ಟಿ20 ಮಾದರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ದುಬೈನಲ್ಲಿ ಆರಂಭ. 8 ತಂಡಗಳು, 19 ಪಂದ್ಯಗಳು, 20 ದಿನಗಳ ರೋಚಕ ಕ್ರಿಕೆಟ್ ಹಬ್ಬ. ಭಾರತ-ಪಾಕಿಸ್ತಾನ ಮುಖಾಮುಖಿಗೆ ಕುತೂಹಲ.

ದುಬೈ: ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ, ಬಹುನಿರೀಕ್ಷಿತ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದೆ. ಭಾರತ, ಪಾಕಿಸ್ತಾನ ಸೇರಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ಯುಎಇ ದೇಶದ 2 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಟೂರ್ನಿಯಲ್ಲಿ 20 ದಿನಗಳ ಕಾಲ ಒಟ್ಟು 19 ಪಂದ್ಯಗಳು ನಡೆಯಲಿವೆ.

ಸೆ.28ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಮಂಗಳವಾರ ಅಫ್ಘಾನಿಸ್ತಾನಕ್ಕೆ ಹಾಂಕಾಂಗ್ ಸವಾಲು ಎದುರಾಗಲಿದೆ. ಹಾಲಿ ಚಾಂಪಿಯನ್ ಭಾರತ ತಂಡ ಬುಧವಾರ ಯುಎಇ ವಿರುದ್ದ ತನ್ನ ಮೊದಲ ಪಂದ್ಯವಾಡಲಿದೆ. ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮಾನ್ 'ಎ' ಗುಂಪಿನಲ್ಲಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಹಾಂಕಾಂಗ್ 'ಬಿ' ಗುಂಪಿನಲ್ಲಿವೆ. ಪ್ರತಿ ತಂಡಗಳು ಗುಂಪು ಹಂತದಲ್ಲಿ ಒಮ್ಮೆ ಪರಸ್ಪರ ಸೆಣಸಾಡಲಿವೆ. ಗುಂಪಿನ ಅಗ್ರ-2 ತಂಡಗಳು ಸೂಪರ್ -4 ಹಂತ ಪ್ರವೇಶಿಸಲಿವೆ. ಸೂಪರ್ -4ನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.YouTube video player

3ನೇ ಬಾರಿ ಟಿ20 ಮಾದರಿ: ಈ ಬಾರಿ ಟೂರ್ನಿ ಟಿ20 ಮಾದರಿಯಲ್ಲಿ ನಡೆಯಲಿವೆ. 1984ರಲ್ಲಿ ಏಷ್ಯಾಕಪ್ ಆರಂಭಗೊಂಡಿದ್ದು, ಏಕದಿನ ಮಾದರಿಯಲ್ಲಿ ನಡೆ ಯುತ್ತಿದ್ದವು. 2016ರಿಂದ ಪ್ರತಿ ಆವೃತ್ತಿಗೆ ಆಟದ ಮಾದರಿ ಬದಲಾಗುತ್ತಿದೆ. 2016ರಲ್ಲಿ ಟಿ20, 2018 ರಲ್ಲಿ ಏಕದಿನ, 2022ರಲ್ಲಿ ಟಿ20, 2023ರಲ್ಲಿ ಏಕದಿನ ಮಾದರಿಯಲ್ಲಿ ಟೂರ್ನಿ ನಡೆದಿತ್ತು. 14 ಬಾರಿ ಏಕದಿನ, 2 ಬಾರಿ ಟಿ20 ಮಾದರಿಯಲ್ಲಿ ನಡೆದಿದೆ. 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಆಯೋಜಕರು ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ನಡೆಸಲು ಆಯೋಜಕರು ತೀರ್ಮಾನಿಸಿದ್ದಾರೆ.

ಏಷ್ಯಾಕಪ್‌ನಲ್ಲಿ ಇದೇ ಮೊದಲ ಬಾರಿ 8 ತಂಡ: ಏಷ್ಯಾಕಪ್ ಇತಿಹಾಸದಲ್ಲೇ ಮೊದಲ ಬಾರಿ 8 ತಂಡಗಳು ಕಣಕ್ಕಿಳಿಯಲಿವೆ. ಈವರೆಗೆ ಗರಿಷ್ಠ 6 ತಂಡಗಳು ಆಡಿದ್ದವು. 1984, 1986, 1991 ರಲ್ಲಿ ತಲಾ 3 ತಂಡಗಳು ಕಣಕ್ಕಿಳಿದಿದ್ದವು. ಕೆಲ ಆವೃತ್ತಿಗಳಲ್ಲಿ 4, 5 ತಂಡಗಳೂ ಆಡಿವೆ.

ಎಲ್ಲೆಲ್ಲಿ ಪಂದ್ಯಗಳು

ಸ್ಥಳ: ದುಬೈ ಕ್ರೀಡಾಂಗಣ ಪಂದ್ಯ: 11 ಆಸನ ಸಾಮರ್ಥ್ಯ: 25000

ಸ್ಥಳ: ಅಬುಧಾಬಿ ಕ್ರೀಡಾಂಗಣ ಪಂದ್ಯ: 08 ಆಸನ ಸಾಮರ್ಥ್ಯ: 20000

ಭಾರತ vs ಪಾಕಿಸ್ತಾನ 3 ಸಲ ಮುಖಾಮುಖಿ?

ಪಹಲ್ಗಾಂ ಉಗ್ರ ದಾಳಿ ಹಾಗೂ ಆ ಬಳಿಕ ನಡೆದ ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಸೆ.14ರಂದು ಗುಂಪು ಹಂತದಲ್ಲಿ ಉಭಯ ತಂಡಗಳು ಸೆಣಸಾಟಡಲಿವೆ. ಈ ಬಾರಿ ಟೂರ್ನಿಯಲ್ಲಿ ಭಾರತ-ಪಾಕ್ ಒಟ್ಟು 3 ಬಾರಿ ಪರಸ್ಪರ ಎದುರಾಗುವ ಸಾಧ್ಯತೆಗಳಿವೆ. ಗುಂಪು ಹಂತದಲ್ಲಿ ಗೆದ್ದು, ಸೂಪರ್ -4 ಪ್ರವೇಶಿಸಿದರೆ ಅಲ್ಲೂ ಇತ್ತಂಡಗಳು ಮುಖಾಮುಖಿಯಾಗಲಿವೆ. ಸೂಪರ್ -4ನಲ್ಲಿ ಅಗ್ರ-2 ಸ್ಥಾನ ಪಡೆದರೆ ಫೈನಲ್‌ನಲ್ಲೂ ಭಾರತ-ಪಾಕಿಸ್ತಾನ ತಂಡಗಳು ಸೆಣಸಾಡಬಹುದು.

ಭಾರತ 8, ಶ್ರೀಲಂಕಾ 6 ಸಲ ಚಾಂಪಿಯನ್

ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ಏಷ್ಯಾಕಪ್ ಈವರೆಗೂ 16 ಬಾರಿ ಆಯೋಜನೆಗೊಂಡಿವೆ. ಈ ಪೈಕಿ ಭಾರತ 8 ಬಾರಿ ಟ್ರೋಫಿ ಗೆದ್ದಿದ್ದು, 3 ಆವೃತ್ತಿಗಳಲ್ಲಿ ರನ್ನರ್-ಅಪ್ ಆಗಿದೆ. ಶ್ರೀಲಂಕಾ 6, ಪಾಕಿಸ್ತಾನ 2 ಬಾರಿ ಚಾಂಪಿಯನ್ ಆಗಿವೆ.

ಸೆಪ್ಟೆಂಬರ್ 15ರ ಯುಎಇ-ಒಮಾನ್ (ಸಂಜೆ 5.30ಕ್ಕೆ) ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿವೆ. ಸೋನಿ ಸ್ಪೋರ್ಟ್ಸ್, ಸೋನಿ ಲೈವ್‌ನಲ್ಲಿ ಪಂದ್ಯಗಳು ನೇರಪ್ರಸಾರವಾಗಲಿವೆ.