ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ, ಸಾಕ್ಷಿ ಧೋನಿ ಅವರು ಬೌನ್ಸ್‌ ಆದ ಚೆಂಡನ್ನು ಕ್ಯಾಚ್ ಎಂದು ಭಾವಿಸಿ ಸಂಭ್ರಮಿಸಿದರು. ಇದನ್ನು ಕಂಡ ಎಂ.ಎಸ್. ಧೋನಿ, ಅದು ವಿಕೆಟ್ ಅಲ್ಲ ಎಂದು ಮುಗುಳ್ನಗುತ್ತಲೇ ಸನ್ನೆ ಮಾಡಿ ತಿಳಿಸಿದರು. 

ಬೆಂಗಳೂರು (ಮಾ.6): ಭಾರತ ಮತ್ತು ಇಂಗ್ಲೆಂಡ್ ನಡುವೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್‌ನ ಹೈ-ವೋಲ್ಟೇಜ್ ಸೆಮಿಫೈನಲ್ ಪಂದ್ಯಕ್ಕೆ ಸಾವಿರಾರು ಪ್ರೇಕ್ಷಕರಷ್ಟೇ ಅಲ್ಲದೆ, ಕ್ರಿಕೆಟ್ ಲೋಕದ ದಿಗ್ಗಜರು ಸಾಕ್ಷಿಯಾಗಿದ್ದರು. ಭಾರತದ ಮಾಜಿ ನಾಯಕ, ಕೂಲ್ ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಕೂಡ ಪತ್ನಿ ಸಾಕ್ಷಿ ಜೊತೆಗೂಡಿ ಪಂದ್ಯವನ್ನು ಆನಂದಿಸುತ್ತಿದ್ದರು. ಈ ವೇಳೆ ನಡೆದ ಒಂದು ಮುದ್ದಾದ ಮತ್ತು ತಮಾಷೆಯ ಕ್ಷಣ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಪಂದ್ಯದ 18ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುತ್ತಿದ್ದರು. ಇಂಗ್ಲೆಂಡ್ ಬ್ಯಾಟರ್ ಸ್ಯಾಮ್ ಕರನ್ ಹೊಡೆದ ಚೆಂಡು ಬುಮ್ರಾ ಕೈಗೆ ಸೇರಿತು. ಇದನ್ನು ನೋಡಿದ ಸಾಕ್ಷಿ ಧೋನಿ, ಬುಮ್ರಾ ಕ್ಯಾಚ್ ಹಿಡಿದಿದ್ದಾರೆ ಮತ್ತು ಇಂಗ್ಲೆಂಡ್ ವಿಕೆಟ್ ಪತನವಾಗಿದೆ ಎಂದು ಭಾವಿಸಿದರು. ಕೂಡಲೇ ಸೀಟಿನಿಂದ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಲು ಶುರು ಮಾಡಿದರು.

ಆದರೆ ಅಸಲಿಗೆ, ಆ ಚೆಂಡು ಬ್ಯಾಟ್‌ಗೆ ತಗುಲಿದ ನಂತರ ನೆಲಕ್ಕೆ ಬಡಿದು ಬುಮ್ರಾ ಕೈ ಸೇರಿತ್ತು. ಅಂದರೆ ಅದು ಔಟ್ ಆಗಿರಲಿಲ್ಲ! ಸಾಕ್ಷಿ ಹೀಗೆ ಕುಣಿದಾಡುವುದನ್ನು ಕಂಡು ಅವರ ಹಿಂದೆಯೇ ನಿಂತಿದ್ದ ಧೋನಿ ಒಂದು ಕ್ಷಣ ಅಚ್ಚರಿಗೊಂಡರು. ಕೂಡಲೇ ಮುಗುಳ್ನಗುತ್ತಾ ಸಾಕ್ಷಿ ಅವರನ್ನು ಸಮಾಧಾನಪಡಿಸಿ, "ಅದು ವಿಕೆಟ್ ಅಲ್ಲ, ಬ್ಯಾಟರ್ ಔಟ್ ಆಗಿಲ್ಲ, ಸುಮ್ಮನೆ ಕುಳಿತುಕೋ" ಎಂದು ಸನ್ನೆ ಮಾಡಿದರು. ಧೋನಿ ಅವರ ಈ ಸ್ಮೈಲ್ ಮತ್ತು ಸಾಕ್ಷಿ ಅವರ ಮುಗ್ಧ ಸಂಭ್ರಮದ ವಿಡಿಯೋ ಈಗ ಅಭಿಮಾನಿಗಳ ಮನ ಗೆದ್ದಿದೆ.

Scroll to load tweet…

ಭಾರತಕ್ಕೆ ಭರ್ಜರಿ ಜಯ: ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರಾಳಿ

ಈ ರೋಚಕ ಸೆಮಿಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಹೈ-ಸ್ಕೋರಿಂಗ್ ಪಂದ್ಯದಲ್ಲಿ ಭಾರತ ನೀಡಿದ್ದ 254 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್, 7 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಲಷ್ಟೇ ಶಕ್ತವಾಯಿತು. ಇದೀಗ ಮಾರ್ಚ್ 8ರಂದು ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ವಿಶ್ವಕಪ್ ಟ್ರೋಫಿಗಾಗಿ ಹೋರಾಡಲಿವೆ.

ಪಂದ್ಯದಲ್ಲಿ ಹಲವು ದಾಖಲೆ ಸೃಷ್ಟಿ

ಈ ಸೆಮಿಫೈನಲ್ ಪಂದ್ಯ ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾಯಿತು ಟೀಮ್ ಇಂಡಿಯಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (4 ಬಾರಿ) ಫೈನಲ್ ತಲುಪಿದ ತಂಡ ಎಂಬ ಇತಿಹಾಸ ನಿರ್ಮಿಸಿದೆ (2007, 2014, 2024 ಮತ್ತು ಈಗ 2026). ಈ ಒಂದೇ ಪಂದ್ಯದಲ್ಲಿ ಒಟ್ಟು 34 ಸಿಕ್ಸರ್‌ಗಳು ದಾಖಲಾದವು. ಇದು ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್ ಆಗಿದೆ. ಇದಕ್ಕೂ ಮುನ್ನ ಇದೇ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪಂದ್ಯದಲ್ಲಿ 31 ಸಿಕ್ಸರ್‌ಗಳು ದಾಖಲಾಗಿದ್ದವು. ಒಟ್ಟಾರೆಯಾಗಿ, ಮೈದಾನದಲ್ಲಿ ಆಟಗಾರರ ಅಬ್ಬರವಿದ್ದರೆ, ಗ್ಯಾಲರಿಯಲ್ಲಿ ಧೋನಿ ದಂಪತಿಯ ಈ 'ಕ್ಯೂಟ್' ಕ್ಷಣ ಅಭಿಮಾನಿಗಳಿಗೆ ಡಬಲ್ ಮನರಂಜನೆ ನೀಡಿದೆ.

View post on Instagram