ಸಚಿನ್ ತೆಂಡೂಲ್ಕರ್ ಹೊಸ ಅಧ್ಯಾಯ ಆರಂಭಗೊಳ್ಳುತ್ತಿದೆ. ಹಲವು ಕಂಪನಿಗಳು, ಸ್ಟಾರ್ಟ್ಅಪ್‌ಗಳಲ್ಲಿ ಹೂಡಿಕೆ ಮಾಡಿರುವ ಸಚಿನ್ ತೆಂಡೂಲ್ಕರ್ ಇದೀಗ ದಿಗ್ಗಜ ಉದ್ಯಮಿಯಾಗುತ್ತ ಸಾಗಿದ್ದಾರೆ.ಸಚಿನ್ ಹೂಡಿಕೆ ಕಂಪನಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ.
ಮುಂಬೈ (ಆ.16) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನಿಂದ ವಿದಾಯದ ಬಳಿಕ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಸಣ್ಣ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇನ್ನು ಜಾಹೀರಾತು, ಬ್ರ್ಯಾಂಡ್ ಪ್ರಮೋಶನ್ ಸೇರಿದಂತೆ ಹಲವು ಮೂಲಗಳಿಂದ ಸಚಿನ್ ತೆಂಡೂಲ್ಕರ್ ಆದಾಯಗಳಿಸುತ್ತಿದ್ದಾರೆ. ಇದೀಗ ಸಚಿನ್ ದಿಗ್ಗಜ ಉದ್ಯಮಿಯಾಗುತ್ತ ಸಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಹೂಡಿಕೆ ಮಾಡಿರುವ ಕಂಪನಿ ಬರೋಬ್ಬರಿ 660 ಕೋಟಿ ರೂಪಾಯಿ ಐಪಿಒ ಮೂಲಕ ಷೇರುಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ.
ಪರ್ಪಲ್ ಸ್ಟೈಲ್ ಐಪಿಒ
ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಆಗಿರುವ ಪೆರ್ನಿಯಾಸ್ ಪಾಪ್-ಅಪ್ ಶಾಪ್ (Pernia Pop-Up Shop) ಮಾತೃ ಸಂಸ್ಥೆ ಪರ್ಪಲ್ ಸ್ಟೈಲ್ ಇದೀಗ ಷೇರುಮಾರುಕಟ್ಟೆಯತ್ತ ಹೆಜ್ಜೆ ಇಟ್ಟಿದೆ. ವಿಶೇಷ ಅಂದರೆ ಈ ಪರ್ಪಲ್ ಸ್ಟೈಲ್ ಸಂಸ್ಥೆಯಲ್ಲಿ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟ ಶಾರುಖ್ ಖಾನ್, ನಟಿ ಮಾಧುರಿ ದೀಕ್ಷಿತ್ ಹೂಡಿಕೆ ಮಾಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಬರೋಬ್ಬರಿ 660 ಕೋಟಿ ರೂಪಾಯಿ ಮೌಲ್ಯದ ಐಪಿಎ ಮೂಲಕ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.
ಸೆಬಿಗೆ ಅರ್ಜಿ ಸಲ್ಲಿಸಿದ ಸಚಿನ್ ಕಂಪನಿ
ಪರ್ಪಲ್ ಸ್ಟೈಲ್ ಕಂಪನಿ ಐಪಿಒ ಮೂಲಕ ಷೇರುಮಾರುಕಟ್ಟೆಗೆ ಎಂಟ್ರಿಕೊಡಲು ತನ್ನ ದಾಖಲೆಗಳೊಂದಿಗೆ ಭಾರತೀಯ ಷೇರುಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI)ಗೆ ಅರ್ಜಿ ಸಲ್ಲಿಸಿದೆ. 2026ರ ಜನವರಿಯಲ್ಲೇ ಐಪಿಒ ಲಾಂಚ್ ಮಾಡಲು ಸೆಬಿ ಕೂಡ ಅನುಮೋದನೆ ನೀಡಿತ್ತು. ಸದ್ಯ 660 ಕೋಟಿ ರೂಪಾಯಿ ಮೌಲ್ಯದ ಹೊಸ ಷೇರುಗಳ ವಿತರಣೆ ಮಾತ್ರ ಒಳಗೊಂಡಿದೆ. ಇದರಲ್ಲಿ ಹಾಲಿ ಹೂಡಿಕೆದಾರರು ಷೇರುಗಳ ಮಾರಾಟ ಮಾಡುವ ಆಫರ್ ಫಾರ್ ಸೇಲ್(OFS) ಇರುವುದಿಲ್ಲ.
ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ಸಂಸ್ಥೆಯಲ್ಲಿ ಪಾಲುಹೊಂದಿದ್ದಾರೆ. ಸದ್ಯ ಕಂಪನಿಯ ಮೌಲ್ಯ 3662 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಐಪಿಒ ಮೂಲಕ ಬಂಡವಾಳ ಸಂಗ್ರಹ ಮಾಡಿ ಮೂಲಭೂತ ಸೌಕರ್ಯ ಹಾಗೂ ವಹಿವಾಟು ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಪರ್ಪಲ್ ಸ್ಟೈಲ್ ಹೇಳಿಕೊಂಡಿದೆ. 2020ರಲ್ಲಿ 45 ಕೋಟಿ ರೂಪಾಯಿ ಆದಾಯ ಹೊಂದಿದ್ದ ಕಂಪನಿ 2024ರ ವೇಳೆಗೆ 508 ಕೋಟಿ ರೂಪಾಯಿಗೆ ತಲುಪಿತ್ತು.
ಐಪಿಎ ಮೂಲಕ ಷೇರುಮಾರುಕಟ್ಟೆಗೆ ಸಚಿನ್ ಹೂಡಿಕೆ ಮಾಡಿದ ಕಂಪನಿ ಲಗ್ಗೆ ಇಡುತ್ತಿದೆ. ಈ ಮೂಲಕ ಸಚಿನ್ ದಿಗ್ಗಜ ಉದ್ಯಮಿಯಾಗುತ್ತ ಸಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಇದರ ಜೊತೆ ಇತರ ಕೆಲ ಕಂಪನಿಗಳಲ್ಲೂ ಹೂಡಿಕೆ ಮಾಡಿ ಆದಾಯಗಳಿಸುತ್ತಿದ್ದಾರೆ.


