ಸ್ಯಾಮ್ ಕರ್ರನ್‌ಗೆ 5 ವಿಕೆಟ್; ಲಂಕಾ ಎದುರಿನ ಏಕದಿನ ಸರಣಿ ಇಂಗ್ಲೆಂಡ್ ಪಾಲು
* ಲಂಕಾ ಎದುರು ಏಕದಿನ ಸರಣಿ ಗೆದ್ದ ಆತಿಥೇಯ ಇಂಗ್ಲೆಂಡ್
* ಎರಡನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ
* 5 ವಿಕೆಟ್ ಕಬಳಿಸಿ ಮಿಂಚಿದ ಯುವ ವೇಗಿ ಸ್ಯಾಮ್ ಕರ್ರನ್
ಲಂಡನ್(ಜು.02): ಯುವ ವೇಗಿ ಸ್ಯಾಮ್ ಕರ್ರನ್ ಮಾರಕ ದಾಳಿ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಲಂಕಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ 8 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಇಂಗ್ಲೆಂಡ್ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಶ್ರೀಲಂಕಾ ನೀಡಿದ್ದ 242 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಜೇಸನ್ ರಾಯ್ ಹಾಗೂ ಜಾನಿ ಬೇರ್‌ಸ್ಟೋವ್ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 76 ರನ್‌ಗಳ ಜತೆಯಾಟ ನಿಭಾಯಿಸಿದರು. ಬೇರ್‌ಸ್ಟೋವ್ 29 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್ ರಾಯ್ 52 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ಇಯಾನ್ ಮಾರ್ಗನ್ ಹಾಗೂ ಜೋ ರೋಟ್ ಆಕರ್ಷಕ ಜತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಮುರಿಯದ ಮೂರನೇ ವಿಕೆಟ್‌ಗೆ ಈ ಜೋಡಿ 140 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಮಾರ್ಗನ್ ಅಜೇಯ 75 ರನ್ ಚಚ್ಚಿದರೆ, ಮತ್ತೊಂದು ತುದಿಯಲ್ಲಿ ಜೋ ರೂಟ್ 68 ರನ್ ಬಾರಿಸುವ ಮೂಲಕ ತಂಡ ಗೆಲುವಿನ ನಗೆ ಬೀರುವಂತೆ ಮಾಡಿದರು.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಶಾಕ್..!
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ತಂಡಕ್ಕೆ ಯುವ ಎಡಗೈ ವೇಗಿ ಸ್ಯಾಮ್ ಕರ್ರನ್ ಶಾಕ್ ನೀಡಿದರು. ಲಂಕಾ ತಂಡ 12 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳನ್ನು ಕರ್ರನ್ ಪೆವಿಲಿಯನ್ನಿಗಟ್ಟಿದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಧನಂಜಯ ಡಿಸಿಲ್ವಾ(91) ಹಾಗೂ ಶನಕ(47) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆ ಹಾಕಲು ನೆರವಾದರು.
ಸ್ಯಾಮ್ ಕರ್ರನ್ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 5 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಕರ್ರನ್ 48 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಡೇವಿಡ್ ವಿಲ್ಲಿ 4 ವಿಕೆಟ್ ಪಡೆದು ಲಂಕಾ ಕುಸಿತಕ್ಕೆ ಕಾರಣರಾದರು.