ಜುಲೈ 23 ರಿಂದ ಆರಂಭವಾಗಲಿರುವ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ, ಐಪಿಎಲ್ ಚಾಂಪಿಯನ್ ಆರ್‌ಸಿಬಿ ತಂಡದ ಪ್ರಮುಖ ಆಟಗಾರರನ್ನು ಕಡೆಗಣಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದ್ದು, ಆಯ್ಕೆ ಸಮಿತಿಯ ನಿರ್ಧಾರಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಬೆಂಗಳೂರು: ಜಿಂಬಾಬ್ವೆ ಎದುರು ಇದೇ ಜುಲೈ 23ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿಯು ಜುಲೈ 06ರ ಸಂಜೆ ಪ್ರಕಟಿಸಿದೆ. ಈ ಪೈಕಿ ತಂಡದಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಇದೆಲ್ಲದರ ಹೊರತಾಗಿಯೂ ಮತ್ತೊಮ್ಮೆ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಾವೊಬ್ಬ ಆಟಗಾರನಿಗೂ ತಂಡದಲ್ಲಿ ಸ್ಥಾನ ನೀಡದೇ ಕಡೆಗಣಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಯೋಗ್ಯತೆ ಇರುವ ಈ ನಾಲ್ವರು ಆಟಗಾರರನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್ ಕಡೆಗಣಿಸಿದ್ದು ಯಾಕೆ ಎನ್ನುವುದು ಅಭಿಮಾನಿಗಳ ಪಾಲಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ.
ಇದೀಗ ಜಿಂಬಾಬ್ವೆ ಪ್ರವಾಸಕ್ಕೆ 15 ಆಟಗಾರರನ್ನೊಳಗೊಂಡ ಭಾರತ ತಂಡ ಪ್ರಕಟವಾಗಿದ್ದು, ಶ್ರೇಯಸ್ ಅಯ್ಯರ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದಲ್ಲಿರುವ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸಲಾಗಿದೆ. ಇದಷ್ಟೇ ಅಲ್ಲದೇ ಅನುಭವಿ ಆಲ್ರೌಂಡರ್ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್ ಹಾಗೂ ಪ್ರಸಿದ್ದ್ ಕೃಷ್ಣ ಅವರನ್ನು ಯಾವ ಕಾರಣಕ್ಕೆ ಕೈಬಿಡಲಾಗಿದೆ ಎನ್ನುವ ಪ್ರಶ್ನೆಗೆ ಬಿಸಿಸಿಐ ಅಯ್ಕೆ ಸಮಿತಿ ಯಾವುದೇ ಉತ್ತರ ನೀಡಿಲ್ಲ.
ಇನ್ನುಳಿದಂತೆ ಅಶೋಕ್ ಶರ್ಮಾ ಹಾಗೂ ಯಶ್ ಠಾಕೂರ್ ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಮ್ಯಾಚ್ ಫಿನಿಶರ್ ರಿಂಕ್ ಸಿಂಗ್‌ಗೆ ಭಾರತ 15ರ ಬಳಗದಲ್ಲಿ ಸ್ಥಾನ ಸಿಕ್ಕಿದೆ. ಇದಷ್ಟೇ ಅಲ್ಲದೇ 2023ರ ಏಷ್ಯನ್ ಗೇಮ್ಸ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಪ್ರಭ್‌ಸಿಮ್ರನ್ ಸಿಂಗ್ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಇನ್ನು ಹರ್ಷ್ ದುಬೆ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಮತ್ತೆ ಆರ್‌ಸಿಬಿಯ ನಾಲ್ವರು ಆಟಗಾರರಿಗೆ ಅನ್ಯಾಯ ಮಾಡಿದ ಆಯ್ಕೆ ಸಮಿತಿ!
ಇನ್ನು ಕೆಲ ತಿಂಗಳ ಹಿಂದಷ್ಟೇ ತೆರೆ ಕಂಡ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಆಲ್ರೌಂಡರ್ ಕೃನಾಲ್ ಪಾಂಡ್ಯ, ನಾಯಕ ರಜತ್ ಪಾಟೀದಾರ್ ಹಾಗೂ ಯುವ ವೇಗಿ ರಸಿಕ್ ಸಲಂ ಧರ್ ಪ್ರಮುಖ ಪಾತ್ರ ವಹಿಸಿದ್ದರು. ಈ ಎಲ್ಲಾ ಆಟಗಾರರು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಎಲ್ಲಾ ಆಟಗಾರರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಹೀಗಿದ್ದೂ ಈ ನಾಲ್ವರು ಆಟಗಾರರನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸಿದೆ. ಇದು ಈ ನಾಲ್ವರು ಆಟಗಾರರಿಗೆ ಅಜಿತ್ ಅಗರ್ಕರ್ ಹಾಗೂ ಗೌತಮ್ ಗಂಭೀರ್ ಜೋಡಿ ಮಾಡಿದ ಅನ್ಯಾಯ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಅತ್ಯಂತ ಶಿಸ್ತುಬದ್ದ ದಾಳಿ ನಡೆಸಿದ ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ರಸಿಕ್ ಸಲಂ ಧರ್ ಅವರನ್ನು ಕೈಬಿಟ್ಟು, 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ 12ರ ಎಕನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದ ಮಯಾಂಕ್ ಯಾದವ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎನ್ನುವ ಫ್ಯಾನ್ಸ್‌ಗಳ ಪ್ರಶ್ನೆ ಚಿದಂಬರ ರಹಸ್ಯವಾಗಿಯೇ ಉಳಿದಿದೆ.
ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ ಹೀಗಿದೆ:
ಶ್ರೇಯಸ್ ಅಯ್ಯರ್(ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ(ಉಪನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾನ್ಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್, ಪ್ರಭ್‌ಸಿಮ್ರನ್ ಸಿಂಗ್(ವಿಕೆಟ್ ಕೀಪರ್).


