ಶಿವಮೊಗ್ಗದ ಹೆದ್ದಾರಿಪುರದಲ್ಲಿ ನಡೆದ ಐದನೇ ಸೀಸನ್ ಹೆದ್ದಾರಿಪುರ ಪ್ರೀಮಿಯರ್ ಲೀಗ್ (HPL) ಕ್ರಿಕೆಟ್ ಟೂರ್ನಿಯಲ್ಲಿ, ಸಮನ್ವಯ ಸ್ಟಾರ್ಸ್ ಕೊಡಸೆ-ಗಿಣಿಸೆ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್‌ನಲ್ಲಿ ಕಲ್ಲೂರು ಕಲಿಗಳ ತಂಡವನ್ನು 25 ರನ್‌ಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಶಿವಮೊಗ್ಗ: ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರದಲ್ಲಿ ಮೂರು ದಿನಗಳ ಕಾಲ ನಡೆದ ಐದನೇ ಸೀಸನ್ ಹೆದ್ದಾರಿಪುರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸಮನ್ವಯ ಸ್ಟಾರ್ಸ್ ಕೊಡಸೆ-ಗಿಣಿಸೆ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಫೈನಲ್‌ನಲ್ಲಿ ಶ್ರೀರಾಮ್ ಕಲ್ಲೂರು ಕಲಿಗಳ ಎದುರು ಸಮನ್ವಯ ಸ್ಟಾರ್ಸ್ ತಂಡವು 25 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.
ಹೆದ್ದಾರಿಪುರ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಈ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯನ್ನು ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಕಣ್ತುಂಬಿಕೊಂಡರು. ಕಳೆದ ಆವೃತ್ತಿಯ ಹೆದ್ದಾರಿಪುರ ಪ್ರೀಮಿಯರ್ ಲೀಗ್‌ನಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿದ್ದ ಸಮನ್ವಯ ಸ್ಟಾರ್ಸ್ ತಂಡವು, ಈ ಬಾರಿ ಹಿಂದಿನ ತಪ್ಪು ತಿದ್ದಿಕೊಂಡು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಯಿತು. ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿದ್ದ ಶ್ರೀರಾಮ್ ಕಲ್ಲೂರು ಕಲಿಗಳು, ಫೈನಲ್ ಒತ್ತಡವನ್ನು ನಿಭಾಯಿಸುವಲ್ಲಿ ಎಡವಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಸಮನ್ವಯ ಸ್ಟಾರ್ಸ್ ತಂಡವು 30 ಸಾವಿರ ರುಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿಗೆ ಮುತ್ತಿಕ್ಕಿದರೆ, ರನ್ನರ್-ಅಪ್ ಕಲ್ಲೂರು ಕಲಿಗಳು ತಂಡವು 25,000 ರುಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿ ತಮ್ಮದಾಗಿಸಿಕೊಂಡಿತು.
ಏಕಪಕ್ಷೀಯವಾಗಿ ನಡೆದ ಫೈನಲ್ ಪಂದ್ಯ
ನವೀನ್, ಸತೀಶ್‌ಚಂದ್ರ ಕೊಡಸೆ ಮಾಲೀಕತ್ವದ ಸಮನ್ವಯ ಸ್ಟಾರ್ಸ್ ತಂಡವು ಫೈನಲ್‌ನಲ್ಲಿ ಸಚಿನ್ ಮೂಗುಡ್ತಿ ಸ್ಪೋಟಕ ಬ್ಯಾಟಿಂಗ್(35ರನ್ 13 ಎಸೆತ) ನೆರವಿನಿಂದ ನಿಗದಿತ 4 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 57 ರನ್ ಕಲೆಹಾಕಿತು. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆದಿತ್ಯ ಡಿ ಗೌಡ ನೇತೃತ್ವದ ಕಲ್ಲೂರು ಕಲಿಗಳ ತಂಡ, ಸಮನ್ವಯ ಸ್ಟಾರ್ಸ್ ತಂಡದ ಮಾರಕ ದಾಳಿಗೆ ತತ್ತರಿಸಿ 4 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 32 ರನ್ ಗಳಿಸಲಷ್ಟೇ ಶಕ್ತವಾಯಿತು. ಕಲ್ಲೂರು ಕಲಿಗಳ ಪರ ನಿತಿನ್ ಕಲ್ಲೂರು ಅಜೇಯ 28 ರನ್ ಹಾಗೂ ಶ್ರೀನಾಥ್ ಕಗಲಿಜೆಡ್ಡು 2 ರನ್ ಗಳಿಸಿದ್ದು ಬಿಟ್ಟರೇ ಉಳಿದ್ಯಾವ ಬ್ಯಾಟರ್‌ಗಳು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಫೈನಲ್‌ನಲ್ಲಿ ಸಮನ್ವಯ ಸ್ಟಾರ್ಸ್ ಪರ ಬಸವರಾಜ್ ಕೊಮಲಾಪುರ 3 ರನ್ ನೀಡಿ 3 ವಿಕೆಟ್ ಪಡೆದರೆ, ಆದಿ ಗೌಡ ಹೆದ್ದಾರಿಪುರ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾದರು.

ಇನ್ನುಳಿದಂತೆ ಆದರ್ಶ ಗೌಡ ನೇತೃತ್ವದ ತೊರೆಗದ್ದೆ ಬ್ರದರ್ಸ್ ತಂಡವು ಎರಡನೇ ರನ್ನರ್‌ಅಪ್ ಆದರೆ, ಹರಿಪ್ರಸಾದ್ ಹಾಗೂ ಕವಿರಾಜ್ ಗೌಡ ಹೆದ್ದಾರಿಪುರ ಮಾಲೀಕತ್ವದ ಶ್ರೀ ಮಾಸ್ತಿಯಮ್ಮ ಪುನೀತ್‌ಗೌಡ ಫ್ರೆಂಡ್ಸ್ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇನ್ನು ಟೂರ್ನಿಯಲ್ಲಿ ಎರಡು ಅರ್ಧಶತಕ ಸಹಿತ 7 ಪಂದ್ಯಗಳಲ್ಲಿ 143ರ ಸರಾಸರಿಯಲ್ಲಿ 287 ರನ್ ಹಾಗೂ 8 ವಿಕೆಟ್ ಕಬಳಿಸಿದ ಸಚಿನ್ ಮೂಗುಡ್ತಿ ಸರಣಿ ಶ್ರೇಷ್ಠ ಪ್ರಶಸ್ತಿ ಹಾಗೂ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಇನ್ನು ಪುನೀತ್‌ಗೌಡ ಫ್ರೆಂಡ್ಸ್ ತಂಡದ ನಾಯಕ ಆಶಿಕ್ ಗೌಡ ಹೆದ್ದಾರಿಪುರ 229 ರನ್ ಬಾರಿಸುವ ಮೂಲಕ ಬೆಸ್ಟ್ ಬ್ಯಾಟರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಜಂಬಳ್ಳಿ ಜಾಗ್ವರ್ಸ್ ತಂಡದ ವೇಗದ ಬೌಲರ್ ನಾಗರಾಜ ಕಗಲಿಜೆಡ್ಡು 11 ವಿಕೆಟ್ ಕಬಳಿಸುವ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು.

ಐದು ವರ್ಷದಲ್ಲಿ ಐದು ತಂಡಗಳು ಚಾಂಪಿಯನ್:
ಹೆದ್ದಾರಿಪುರ ಗ್ರಾಮಪಂಚಾಯತ್ ವ್ಯಾಪ್ತಿಯ ಲೀಗ್ ಮಾದರಿಯ ಅತ್ಯಂತ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ HPL ಟೂರ್ನಿಯಲ್ಲಿ ಐದೂ ವರ್ಷವೂ ಹೊಸ ಚಾಂಪಿಯನ್ ಉದಯಕ್ಕೆ ಸಾಕ್ಷಿಯಾಗಿದೆ. ಮೊದಲ ಸೀಸನ್‌ನಲ್ಲಿ ಪುನೀತ್‌ಗೌಡ ಫ್ರೆಂಡ್ಸ್ ಹೆದ್ದಾರಿಪುರ ತಂಡವು ಚಾಂಪಿಯನ್ ಆಗಿತ್ತು. ಎರಡನೇ ಸೀಸನ್‌ನಲ್ಲಿ ಕುಮಾರಸ್ವಾಮಿ ನೇತೃತ್ವದ ಮಹಾಶಕ್ತಿ ಫ್ರೆಂಡ್ಸ್ ಹೆದ್ದಾರಿಪುರ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಮೂರನೇ ಸೀಸನ್‌ನಲ್ಲಿ ನಿತಿನ್ ಶೆಟ್ಟಿ ಹಾಗೂ ರಫಿ ಜಂಬಳ್ಳಿ ನೇತೃತ್ವದ ಅಭ್ಯುದಯ ಸ್ಪೋರ್ಟ್ಸ್ ತಂಡವು ಪ್ರಶಸ್ತಿ ಜಯಿಸಿತ್ತು. ಇನ್ನು ಕಳೆದ ವರ್ಷ ನಡೆದ ನಾಲ್ಕನೇ ಸೀಸನ್ ಟೂರ್ನಿಯಲ್ಲಿ ಜಯಪ್ರಕಾಶ್ ಜಂಬಳ್ಳಿ ನೇತೃತ್ವದ ಜಂಬಳ್ಳಿ ಜಾಗ್ವಾರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಸಮನ್ವಯ ಸ್ಟಾರ್ಸ್ ಕೊಡಸೆ-ಗಿಣಿಸೆ ತಂಡದ ತೆಕ್ಕೆಗೆ ಚಾಂಪಿಯನ್ ಪಟ್ಟ ಜಾರಿದೆ.


