ಮುಂಬರುವ ಟಿ20 ವಿಶ್ವಕಪ್‌ಗೆ ಸಂಜು ಸ್ಯಾಮ್ಸನ್ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಗಿಲ್ ಬದಲಿಗೆ ಸ್ಥಾನ ಪಡೆದ ಸಂಜು ಆಯ್ಕೆಯನ್ನು ಮಾಜಿ ಕ್ರಿಕೆಟಿಗ ಉತ್ತಪ್ಪ ಬೆಂಬಲಿಸಿದರೆ, ಇಶಾನ್ ಕಿಶನ್ ಕೂಡ ಆರಂಭಿಕ ಸ್ಥಾನದ ರೇಸ್‌ನಲ್ಲಿದ್ದಾರೆ.

ಬೆಂಗಳೂರು: ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸ್ಥಾನ ಪಡೆದಿದ್ದಾರೆ. ಫಾರ್ಮ್‌ ಕಂಡುಕೊಳ್ಳಲು ಹೆಣಗಾಡುತ್ತಿರುವ ಶುಭಮನ್ ಗಿಲ್ ಬದಲಿಗೆ ಸಂಜು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜು ಸ್ಯಾಮ್ಸನ್ ಆರಂಭಿಕ ಬ್ಯಾಟರ್ ಜತೆಗೆ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿಯೂ ಆಯ್ಕೆಯಾಗಿದ್ದಾರೆ. ಕೇರಳ ಮೂಲದ ಆಟಗಾರನಿಗೆ ಬ್ಯಾಕಪ್ ಆಗಿ ಇಶಾನ್ ಕಿಶನ್ ಕೂಡ ತಂಡದಲ್ಲಿದ್ದಾರೆ. ಇದೇ ಕಾರಣಕ್ಕೆ ವಿಕೆಟ್ ಕೀಪರ್ ಕಂ ಮ್ಯಾಚ್ ಫಿನಿಶರ್ ಆಗಿದ್ದ ಜಿತೇಶ್ ಶರ್ಮಾ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಮತ್ತು ವಿಜಯ್ ಹಜಾರೆ ಟೂರ್ನಮೆಂಟ್‌ನಲ್ಲಿ ಕಿಶನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗೆ ಆಡುತ್ತಿರುವ ಕಿಶನ್ ಅವರನ್ನು ಓಪನರ್ ಮಾಡಬೇಕೆಂಬ ವಾದವೂ ಜೋರಾಗುತ್ತಿದೆ.

ರಾಬಿನ್ ಉತ್ತಪ್ಪ ಪರ ಬ್ಯಾಟ್ ಬೀಸಿದ ಉತ್ತಪ್ಪ

ಇದೆಲ್ಲದರ ನಡುವೆ ಸಂಜು ಓಪನರ್ ಆಗಬೇಕೆಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಾದಿಸಿದ್ದಾರೆ. ಈ ಹಿಂದೆ ಕೇರಳ ಪರವೂ ಆಡಿದ್ದ ಉತ್ತಪ್ಪ 'ಏನೇ ಆದ್ರೂ, ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್‌ನಲ್ಲಿ ಖಂಡಿತವಾಗಿಯೂ ಇನ್ನಿಂಗ್ಸ್ ಆರಂಭಿಸಬೇಕು. 2024ರ ವಿಶ್ವಕಪ್ ನಂತರ ಭಾರತದ ಪರ ಟಿ20 ಪಂದ್ಯಗಳಲ್ಲಿ ಸತತವಾಗಿ ಶತಕ ಬಾರಿಸಿದ ಆಟಗಾರ ಸಂಜು. ಮೊದಲು ಬಾಂಗ್ಲಾದೇಶದ ವಿರುದ್ಧ, ನಂತರ ದಕ್ಷಿಣ ಆಫ್ರಿಕಾ ವಿರುದ್ಧ. ಯುವ ಆಟಗಾರರಿಗೆ ಸಂಜು ಸ್ಫೂರ್ತಿಯಾಗಬಲ್ಲರು,'' ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಮುನ್ನ, ಇಶಾನ್ ಕಿಶನ್ ಅವರ ಬಾಲ್ಯದ ಕೋಚ್ ಮತ್ತು ಮಾರ್ಗದರ್ಶಕರಾದ ಉತ್ತಮ ಮಜುಂದಾರ್, ಕಿಶನ್ ಓಪನರ್ ಆಗುವುದೇ ಉತ್ತಮ ಎಂದು ಹೇಳಿದ್ದರು. ಆಡುವ ಹನ್ನೊಂದರ ಬಳಗವನ್ನು ತಂಡದ ಆಡಳಿತ ಮಂಡಳಿ ನಿರ್ಧರಿಸಬೇಕು. ಆದರೂ, ಪವರ್‌ಪ್ಲೇನಲ್ಲಿ ಅಭಿಷೇಕ್ ಜೊತೆ ಇಶಾನ್ ಕಿಶನ್ ಹೆಚ್ಚು ಪರಿಣಾಮಕಾರಿ ಎಂದು ನನಗೆ ಅನಿಸುತ್ತದೆ. ಮಧ್ಯಮ ಓವರ್‌ಗಳಲ್ಲಿ ಕಿಶನ್ ಬ್ಯಾಟಿಂಗ್ ಮಾಡಬಲ್ಲರಾದರೂ, ಐಪಿಎಲ್ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಓಪನರ್ ಆಗಿ ತಾನು ಎಷ್ಟು ಡೇಂಜರಸ್‌ ಎಂಬುದನ್ನು ಕಿಶನ್ ಸಾಬೀತುಪಡಿಸಿದ್ದಾರೆ ಎಂದು ಉತ್ತಮ ಮಜುಂದಾರ್ ಟೆಲಿಕಾಂ ಏಷ್ಯಾ ಸ್ಪೋರ್ಟ್ಸ್‌ಗೆ ತಿಳಿಸಿದರು.

ಟಿ20 ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅಭಿಷೇಕ್ ಶರ್ಮಾ ಜೊತೆ ಸಂಜು ಸ್ಯಾಮ್ಸನ್ ಅವರೇ ಓಪನರ್ ಆಗುವ ನಿರೀಕ್ಷೆಯಿದೆ. ಆದರೆ, ಸಂಜು ನಿರಾಸೆ ಮೂಡಿಸಿದರೆ, ಮುಷ್ತಾಕ್ ಅಲಿ ಟ್ರೋಫಿ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ವಿರುದ್ಧ ಆರನೇ ಕ್ರಮಾಂಕದಲ್ಲಿ ಬಂದು 33 ಎಸೆತಗಳಲ್ಲಿ ಶತಕ ಸಿಡಿಸಿದ ಇಶಾನ್ ಕಿಶನ್ ಅವರನ್ನೂ ಓಪನರ್ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಸಂಜುಗೆ ನಿರ್ಣಾಯಕವಾಗಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:

ಸೂರ್ಯಕುಮಾರ್ ಯಾದವ್(ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಇಶಾನ್ ಕಿಶನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್(ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್.

ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 07ರಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಭಾರತ ಮತ್ತೊಮ್ಮೆ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.