರುತು ಮರೆಮಾಚಿದ್ದರು.

ಮುಂಬೈ (ಮಾ.11): 2026ರ ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದ ಬಳಿಕ ಟೀಮ್‌ ಇಂಡಿಯಾ ಪ್ಲೇಯರ್ಸ್‌ ಸಾಮಾನ್ಯವಾಗಿ ಚಾರ್ಟರ್ಡ್ ವಿಮಾನ ಅಥವಾ ಸ್ಪೆಷಲ್‌ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಾರೆ. ಆದರೆ, ಆಲ್ ರೌಂಡರ್ ಶಿವಂ ದುಬೆ ಮಾತ್ರ ಅನಿವಾರ್ಯವಾಗಿ ಅತಿ ಸಾಮಾನ್ಯರಂತೆ ರೈಲು ಏರಬೇಕಾಯಿತು. ಅಹಮದಾಬಾದ್‌ನಿಂದ ಮುಂಬೈಗೆ ಯಾವುದೇ ವಿಮಾನದ ಟಿಕೆಟ್‌ಗಳು ಲಭ್ಯವಿಲ್ಲದ ಕಾರಣ, ಅವರು 3ನೇ ಎಸಿ (3rd AC) ರೈಲು ಟಿಕೆಟ್ ಕಾಯ್ದಿರಿಸಿ ಪ್ರಯಾಣ ಬೆಳೆಸಿದರು.

Add Asianetnews Kannada as a Preferred SourcegooglePreferred

'ದಿ ಇಂಡಿಯನ್ ಎಕ್ಸ್‌ಪ್ರೆಸ್' ಜೊತೆ ಮಾತನಾಡಿದ 32 ವರ್ಷದ ದುಬೆ, ಈ ಅಪರೂಪದ ಪ್ರಯಾಣದ ಬಗ್ಗೆ ವಿವರಿಸಿದ್ದಾರೆ. "ನನಗೆ ಮತ್ತು ನನ್ನ ಕುಟುಂಬಕ್ಕೆ ವಿಮಾನದ ಟಿಕೆಟ್‌ಗಳು ಸಿಗಲೇ ಇಲ್ಲ. ರಸ್ತೆಯ ಮೂಲಕ ಹೋಗುವ ಆಯ್ಕೆಯೂ ಇತ್ತು, ಆದರೆ ಅದಕ್ಕಿಂತ ರೈಲು ಪ್ರಯಾಣವೇ ವೇಗವಾಗಿತ್ತು. ಹಾಗಾಗಿ ಮುಂಜಾನೆಯ ರೈಲು ಹಿಡಿಯಲು ನಿರ್ಧರಿಸಿದೆ," ಎಂದಿದ್ದಾರೆ.

ರೈಲಿನಲ್ಲಿ ಅಭಿಮಾನಿಗಳು ಮುತ್ತುವ ಭೀತಿ

ಶಿವಂ ದುಬೆ ತಮ್ಮ ಪತ್ನಿ ಅಂಜುಂ ಮತ್ತು ಸ್ನೇಹಿತನೊಂದಿಗೆ ರೈಲು ಏರಲು ನಿರ್ಧರಿಸಿದಾಗ ಅವರ ಆಪ್ತ ವಲಯದಲ್ಲಿ ಆತಂಕ ಶುರುವಾಗಿತ್ತು. "ರೈಲಿನಲ್ಲಿ ಯಾರಾದರೂ ನಿಮ್ಮನ್ನು ಗುರುತಿಸಿದರೆ ಏನು ಮಾಡುವುದು? ಎಂದು ಎಲ್ಲರೂ ಕೇಳಿದ್ದರು," ಎಂದು ದುಬೆ ನೆನಪಿಸಿಕೊಂಡಿದ್ದಾರೆ.

ತನ್ನ ಗುರುತು ಸಿಗದಂತೆ ತಡೆಯಲು ದುಬೆ ಅವರು ಕ್ಯಾಪ್, ಮಾಸ್ಕ್ ಮತ್ತು ಉದ್ದನೆಯ ತೋಳಿನ ಟಿ-ಶರ್ಟ್ ಧರಿಸಿದ್ದರು. ಅಷ್ಟೇ ಅಲ್ಲ, ಮುಂಜಾನೆ 5:10ಕ್ಕೆ ಹೊರಡುವ ರೈಲನ್ನು ಆಯ್ದುಕೊಂಡಿದ್ದರು. "ರೈಲು ಹೊರಡುವ 5 ನಿಮಿಷ ಮೊದಲು ಮಾತ್ರ ನಾನು ಕಾರಿನಿಂದ ಇಳಿದು ನೇರವಾಗಿ ಕೋಚ್‌ ಒಳಗೆ ಓಡುತ್ತೇನೆ ಎಂದು ನನ್ನ ಪತ್ನಿಗೆ ಹೇಳಿದ್ದೆ," ಎಂದು ಶಿವಂ ದುಬೇ ಹೇಳಿದ್ದಾರೆ.

ಟಿಟಿಯನ್ನೇ ಯಾಮಾರಿಸಿದ ದುಬೆ ಪತ್ನಿ!

ರೈಲಿನಲ್ಲಿ ಹೆಚ್ಚು ಜನರಿಗೆ ಕಾಣಿಸಬಾರದು ಎಂದು ದುಬೆ ಅವರು ತಮಗೆ ನೀಡಲಾಗಿದ್ದ ಟಾಪ್ ಬರ್ತ್ (ಮೇಲಿನ ಸೀಟು) ಏರಿ ಮಲಗಿದ್ದರು. ಆದರೆ ಈ ನಡುವೆ ಒಂದು ಸಣ್ಣ ಹೈಡ್ರಾಮಾ ಕೂಡ ನಡೆದಿದೆ. ಟಿಕೆಟ್‌ ಕಲೆಕ್ಟರ್‌ ಬಂದಾಗ "ಶಿವಂ ದುಬೆ? ಯಾರವರು, ಕ್ರಿಕೆಟಿಗನಾ?" ಎಂದು ಕೇಳಿದ್ದಾರೆ. ತಕ್ಷಣ ಪರಿಸ್ಥಿತಿಯನ್ನು ನಿಭಾಯಿಸಿದ ದುಬೆ ಪತ್ನಿ ಅಂಜುಂ, "ಇಲ್ಲ, ಇಲ್ಲ.. ಅವರು ಯಾಕೆ ರೈಲಲ್ಲಿ ಪ್ರಯಾಣ ಮಾಡ್ತಾರೆ?" ಎಂದು ಹೇಳಿ ಗುರುರು ಸಿಗದಂತೆ ನೋಡಿಕೊಂಡಿದ್ದರು. ಟಿಟಿ ಕೂಡ ಅಷ್ಟಕ್ಕೇ ಸುಮ್ಮನಾಗಿ ಮುಂದೆ ಹೋಗಿದ್ದರು.

View post on Instagram

ರಕ್ಷಣೆಗಾಗಿ ಪೊಲೀಸ್ ಬೆಂಗಾವಲು

ಒಂದು ವೇಳೆ ಜನರ ಗುಂಪು ದುಬೆಯನ್ನು ಗುರುತಿಸಿದರೆ ಸಂಭವಿಸಬಹುದಾದ ಗೊಂದಲವನ್ನು ತಡೆಯಲು ಅವರೊಂದಿಗೆ ಒಬ್ಬ ಪೊಲೀಸ್ ಅಧಿಕಾರಿಯೂ ಇದ್ದರು. "ರಾತ್ರಿ ಶೌಚಾಲಯಕ್ಕೆ ಹೋಗಲು ಕೆಳಗೆ ಇಳಿದಾಗಲೂ ಯಾರೂ ನನ್ನನ್ನು ಗುರುತಿಸಲಿಲ್ಲ. ಆದರೆ ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಹಗಲಿನಲ್ಲಿ ಇಳಿಯುವಾಗ ಜನರ ಗಮನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಆತಂಕವಿತ್ತು," ಎಂದು ದುಬೆ ಹೇಳಿದ್ದಾರೆ.

ಸಾಮಾನ್ಯವಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ ಎಂದು ನಿರೀಕ್ಷಿಸಿದ್ದ ಅಧಿಕಾರಿಗಳಿಗೆ ದುಬೆ ಅವರ ರೈಲು ಪ್ರಯಾಣ ಅಚ್ಚರಿ ಮೂಡಿಸಿತ್ತು. ಆದರೆ ಬೊರಿವಲಿ ನಿಲ್ದಾಣಕ್ಕೆ ಪೊಲೀಸ್ ರಕ್ಷಣೆ ಒದಗಿಸಿದ್ದರಿಂದ ಅವರು ಸುರಕ್ಷಿತವಾಗಿ ಮನೆ ತಲುಪಲು ಸಾಧ್ಯವಾಯಿತು.