ನವದೆಹಲಿ(ನ.10): ಟೀಂ ಇಂಡಿಯಾದ ಮಾಜಿ ಆಟಗಾರ ಎಂ.ಎಸ್‌. ಧೋನಿ ತಮ್ಮ ವಾಸ್ತವ್ಯವನ್ನು ಮುಂಬೈಗೆ ಸ್ಥಳಾಂತರಿಸುವ ಯೋಚನೆಯಲ್ಲಿದ್ದಾರೆ. ಧೋನಿ ಮುಂಬೈನಲ್ಲಿ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. 

ಸದ್ಯ ರಾಂಚಿಯ ರಿಂಗ್‌ ರಸ್ತೆಯಲ್ಲಿನ 7 ಎಕರೆ ಜಾಗದ ಫಾರ್ಮ್‌ ಹೌಸ್‌ನಲ್ಲಿ ನೆಲೆಸಿರುವ ಧೋನಿ ಕುಟುಂಬ, ಮಹಾನಗರಿ ಮುಂಬೈಗೆ ವಿಳಾಸ ಬದಲಿಸುವ ಆಲೋಚನೆಯಲ್ಲಿದೆ. ಧೋನಿ ಪತ್ನಿ ಸಾಕ್ಷಿ ಸಿಂಗ್‌, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.

ಧೋನಿ - ಪಾಂಡ್ಯ: ತಮ್ಮ ಮುದ್ದು ಮಕ್ಕಳ ಜೊತೆ ಟೀಮ್‌ ಇಂಡಿಯಾದ ಕ್ರಿಕೆಟರ್ಸ್‌!

ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಜುಲೈ 4, 2010ರಂದು ಸಾಕ್ಷಿ ರಾವತ್ ಅವರೊಂದಿಗೆ ಡೆಹರಾಡೂನ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಈ ಜೋಡಿ ದಾಂಪತ್ಯ ಜೀವನ ಒಂದು ದಶಕ ಪೂರೈಸಿದ ಹಿನ್ನೆಲೆಯಲ್ಲಿ ಧೋನಿ ತಮ್ಮ ಕುಟುಂಬವನ್ನು ಮಹಾನಗರಿ ಮುಂಬೈಗೆ ಸ್ಥಳಾಂತರಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. 

ಭಾರತ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕರೆನಿಸಿಕೊಂಡಿದ್ದ ಎಂ ಎಸ್ ಧೋನಿ, ಟೀಂ ಇಂಡಿಯಾ ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇದೇ ಆಗಸ್ಟ್ 15ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಐಪಿಎಲ್‌ನಲ್ಲಿ ಇನ್ನು ಕೆಲಕಾಲ ಮುಂದುವರೆಸುವ ಮುನ್ಸೂಚನೆ ನೀಡಿದ್ದಾರೆ.