ಪಾಕಿಸ್ತಾನದ ಪ್ರೆಸಿಡೆಂಟ್ ಕಪ್ ಫೈನಲ್‌ನಲ್ಲಿ ಸೌದ್ ಶಕೀಲ್ ನಿದ್ದೆಯಿಂದ ತಡವಾಗಿ ಬಂದ ಕಾರಣಕ್ಕೆ 'ಟೈಮ್ಡ್ ಔಟ್' ಆದರು. ರಂಜಾನ್ ಉಪವಾಸದ ಕಾರಣ ಪಂದ್ಯ ರಾತ್ರಿ ತಡವಾಗಿ ನಡೆಯುತ್ತಿದೆ. 

ರಾವಲ್ಪಿಂಡಿ: ಸದಾ ಒಂದಿಲ್ಲೊಂದು ವಿಚಿತ್ರ ಕಾರಣಗಳಿಂದಾಗಿ ಸುದ್ದಿಯಾಗುವ ಪಾಕಿಸ್ತಾನ ಕ್ರಿಕೆಟಿಗರು ಈಗ ಮತ್ತೊಮ್ಮೆ ಟ್ರೆಂಡ್ ಆಗಿದ್ದಾರೆ. ಪಂದ್ಯದ ವೇಳೆ ನಿದ್ದೆಗೆ ಜಾರಿದ ಕಾರಣ ಪಾಕ್‌ನ ಸೌದ್ ಶಕೀಲ್ 'ಟೈಮ್ಡ್ ಔಟ್' ತೀರ್ಪಿಗೆ ಬಲಿಯಾಗಿದ್ದಾರೆ.

ಯಾವುದೇ ಬ್ಯಾಟರ್ ಔಟಾದ ಬಳಿಕ ಮತ್ತೊರ್ವ ಬ್ಯಾಟರ್ ಕ್ರೀಸ್‌ಗೆ ಆಗಮಿಸಲು 3 ನಿಮಿಷ ಕಾಲಾವಕಾಶ ಇರುತ್ತದೆ. ತಡವಾಗಿ ಬಂದರೆ 'ಟೈಮ್ಡ್ ಔಟ್' ಮೂಲಕ ಔಟ್ ಎಂದು ಘೋಷಿಸಲಾಗುತ್ತದೆ. ಮಂಗಳವಾರ ರಾತ್ರಿ ಪಾಕ್‌ನ ಪ್ರೆಸಿಡೆಂಟ್ ಕಪ್ ಪ್ರಥಮ ದರ್ಜೆ ಕ್ರಿಕೆಟ್ ಫೈನಲ್‌ನಲ್ಲಿ ಪಿಟಿವಿ ತಂಡದ ವಿರುದ್ಧ ಸ್ಟೇಟ್‌ ಬ್ಯಾಂಕ್‌ನ ಶಕೀಲ್ ಇದೇ ರೀತಿ ಔಟಾಗಿದ್ದಾರೆ. ಸತತ 2 ಎಸೆತಗಳಲ್ಲಿ ಸ್ಟೇಟ್ ಬ್ಯಾಂಕ್‌ನ ಇಬ್ಬರು ಔಟಾಗಿದ್ದರು. ಬಳಿಕ ಶಕೀಲ್ ಕ್ರೀಸ್‌ಗೆ ಬರಬೇಕಿತ್ತು. ಆದರೆ ನಿದ್ದೆಯಿಂದ ಎದ್ದು ಬರಲು ಶಕೀಲ್ ತಡ ಮಾಡಿದ್ದಾರೆ. 

ಪಿಟಿವಿ ತಂಡದ ನಾಯಕ ಔಟ್‌ಗಾಗಿ ಅಂಪೈರ್ ಬಳಿ ಮನವಿ ಮಾಡಿದ್ದಾರೆ. ಶಕೀಲ್ 3 ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕಾಗಿ ಅವರನ್ನು ಒಂದೂ ಎಸೆತ ಎದುರಿಸುವ ಮೊದಲೇ ಔಟ್ ಎಂದು ಘೋಷಿಸಲಾಗಿದೆ. ಶಕೀಬ್ ಟೈಮ್ ಔಟ್‌ಗೆ ಗುರಿಯಾದ ಪಾಕ್ ಮೊದಲ, ವಿಶ್ವದ 7ನೇ ಬ್ಯಾಟರ್ ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಟಾಪ್ 5 ಏಕದಿನ ಬ್ಯಾಟರ್ ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್!

ರಂಜಾನ್‌ ಉಪವಾಸ: ಪಾಕ್‌ನಲ್ಲಿ ಮಧ್ಯರಾತ್ರಿ 2.30ರ ವರೆಗೆ ಪಂದ್ಯ!

ರಾವಲ್ಪಿಂಡಿ: ರಂಜಾನ್‌ ಉಪವಾಸದ ಕಾರಣಕ್ಕೆ ಪಾಕಿಸ್ತಾನದ ಪ್ರೆಸಿಡೆಂಟ್‌ ಕಪ್‌ ಟೂರ್ನಿಯ ಫೈನಲ್‌ ಪಂದ್ಯವನ್ನು ಮಧ್ಯರಾತ್ರಿ 2.30ರ(ಭಾರತೀಯ ಕಾಲಮಾನ ಪ್ರಕಾರ 3 ಗಂಟೆ) ವರೆಗೂ ಆಡಿಸಲಾಗುತ್ತಿದೆ. ಮಾ.4ಕ್ಕೆ ಸ್ಟೇಟ್‌ಬ್ಯಾಂಕ್‌ ಹಾಗೂ ಪಿಟಿವಿ ನಡುವೆ ಪಂದ್ಯ ಆರಂಭಗೊಂಡಿದೆ. ಆದರೆ ಈ ಪಂದ್ಯ ಹಗಲು ಹೊತ್ತಿನ ಬದಲು ರಾತ್ರಿ 7.30ಕ್ಕೆ ಆರಂಭಿಸಲಾಗುತ್ತಿದೆ. ಸೂರ್ಯೋದಯದಿಂದ ಸೂರ್ಯಾಸ್ತಮಾನದ ವರೆಗೂ ಆಟಗಾರರು ಉಪವಾಸ ನಿರತರಾಗಿರುತ್ತಾರೆ. ಈ ಸಮಯದಲ್ಲಿ ಅನ್ನ-ಆಹಾರ ತ್ಯಜಿಸಿರುತ್ತಾರೆ. ಇದೇ ಕಾರಣಕ್ಕೆ ಪಂದ್ಯವನ್ನು ಸಂಜೆ ಬಳಿಕ ನಡೆಸಲಾಗುತ್ತಿದೆ.

ಇದನ್ನೂ ಓದಿ: 'ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಗಢಾಫಿ ಸ್ಟೇಡಿಯಂ': ಪಾಕ್‌ ಕಾಲೆಳೆದ ನೆಟ್ಟಿಗರು!

ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿ: ಪಾಕ್‌ ತಂಡದಿಂದ ಆಜಂ, ರಿಜ್ವಾನ್‌ಗೆ ಕೊಕ್‌

ಲಾಹೋರ್‌: ಮಾರ್ಚ್ 16ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್‌ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಹಿರಿಯ ಆಟಗಾರರಾದ ಬಾಬರ್‌ ಆಜಂ ಹಾಗೂ ಮೊಹಮ್ಮದ್‌ ರಿಜ್ವಾನ್‌ ತಂಡದಿಂದ ಹೊರಬಿದ್ದಿದ್ದಾರೆ. 

ರಿಜ್ವಾನ್‌ ಬಳಿ ಇದ್ದ ನಾಯಕತ್ವ ಹೊಣೆಗಾರಿಕೆಯನ್ನು ಸಲ್ಮಾನ್‌ ಆಘಾಗೆ ವಹಿಸಲಾಗಿದೆ. ಅನುಭವಿ ಶದಾಬ್‌ ಖಾನ್‌ ತಂಡಕ್ಕೆ ಮರಳಿದ್ದು, ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ಹೊರತಾಗಿಯೂ ಏಕದಿನ ತಂಡದ ನಾಯಕನಾಗಿ ರಿಜ್ವಾನ್‌ ಮುಂದುವರಿಯಲಿದ್ದಾರೆ. ಆಜಂ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ನ್ಯೂಜಿಲೆಂಡ್‌ನ ವಿವಿಧ ಕ್ರೀಡಾಂಗಣಗಳಲ್ಲಿ ಮಾ.16, 18, 21, 23, ಹಾಗೂ 26ರಂದು ಟಿ20 ಪಂದ್ಯಗಳು, ಮಾ.29, ಏ.2 ಹಾಗೂ ಏ.5ರಂದು ಏಕದಿನ ಪಂದ್ಯಗಳು ನಡೆಯಲಿವೆ.