ಬಿಸಿಸಿಐ ಅಧ್ಯಕ್ಷ ಸ್ಥಾನದ ರೇಸ್‌ನಿಂದ ಸಚಿನ್ ತೆಂಡೂಲ್ಕರ್ ಹಿಂದೆ ಸರಿದಿದ್ದಾರೆ. ವ್ಯಾವಹಾರಿಕ ಕೆಲಸಗಳಲ್ಲಿ ಬ್ಯುಸಿಯಾಗಿರುವ ಕಾರಣ ಸಮಯ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 28 ರಂದು ಬಿಸಿಸಿಐ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಮುಂಬೈ: ಭಾರತೀಯ ಕ್ರಿಕೆಟ್ ಮಂಡಳಿಯ ಹೊಸ ಅಧ್ಯಕ್ಷರು ಯಾರು ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆ ಮಾಡಿದೆ. ಮಾಜಿ ಅಧ್ಯಕ್ಷ ರೋಜರ್ ಬಿನ್ನಿ ಅವರು ಹುದ್ದೆಯಿಂದ ನಿವೃತ್ತರಾದ ನಂತರ ಈಗ ಯಾರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಬಿಸಿಸಿಐ ಹೊಸ ಅಧ್ಯಕ್ಷರಾಗುತ್ತಾರೆ ಎಂಬ ಚರ್ಚೆಗಳು ಹುಟ್ಟಿಕೊಂಡಿದ್ದವು, ಆದರೆ ಈ ಕುರಿತಂತೆ ಇದೀಗ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ.
ಸಚಿನ್ ತೆಂಡೂಲ್ಕರ್ ಹೇಳಿದ್ದೇನು?
ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ತಮ್ಮ ಆಪ್ತರಿಗೆ ತಿಳಿಸಿದ್ದಾರೆ. ಸೆಪ್ಟೆಂಬರ್ 28 ರಂದು ಭಾರತೀಯ ಕ್ರಿಕೆಟ್ ಮಂಡಳಿಯ 94 ನೇ ವಾರ್ಷಿಕ ಮಹಾಸಭೆ ನಡೆಯಲಿದೆ. ಈ ಸಭೆಯಲ್ಲಿ ಮಂಡಳಿಯ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ.
ರೋಜರ್ ಬಿನ್ನಿ ನಂತರ ಯಾರು ಅಧ್ಯಕ್ಷರು?
ಮಾಜಿ ಆಟಗಾರ ರೋಜರ್ ಬಿನ್ನಿ ಅವರ ನಂತರ ಭಾರತದ ಮಾಜಿ ಆಟಗಾರರೇ ಅಧ್ಯಕ್ಷರಾಗಿ ಆಯ್ಕೆಯಾಗಬೇಕು ಎಂಬ ನಿರೀಕ್ಷೆ ಇತ್ತು. ಹೀಗಾಗಿ ಸಚಿನ್ ತೆಂಡೂಲ್ಕರ್ ಅವರ ಹೆಸರು ಮಾಧ್ಯಮಗಳಲ್ಲಿ ಚರ್ಚೆಯಾಗತೊಡಗಿತು. ಪ್ರಸ್ತುತ ಸಚಿನ್ ಅವರಿಗೆ ಸಮಯ ನೀಡಲು ಸಾಧ್ಯವಾಗದ ಕಾರಣ ಅವರು BCCI ಅಧ್ಯಕ್ಷರಾಗಿ ಕೆಲಸ ಮಾಡಲು ಆಸಕ್ತಿ ತೋರಿಸಿಲ್ಲ ಎಂದು ವರದಿಯಾಗಿದೆ. ರೋಜರ್ ಬಿನ್ನಿ ನಿವೃತ್ತಿಯ ಬೆನ್ನಲ್ಲೇ ರಾಜೀವ್ ಶುಕ್ಲಾ ಬಿಸಿಸಿಐ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವ್ಯಾವಹಾರಿಕ ಕೆಲಸಗಳಲ್ಲಿ ಸಚಿನ್ ಬ್ಯುಸಿ
ವ್ಯಾವಹಾರಿಕ ಕೆಲಸಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ಯುಸಿಯಾಗಿರುವುದರಿಂದ BCCI ಅಧ್ಯಕ್ಷ ಸ್ಥಾನಕ್ಕೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. BCCI ಅಧ್ಯಕ್ಷ ಸ್ಥಾನಕ್ಕೆ ವಿಶೇಷವಾಗಿ ಮಾಜಿ ಆಟಗಾರರ ಹೆಸರುಗಳನ್ನು ಪರಿಗಣಿಸಲಾಗುತ್ತಿದೆ. ಆದರೆ ಈ ರೇಸ್‌ನಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳಲ್ಲಿ ಕೆಲವರು ಆಸಕ್ತಿ ಹೊಂದಿದ್ದು, ಅವರು ರೇಸ್‌ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಸೆ.28ಕ್ಕೆ ಬಿಸಿಸಿಐ, ಐಪಿಎಲ್ ನೂತನ ಅಧ್ಯಕ್ಷರ ಆಯ್ಕೆ
ಮುಂಬೈ: ಬಿಸಿಸಿಐ ವಾರ್ಷಿಕ ಮಹಾಸಭೆ ಸೆ.28ರಂದು ನಡೆಯಲಿದ್ದು, ಅಂದೇ ಹೊಸ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. 2022ರಿಂದ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಅವರಿಗೆ ಇತ್ತೀಚೆಗೆ 70 ವರ್ಷ ಪೂರ್ಣಗೊಂಡ ಕಾರಣ ಹುದ್ದೆ ತೊರೆದಿದ್ದರು. ಹೀಗಾಗಿ ರಾಜೀವ್ ಶುಕ್ಲಾ ಹಂಗಾಮಿಯಾಗಿ ನೇಮಕ ಗೊಂಡಿದ್ದರು. ಹೊಸದಾಗಿ ನಡೆಯಲಿರುವ ಚುನಾವಣೆಯಲ್ಲಿ ಶುಕ್ಲಾ ಕೂಡಾ ಸ್ಪರ್ಧಿಸುವ ಸಾಧ್ಯತೆಯಿದೆ.
ಇನ್ನು, ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ 6 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆ ಹೆಚ್ಚು. ಹೀಗಾಗಿ ಬಿಸಿಸಿಐ ಅಧ್ಯಕ್ಷರ ಜೊತೆಗೆ ಐಪಿಎಲ್‌ಗೂ ಹೊಸ ಮುಖ್ಯಸ್ಥರ ನೇಮಕಗೊಳ್ಳಲಿದೆ. ಆದರೆ ಬಿಸಿಸಿಐ ಕಾರ್ಯದರ್ಶಿಯಾಗಿರುವ ದೇವಜಿತ್ ಸೈಕಿಯಾ, ಖಜಾಂಚಿ ಪ್ರಬ್‌ಪೇಜ್ ಭಾಟಿಯಾ, ಜಂಟಿ ಕಾರ್ಯದರ್ಶಿಯಾಗಿರುವ ರೋಹನ್ ದೇಸಾಯಿ ಕೂಡಾ ಸ್ಥಾನದಲ್ಲಿ ಮುಂದುವರಿಯಬಹುದು ಎಂದು ತಿಳಿದುಬಂದಿದೆ.
ಐಸಿಸಿ ಮಹಿಳಾ ವಿಶ್ವಕಪ್ ಉದ್ಘಾಟನೆಗಿಲ್ಲ ಪಾಕಿಸ್ತಾನ?
ಸೆಪ್ಟೆಂಬರ್ 30ರಂದು ಗುವಾಹಟಿಯಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನ ತಂಡ ಅಥವಾ ಅದರ ನಾಯಕಿ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಭಾರತ-ಪಾಕ್ ಸಂಬಂಧ ಸರಿಯಿಲ್ಲದ ಕಾರಣ, ಟೂರ್ನಿಯಲ್ಲಿ ಪಾಕ್ ತನ್ನೆಲ್ಲಾ ಪಂದ್ಯಗಳನ್ನು ಭಾರತದ ಹೊರಗಡೆ ಅಂದರೆ ಕೊಲಂಬೊದಲ್ಲಿ ಆಡಲಿದೆ. ವರದಿಗಳ ಪ್ರಕಾರ, ಪಾಕ್ ತಂಡ ಉದ್ಘಾಟನಾ ಸಮಾರಂಭದಲ್ಲೂ ಪಾಲ್ಗೊಳ್ಳಲ್ಲ ಎಂದು ತಿಳಿದುಬಂದಿದೆ.
