Asianet Suvarna News Asianet Suvarna News

ಕಿರಿಯರ ವಿಶ್ವಕಪ್ ಆಯ್ತು, ಇದೀಗ ಹಿರಿಯರ T20 ವಿಶ್ವಕಪ್ ಮೇಲೆ ಕಣ್ಣಿಟ್ಟ ಶಫಾಲಿ ವರ್ಮಾ..!

ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ
ಶಫಾಲಿ ವರ್ಮಾ ನೇತೃತ್ವದ ಮಹಿಳಾ ಟೀಂ ಇಂಡಿಯಾ, ಚೊಚ್ಚಲ ಆವೃತ್ತಿಯ ಅಂಡರ್ 19 ಟಿ20 ವಿಶ್ವಕಪ್ ಚಾಂಪಿಯನ್
ಇದೀಗ ಹಿರಿಯರ ಟಿ20 ವಿಶ್ವಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಶಫಾಲಿ ವರ್ಮಾ

Shafali Verma eyeing senior Womens ICC T20 World Cup after U19 T20 World Cup Victory kvn
Author
First Published Jan 30, 2023, 10:25 AM IST

ನವದೆಹಲಿ(ಜ.30): ಚೊಚ್ಚಲ ಆವೃತ್ತಿಯ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶಫಾಲಿ ವರ್ಮಾ ನೇತೃತ್ವದ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಳೆದ ಶನಿವಾರವಷ್ಟೇ 19ನೇ ವರ್ಷಕ್ಕೆ ಕಾಲಿರಿಸಿರುವ ಶಫಾಲಿ ವರ್ಮಾ, ಕಿರಿಯರ ಟಿ20 ವಿಶ್ವಕಪ್ ಜಯಿಸಿದ ಬಳಿಕ ಇದೀಗ, ಹಿರಿಯರ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಹಿರಿಯರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 19ರಿಂದ 26ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ಜರುಗಲಿದೆ.

ಐಸಿಸಿ ಮಹಿಳಾ ಅಂಡರ್ 19 ಟಿ20 ವಿಶ್ವಕಪ್ ಟೂರ್ನಿಯಲ್ಲಿ, ಗ್ರೇಸ್ ಸ್ಕ್ರೀವೆನ್ಸ್‌ ನೇತೃತ್ವದ ಇಂಗ್ಲೆಂಡ್ ತಂಡದ ಎದುರು ಭಾರತ ಕಿರಿಯರ ಮಹಿಳಾ ಕ್ರಿಕೆಟ್ ತಂಡವು 8 ವಿಕೆಟ್‌ಗಳ ಸುಲಭ ಜಯ ಸಾಧಿಸುವ ಮೂಲಕ ಚೊಚ್ಚಲ ಆವೃತ್ತಿಯ ಅಂಡರ್ 19 ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. 

ಭಾನುವಾರ ನಡೆದ ಫೈನಲ್‌ ಪಂದ್ಯ ಏಕಪಕ್ಷೀಯವಾಯಿತು. ಇಂಗ್ಲೆಂಡ್‌ ವಿರುದ್ಧ 7 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿ ಭಾರತ ಸಂಭ್ರಮಿಸಿತು. ಟಾಸ್‌ ಗೆದ್ದು ಮೊದಲು ಬೌಲ್‌ ಮಾಡುವ ಭಾರತ, ಇಂಗ್ಲೆಂಡ್‌ ತಂಡವನ್ನು 17.1 ಓವರಲ್ಲಿ ಕೇವಲ 68 ರನ್‌ಗೆ ಆಲೌಟ್‌ ಆಯಿತು.

ಸಣ್ಣ ಗುರಿ ಬೆನ್ನತ್ತಲು ಇಳಿದ ತಂಡಕ್ಕೆ ಆರಂಭಿಕ ಆಘಾತ ಎದುರಾದರೂ ಒತ್ತಡಕ್ಕೆ ಸಿಲುಕದೆ ಸಲೀಸಾಗಿ ಗೆಲುವು ಸಾಧಿಸಿತು. ನಾಯಕಿ ಶಫಾಲಿ ವರ್ಮಾ 11 ಎಸೆತದಲ್ಲಿ 1 ಬೌಂಡರಿ, 1 ಸಿಕ್ಸರ್‌ನೊಂದಿಗೆ 15 ರನ್‌ ಸಿಡಿಸಿ ಔಟಾದರೆ, ಟೂರ್ನಿಯಲ್ಲಿ ಗರಿಷ್ಠ ರನ್‌ ಚಚ್ಚಿದ ಖ್ಯಾತಿಯ ಶ್ವೇತಾ ಸೆಹ್ರಾವತ್‌ ಕೇವಲ 5 ರನ್‌ಗೆ ಪೆವಿಲಿಯನ್‌ಗೆ ಹಿಂದಿರುಗಿದರು. 20 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾದ ಭಾರತಕ್ಕೆ ಸೌಮ್ಯ ತಿವಾರಿ ಹಾಗೂ ಗೊಂಗಾಡಿ ತ್ರಿಶಾ ಆಸರೆಯಾದರು. ಇವರಿಬ್ಬರು 3ನೇ ವಿಕೆಟ್‌ಗೆ 46 ರನ್‌ ಸೇರಿಸಿದರು. ತ್ರಿಶಾ 24 ರನ್‌ ಗಳಿಸಿ ಔಟಾದರೆ, ಸೌಮ್ಯ 24 ರನ್‌ ಗಳಿಸಿ ಔಟಾಗದೆ ಉಳಿದರು. ಭಾರತ 14 ಓವರಲ್ಲಿ ಗುರಿ ತಲುಪಿತು.

ಇಂಗ್ಲೆಂಡ್ ಮಣಿಸಿ ಚೊಚ್ಚಲ U19 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡ!

ಪಂದ್ಯ ಮುಕ್ತಾಯದ ಬಳಿಕ, ಈ ವರ್ಷ ಶಫಾಲಿ ವರ್ಮಾ ಹಿಡಿಯುವ ಏಕೈಕ ಐಸಿಸಿ ಟ್ರೋಫಿನಾ ಇದು ಎನ್ನುವ ಪ್ರಶ್ನೆಗೆ ಉತ್ತರಿಸಿದ ಸ್ಪೋಟಕ ಬ್ಯಾಟರ್, 'ಖಂಡಿತವಾಗಿಯೂ ಅಲ್ಲ' ಎನ್ನುವ ಉತ್ತರ ನೀಡಿದ್ದಾರೆ. "ಫೆಬ್ರವರಿಯಲ್ಲಿ ಇದೊಂದೇ ಟ್ರೋಫಿ ಮಾತ್ರ ಎತ್ತುವುದಿಲ್ಲ, ದೊಡ್ಡ ಟ್ರೋಫಿಯನ್ನು ಎತ್ತುವ ವಿಶ್ವಾಸವಿದೆ" ಎಂದು ಶಫಾಲಿ ವರ್ಮಾ ಹೇಳಿದ್ದಾರೆ.

ಭಾರತ ಸೀನಿಯರ್ ಮಹಿಳಾ ಕ್ರಿಕೆಟ್‌ ತಂಡವು ಫೆಬ್ರವರಿ 12ರಂದು ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಫೈನಲ್‌ ಪ್ರವೇಶಿಸಿತ್ತಾದರೂ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸುವ ಮೂಲಕ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಆದರೆ ಇದೀಗ ಕಿರಿಯರ ತಂಡವು ಟಿ20 ವಿಶ್ವಕಪ್ ಜಯಿಸಿದ್ದು, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಹಿರಿಯರ ತಂಡಕ್ಕೆ ಸ್ಪೂರ್ತಿಯಾಗಲಿದೆ. ಕಿರಿಯರ ಟಿ20 ವಿಶ್ವಕಪ್ ಜಯಿಸಿದ ಶಫಾಲಿ ವರ್ಮಾ ಹಾಗೂ ರಿಚಾ ಘೋಷ್, ಇದೀಗ ಹಿರಿಯರ ತಂಡವನ್ನು ಕೂಡಿಕೊಂಡು ಚುಟುಕು ಕ್ರಿಕೆಟ್‌ ವಿಶ್ವಕಪ್ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಮರುಕಳಿಸಿದ 2007ರ ನೆನಪು!

2007ರಲ್ಲಿ ಪುರುಷರ ಚೊಚ್ಚಲ ಟಿ20 ವಿಶ್ವಕಪ್‌ ಟೂರ್ನಿಯನ್ನು ಗೆದ್ದು ಎಂ.ಎಸ್‌.ಧೋನಿ ಪಡೆ ಚಾಂಪಿಯನ್‌ ಆಗಿತ್ತು. ಶಫಾಲಿ ವರ್ಮಾ ಪಡೆಯ ಸಾಧನೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು 2007ರ ನೆನಪನ್ನು ಮೆಲುಕು ಹಾಕುವಂತೆ ಮಾಡಿತು. 2007ರ ವಿಶ್ವಕಪ್‌ ಸಹ ದ.ಆಫ್ರಿಕಾದಲ್ಲೇ ನಡೆದಿತ್ತು ಎನ್ನುವುದು ವಿಶೇಷ.

ಬಿಸಿಸಿಐ 5 ಕೋಟಿ ರುಪಾಯಿ ಬಹುಮಾನ!

ವಿಶ್ವಕಪ್‌ ವಿಜೇತ ಭಾರತ ತಂಡಕ್ಕೆ ಬಿಸಿಸಿಐ 5 ಕೋಟಿ ರು. ಬಹುಮಾನ ಘೋಷಿಸಿದೆ. ತಂಡವನ್ನು ಅಭಿನಂದಿಸಿರುವ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಟ್ವೀಟರ್‌ನಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಜೊತೆಗೆ ಫೆ.1ರಂದು ಅಹಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ-ನ್ಯೂಜಿಲೆಂಡ್‌ 3ನೇ ಟಿ20 ಪಂದ್ಯ ವೀಕ್ಷಿಸಲು ಶಫಾಲಿ ಪಡೆಗೆ ಆಹ್ವಾನ ನೀಡಲಾಗಿದೆ. ಈ ವೇಳೆ ಬಿಸಿಸಿಐ ವಿಶ್ವಕಪ್‌ ವಿಜೇತರಿಗೆ ಸನ್ಮಾನಿಸಲಿದೆ ಎನ್ನಲಾಗಿದೆ.

ಭಾರತವನ್ನು ಹುರಿದುಂಬಿಸಿದ ಚಿನ್ನದ ಹುಡುಗ ನೀರಜ್‌!

ಫೈನಲ್‌ಗೂ ಮುನ್ನ ಭಾರತ ತಂಡವನ್ನು ಭೇಟಿ ಮಾಡಿ ಪ್ರೋತ್ಸಾಹ ತುಂಬಿದ್ದ ಒಲಿಂಪಿಕ್ಸ್‌ ಜಾವೆಲಿನ್‌ ಚಾಂಪಿಯನ್‌ ನೀರಜ್‌ ಚೋಪ್ರಾ, ಫೈನಲ್‌ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಸ್ಟ್ಯಾಂಡ್‌್ಸನಲ್ಲಿ ಕೂತು ಭಾರತ ತಂಡವನ್ನು ಹುರಿದುಂಬಿಸಿದರು.

ಮೋದಿ, ಬಿಸಿಸಿಐ ಅಭಿನಂದನೆ

ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್‌ ಆದ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ, ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಸೇರಿ ಅನೇಕ ಗಣ್ಯರು ಅಭಿನಂದಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಭಾರತದ ಗೆಲುವನ್ನು ಸಂಭ್ರಮಿಸಿದ್ದಾರೆ.

Follow Us:
Download App:
  • android
  • ios