ಟೀಂ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಸಾಯಿ ಸುದರ್ಶನ್, ದ್ರಾವಿಡ್, ಗಂಗೂಲಿ, ಕೊಹ್ಲಿ ಅವರಂತಹ ದಿಗ್ಗಜ ಆಟಗಾರರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಜೂನ್ 20 ರಂದು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಇವರು, ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರು.

ಲೀಡ್ಸ್‌: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಶುಕ್ರವಾರ ಚಾಲನೆ ಸಿಕ್ಕಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿದೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭ್‌ಮನ್ ಗಿಲ್ ಆಕರ್ಷಕ ಶತಕ ಹಾಗೂ ರಿಷಭ್ ಪಂತ್ ಅಜೇಯ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲೇ ಬೃಹತ್ ಮೊತ್ತದತ್ತ ದಾಪುಗಾಲು ಇಡುತ್ತಿದೆ. ಮೊದಲ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 359 ರನ್ ಸಿಡಿಸಿದೆ. ಇನ್ನು ಇದೇ ವೇಳೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಸಾಯಿ ಸುದರ್ಶನ್, ದಿಗ್ಗಜರ ಸಾಲಿಗೆ ಸೇರಿದ್ದಾರೆ.

ಹೌದು, ಭಾರತದ 317ನೇ ಟೆಸ್ಟ್‌ ಆಟಗಾರನಾಗಿ ಸಾಯಿ ಸುದರ್ಶನ್‌ ಪಾದಾರ್ಪಣೆ ಮಾಡಿದರು. ಅವರು ಪಾದಾರ್ಪಣೆ ಮಾಡಿದ ಜೂ.20ಕ್ಕೆ ಭಾರತೀಯ ಕ್ರಿಕೆಟ್‌ನಲ್ಲಿ ವಿಶೇಷ ಸ್ಥಾನವಿದೆ. ಇದೇ ದಿನ ಹಲವು ದಿಗ್ಗಜರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. 1996ರ ಜೂ.20ಕ್ಕೆ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, 2011ರ ಜೂ.20ಕ್ಕೆ ಕಿಂಗ್‌ಸ್ಟನ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ವಿರಾಟ್‌ ಕೊಹ್ಲಿ ಮೊದಲ ಬಾರಿ ಟೆಸ್ಟ್‌ನಲ್ಲಿ ಕಣಕ್ಕಿಳಿದಿದ್ದರು.

ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ ಸಾಯಿ: ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ ಮೊದಲ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ 91 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ರಾಹುಲ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಸಾಯಿ ಸುದರ್ಶನ್ ಕೇವಲ 4 ಎಸೆತ ಎದುರಿಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಿರಾಸೆ ಅನುಭವಿಸಿದರು. ದೇಶಿ ಕ್ರಿಕೆಟ್‌ ಹಾಗೂ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಸಾಯಿ, ಬೆನ್ ಸ್ಟೋಕ್ಸ್‌ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಜೇಮಿ ಸ್ಮಿತ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಈ ಮೂಲಕ 15 ವರ್ಷಗಳ ಬಳಿಕ ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಬ್ಯಾಟರ್ ಎನ್ನುವ ಕುಖ್ಯಾತಿಗೆ ಸಾಯಿ ಸುದರ್ಶನ್ ಪಾತ್ರರಾದರು. ಈ ಮೊದಲು 2010ರಲ್ಲಿ ವೃದ್ದಿಮಾನ್ ಸಾಹಾ ಟೆಸ್ಟ್ ಪಾದಾರ್ಪಣೆಯ ಮೊದಲ ಇನ್ನಿಂಗ್ಸ್‌ನಲ್ಲಿ ವಿಕೆಟ್ ಒಪ್ಪಿಸಿದ್ದರು.

ಟೆಸ್ಟ್‌: ಗಿಲ್‌ 2000, ರಿಷಭ್‌ 3000 ರನ್‌

ಟೆಸ್ಟ್‌ ಕ್ರಿಕೆಟ್‌ನಲ್ಲಿ ರಿಷಭ್‌ ಪಂತ್‌ 3000 ರನ್‌ ಮೈಲುಗಲ್ಲು ಸಾಧಿಸಿದರು. ಅವರು 44ನೇ ಟೆಸ್ಟ್‌ ಆಡುತ್ತಿದ್ದು, 43.04ರ ಸರಾಸರಿಯಲ್ಲಿ 3013 ರನ್‌ ಗಳಿಸಿದ್ದಾರೆ. ಗಿಲ್‌ 33ನೇ ಟೆಸ್ಟ್‌ನಲ್ಲಿ 37.41ರ ಸರಾಸರಿಯಲ್ಲಿ 2020 ರನ್‌ ಸಿಡಿಸಿದ್ದಾರೆ.

ಲೀಡ್ಸ್‌ನಲ್ಲಿ ಸೆಂಚುರಿ: ಜೈಸ್ವಾಲ್‌ ಭಾರತದ ಏಳನೇ ಆಟಗಾರ

ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ 7ನೇ ಭಾರತೀಯ ಆಟಗಾರ ಯಶಸ್ವಿ ಜೈಸ್ವಾಲ್‌. ಈ ಮೊದಲು ವಿಜಯ್‌ ಮಂಜ್ರೇಕರ್‌(1952), ಮನ್ಸೂರ್ ಅಲಿ ಖಾನ್‌ ಪಟೌಡಿ(1967), ದಿಲೀಪ್‌ ವೆಂಕ್‌ಸರ್ಕಾರ್‌(1986), ರಾಹುಲ್‌ ದ್ರಾವಿಡ್‌(2022), ಸೌರವ್‌ ಗಂಗೂಲಿ(2002), ಸಚಿನ್ ತೆಂಡುಲ್ಕರ್(2002) ಶತಕ ಬಾರಿಸಿದ್ದರು.

ರಾಹುಲ್‌-ಜೈಸ್ವಾಲ್‌ ದಾಖಲೆಯ ಆರಂಭ

ರಾಹುಲ್‌-ಜೈಸ್ವಾಲ್‌ ಜೋಡಿ ಮೊದಲ ವಿಕೆಟ್‌ಗೆ 24.5 ಓವರ್‌ಗಳಲ್ಲಿ 91 ರನ್‌ ಜೊತೆಯಾಟವಾಡಿತು. ಇದು ಭಾರತೀಯ ಜೋಡಿ ಲೀಡ್ಸ್‌ನಲ್ಲಿ ಮೊದಲ ವಿಕೆಟ್‌ಗೆ ಗಳಿಸಿದ ಗರಿಷ್ಠ ರನ್‌. ಈ ಹಿಂದೆ 1986ರಲ್ಲಿ ಸುನಿಲ್ ಗವಾಸ್ಕರ್‌ ಹಾಗೂ ಕೆ.ಶ್ರೀಕಾಂತ್‌ ಮೊದಲ ವಿಕೆಟ್‌ಗೆ 64 ರನ್‌ ಸೇರಿಸಿದ್ದರು. ಇನ್ನು, 2012ರ ಬಳಿಕ ಲೀಡ್ಸ್‌ನಲ್ಲಿ ಮೊದಲ ದಿನದಾಟದ ಮೊದಲ 20 ಓವರ್‌ ವಿಕೆಟ್‌ ನಷ್ಟವಿಲ್ಲದೆ ಆಡಿದ ಮೊದಲ ಪ್ರವಾಸಿ ತಂಡ ಎಂಬ ಖ್ಯಾತಿಗೂ ಪಾತ್ರವಾಯಿತು. ಈ ಮೊದಲು ದ.ಆಫ್ರಿಕಾದ ಗ್ರೇಮ್‌ ಸ್ಮಿತ್‌-ಆಲ್ವಿರೊ ಪೀಟರ್ಸನ್‌ ಈ ಸಾಧನೆ ಮಾಡಿದ್ದರು.