ಏಕದಿನ ವಿಶ್ವಕಪ್ ತಂಡದಿಂದ ಕೈಬಿಡಲ್ಪಟ್ಟಿದ್ದ ಶಫಾಲಿ ವರ್ಮಾ, ಗಾಯಾಳುವಿನ ಬದಲಿಯಾಗಿ ತಂಡ ಸೇರಿ ಅಚ್ಚರಿ ಮೂಡಿಸಿದ್ದರು. ಫೈನಲ್ ಪಂದ್ಯದಲ್ಲಿ 87 ರನ್ ಹಾಗೂ 2 ವಿಕೆಟ್ ಪಡೆದು ಆಲ್ರೌಂಡ್ ಪ್ರದರ್ಶನ ನೀಡಿ, ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲುವ ಮೂಲಕ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟರು.

ಮುಂಬೈ: ಏಕದಿನ ವಿಶ್ವಕಪ್ ತಂಡವನ್ನು ಪ್ರಕಟಿಸಿದಾಗ ಶಫಾಲಿ ವರ್ಮಾ ಹೆಸರು ಇರಲಿಲ್ಲ. ಫಾರ್ಮ್ ಇಲ್ಲದಿರುವುದು ಮತ್ತು ಸ್ಥಿರತೆ ಇಲ್ಲದ ಕಾರಣ ಶಫಾಲಿಯನ್ನು ತಂಡಕ್ಕೆ ತೆಗೆದುಕೊಳ್ಳಬಾರದು ಎಂಬುದು ಮ್ಯಾನೇಜ್‌ಮೆಂಟ್ ನಿರ್ಧಾರವಾಗಿತ್ತು. ಮೀಸಲು ಆಟಗಾರ್ತಿಯರ ಪಟ್ಟಿಯಲ್ಲೂ ಶಫಾಲಿಯನ್ನು ಸೇರಿಸಿರಲಿಲ್ಲ. ಹೀಗಾಗಿ ಶಫಾಲಿ ವರ್ಮಾ ಬದಲಿಗೆ ಪ್ರತಿಕಾ ರಾವಲ್ ಓಪನರ್ ಆಗಿ ತಂಡಕ್ಕೆ ಬಂದರು. ಆದರೆ ವಿಧಿ ಶಫಾಲಿಗಾಗಿ ಬೇರೆಯದನ್ನೇ ಬರೆದಿತ್ತು. ಸೆಮಿಫೈನಲ್‌ಗೂ ಮುನ್ನ ಉತ್ತಮ ಫಾರ್ಮ್‌ನಲ್ಲಿದ್ದ ಪ್ರತಿಕಾಗೆ ಗಾಯವಾಯಿತು. ಸೆಮಿಫೈನಲ್ ಆಡಲು ಸಾಧ್ಯವಿಲ್ಲ ಎಂದು ಖಚಿತವಾದಾಗ ಶಫಾಲಿಗೆ ಅನಿರೀಕ್ಷಿತ ಕರೆ ಬಂತು.

ತಂಡವನ್ನು ಸೇರಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಫಾಲಿ, 'ದೇವರು ನನ್ನನ್ನು ಇಲ್ಲಿಗೆ ಕಳುಹಿಸಿದ್ದು ಏನಾದರೂ ಒಳ್ಳೆಯದನ್ನು ಮಾಡಲಿಕ್ಕೆ' ಎಂದು ಭವಿಷ್ಯ ನುಡಿದಂತೆ ಹೇಳಿದ್ದರು. ಸೆಮಿಫೈನಲ್‌ನಲ್ಲಿ ಶಫಾಲಿಗೆ ಹೆಚ್ಚು ಏನೂ ಮಾಡಲು ಸಾಧ್ಯವಾಗದಿದ್ದರೂ, ತಂಡವು ಅವರ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿತ್ತು.

ಅವಿಸ್ಮರಣೀಯ ಇನ್ನಿಂಗ್ಸ್ ಆಡಿದ ಶಫಾಲಿ ವರ್ಮಾ

ಫೈನಲ್‌ಗಾಗಿ ಕಾಯ್ದಿರಿಸಿದ ವಜ್ರದಂತಿತ್ತು ಶಫಾಲಿಯ ಇನ್ನಿಂಗ್ಸ್. ಕಳೆದೊಂದು ವರ್ಷದಿಂದ ಭಾರತ ಪರ ಒಂದೇ ಒಂದು ಏಕದಿನ ಪಂದ್ಯವನ್ನಾಡದ ಶಫಾಲಿ ವರ್ಮಾ, ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಎಲ್ಲರೂ ಹುಬ್ಬೇರಿಸುವಂತ ಆಲ್ರೌಂಡ್ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಮೃತಿ ಜೊತೆ ಎಚ್ಚರಿಕೆಯಿಂದ ಆಟ ಆರಂಭಿಸಿದ ಶಫಾಲಿ ವರ್ಮಾ, ನಂತರ ಅಬ್ಬರಿಸಿದರು. ಒಂದು ಕಡೆ ಸ್ಮೃತಿ ಮಂಧನಾ 45 ರನ್ ಗಳಿಸಿ ಔಟಾದರೂ ಶಫಾಲಿ ಅಲುಗಾಡಲಿಲ್ಲ. ಶತಕ ಗಳಿಸುವಂತೆ ಕಂಡರೂ, ತಂಡದ ಸ್ಕೋರ್ 166 ಆಗಿದ್ದಾಗ 87 ರನ್ ಗಳಿಸಿ ಶಫಾಲಿ ಔಟಾದರು. ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಿತ್ತು ಆ ನಿರ್ಣಾಯಕ ಇನ್ನಿಂಗ್ಸ್.

ಬೌಲಿಂಗ್‌ನಲ್ಲೂ ಶಫಾಲಿ ವರ್ಮಾ ನಿರ್ಣಾಯಕ ಪಾತ್ರ ವಹಿಸಿದರು. ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಟ್ ಮತ್ತು ಸುನೆ ಲೂಸ್ ಜೋಡಿ ಭಾರತದ ಕೈಯಿಂದ ಪಂದ್ಯವನ್ನು ಕಸಿದುಕೊಳ್ಳುತ್ತಾರೆ ಎನಿಸಿದಾಗ ಶಫಾಲಿ ಬ್ರೇಕ್ ಥ್ರೂ ನೀಡಿದರು. ತಮ್ಮದೇ ಬೌಲಿಂಗ್‌ನಲ್ಲಿ 25 ರನ್ ಗಳಿಸಿದ್ದ ಲೂಸ್ ಅವರನ್ನು ಕ್ಯಾಚ್ ಹಿಡಿದು ಔಟ್ ಮಾಡಿದರು. ಅದರ ಬೆನ್ನಲ್ಲೇ ಮರಿಜಾನ್ನೆ ಕಪ್ ಅವರನ್ನು ರಿಚಾ ಘೋಷ್ ಕೈಗೆ ಕ್ಯಾಚ್ ಕೊಡಿಸಿದರು. ಏಳು ಓವರ್‌ಗಳಲ್ಲಿ ಕೇವಲ 36 ರನ್ ನೀಡಿ ಎರಡು ವಿಕೆಟ್ ಪಡೆದರು.

ನಿಜವಾದ ಶಫಾಲಿ ವರ್ಮಾ ಭವಿಷ್ಯವಾಣಿ

ಈ ಮೂಲಕ ಶಫಾಲಿ ವರ್ಮಾ, ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಪಾಲಿಗೆ ಗೇಮ್‌ ಚೇಂಜರ್ ಎನಿಸಿಕೊಂಡರು. ಫೈನಲ್‌ನಲ್ಲಿ ಶಫಾಲಿ ಅವರ ಈ ಆಲ್ರೌಂಡ್ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯು ಹುಡುಕಿಕೊಂಡು ಬಂತು. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಫಾಲಿ,

ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡಲೆಂದೇ ದೇವರು ಕಳಿಸಿದ್ದ ಎಂದು ನಾನು ಮೊದಲೇ ಹೇಳಿದ್ದೇ, ಅದು ಈಗ ನಿಜವಾಗಿದೆ. ಕೊನಗೂ ನಾವು ವಿಶ್ವಕಪ್ ಗೆದ್ದಿದ್ದಕ್ಕೆ ಖುಷಿಯಿದೆ. ಸ್ಮೃತಿ ಮಂಧನಾ ಹಾಗೂ ಹರ್ಮನ್‌ಪ್ರೀತ್ ಕೌರ್ ನನ್ನ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ಧನ್ಯವಾದಗಳು. ನಿನ್ನ ಆಟವನ್ನು ನೀನು ಆಡು ಎನ್ನುವ ಸ್ವಾತಂತ್ರ್ಯವನ್ನು ನನ್ನ ಸೀನಿಯರ್ಸ್ ಕೊಟ್ಟಿದ್ದರಿಂದ ನಾನು ಯಾವುದೇ ಒತ್ತಡವಿಲ್ಲದೇ ಆಡಲು ಸಾಧ್ಯವಾಯಿತು ಎಂದು ಶಫಾಲಿ ವರ್ಮಾ ಹೇಳಿದ್ದಾರೆ.

29 ವರ್ಷ 279 ದಿನದ ಶಫಾಲಿ ವರ್ಮಾ ಇದೀಗ ಐಸಿಸಿ ಏಕದಿನ ವಿಶ್ವಕಪ್ ಇತಿಹಾಸ(ಮಹಿಳಾ& ಪುರುಷ)ದಲ್ಲೇ ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಅತ್ಯಂತ ಕಿರಿಯ ಕ್ರಿಕೆಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.